ಬೆಂಗಳೂರು,ನ.28– ಸಚಿವ ಸಂಪುಟ ಪುನರ್ ರಚನೆಗೆ ಒತ್ತಡಗಳು ಹೆಚ್ಚುತ್ತಿದ್ದು, ದೆಹಲಿಯಲ್ಲಿ ನಾಳೆ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆಯಿದೆ. ಬೆಳಗಾವಿ ವಿಧಾನಮಂಡಲದ ಅಧಿವೇಶನ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸಂಪುಟ ಪುನರ್ ರಚನೆಯ ಚರ್ಚೆಗಳು ಕುತೂಹಲ ಕೆರಳಿಸಿವೆ.
ಎಐಸಿಸಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲಿಗೆ ತೆರಳಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಸಂಜೆ ದೆಹಲಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಆಯ್ಕೆಯ ವೇಳೆ ಎಐಸಿಸಿ ದೆಹಲಿಯಲ್ಲಿ ನಡೆದ ಒಂದು ವಾರದ ಸಂಧಾನದ ಪ್ರಕ್ರಿಯೆಯಲ್ಲಿ ಅಧಿಕಾರ ಹಂಚಿಕೆ ಸೂತ್ರ ಸಿದ್ಧವಾಗಿತ್ತು ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿ ಸಮಾಧಾನಪಡಿಸಲಾಗಿತ್ತು.
ಲೋಕಸಭೆ ಚುನಾವಣೆವರೆಗೂ ಈ ವ್ಯವಸ್ಥೆ ಮುಂದುವರೆಯಲಿದೆ. ನಂತರ ಹೈಕಮಾಂಡ್ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೆ.ಸಿ.ವೇಣುಗೋಪಾಲ್ ಸ್ಪಷ್ಟವಾಗಿ ಹೇಳಿದ್ದರು.
ಈಗ ಲೋಕಸಭಾ ಚುನಾವಣೆಯೂ ಮುಗಿದಿದ್ದು, ವಿಧಾನಸಭೆಯ ಉಪಚುನಾವಣೆಗಳೂ ಮುಗಿದಿವೆ. ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ. ಹೀಗಾಗಿ ಈ ಹಿಂದೆ ಅಧಿಕಾರ ಹಂಚಿಕೆ ಸೂತ್ರದಂತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ನಾಯಕರಿಗೆ ಒತ್ತಡ ಹೇರುತ್ತಿದ್ದಾರೆ.
ಈ ನಡುವೆ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಲು ಸಾಕಷ್ಟು ಮಂದಿ ನಾ ಮುಂದು, ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದಾರೆ. ವಿನಯ್ ಕುಲಕರ್ಣಿ, ಲಕ್ಷ್ಮಣ್ ಸವದಿ, ಕೆ.ವೈ.ನಂಜೇಗೌಡ, ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಬೇಳೂರು ಗೋಪಾಲಕೃಷ್ಣ, ಅಜಯ್ಸಿಂಗ್, ವಿಜಯಾನಂದ ಕಾಶಪ್ಪನವರ್, ಬಂಗಾರಪೇಟೆ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮಂದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಲಾಬಿ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಆರೇಳು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು, ಕೆಲವರ ಖಾತೆಗಳ ಬದಲಾವಣೆ ಮಾಡಬೇಕು ಎಂಬ ಚರ್ಚೆಗಳಿವೆ. ಈ ಹಿಂದೆ ವಿವಾದಿತ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿದವರು ಇಲಾಖೆಯ ಕಾರ್ಯ ನಿರ್ವಹಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದವರು, ಸಂಕಷ್ಟ ಸಂದರ್ಭದಲ್ಲಿ ಪಕ್ಷ ಮತ್ತು ನಾಯಕತ್ವದ ಪರವಾಗಿ ನಿಲ್ಲದೇ ಇರುವವರನ್ನು ಸಂಪುಟದಿಂದ ಕೈಬಿಟ್ಟು ಕ್ರಿಯಾಶೀಲ ಹಾಗೂ ಯುವ ನಾಯಕತ್ವಕ್ಕೆ ಮಣೆ ಹಾಕುವ ಸಂಬಂಧ ಚರ್ಚೆಗಳಾಗುತ್ತಿವೆ ಎಂದು ಹೇಳಲಾಗಿದೆ.
ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳುತ್ತಲೇ ಒಳಗೊಳಗೇ ಕೆಲವರು ಸ್ಥಾನ ಗಿಟ್ಟಿಸಲು ಲಾಬಿ ನಡೆಸಿದರೆ ಇನ್ನು ಕೆಲವರು ಸಚಿವ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳಿದ್ದಾಗ್ಯೂ ಸೋಲು ಕಂಡಿರುವ ನಾಲ್ಕು ಕ್ಷೇತ್ರಗಳ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ. ಇದರಲ್ಲಿ ಕೆಲವರು ಅನಗತ್ಯವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿರುವುದು ಪಕ್ಷದ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಸಂಪುಟ ಪುನರ್ರಚನೆಗೆ ಕೈ ಇಟ್ಟರೆ ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾಬಹುದು ಎಂಬ ಆತಂಕದ ನಡುವೆಯೂ ಹೈಕಮಾಂಡ್ ಸೂಚನೆಯನ್ನು ಚಾಚೂ ತಪ್ಪದೇ ಪಾಲಿಸಲು ರಾಜ್ಯನಾಯಕರು ಮುಂದಾಗಿದ್ದಾರೆ. ಇಂದು, ನಾಳೆ ದೆಹಲಿಯಲ್ಲಿ ಈ ಕುರಿತು ಮಹತ್ವದ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.