ಬೆಂಗಳೂರು,ಡಿ.1- ಒಂದು ವೇಳೆ ನಾನು ವಿರೋಧ ಪಕ್ಷದ ನಾಯಕರ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ದಾಖಲೆಗಳಿದ್ದರೆ ಯಾವುದೇ ಶುಭಗಳಿಗೆ, ಮುಹೂರ್ತ ನೋಡದೇ ಒಂದು ಕ್ಷಣವೂ ಕಾಯದೇ ಬಿಡುಗಡೆ ಮಾಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಬಸನಗೌಡ ಪಾಟೀಲ್ ಯತ್ನಾಳ್ಗೆ ಬಹಿರಂಗ ಸವಾಲು ಹಾಕಿದ್ದಾರೆ.
ವಿಜಯೇಂದ್ರ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವುದಕ್ಕೆ ನನ್ನ ಬಳಿ ವಿಡಿಯೋ ಮತ್ತು ಕೆಲವು ದಾಖಲೆಗಳಿವೆ ಎಂದಿರುವ ಯತ್ನಾಳ್ ವಿರುದ್ಧ ಕೆಂಡಮಂಡಲಾರದ ವಿಜಯೇಂದ್ರ, ಅಂತಹ ದಾಖಲೆಗಳಿದ್ದರೆ ಅವರು ಶುಭ ಮುಹೂರ್ತಕ್ಕೆ ಕಾಯುವುದೇಕೆ ತಕ್ಷಣವೇ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ರಾಜಕಾರಣ ಮಾಡಬೇಕಾದ ಅವಶ್ಯಕತೆ ನನ್ನಗಿಲ್ಲ. ನಾನು ರಾಜ್ಯಾಧ್ಯಕ್ಷನಾಗಿ ಪಕ್ಷದ ಸಂಘಟನೆ ಹಾಗೂ ಬಲಪಡಿಸುವ ಬಗ್ಗೆ ಗಮನಹರಿಸಿದ್ದೇನೆ. ಯತ್ನಾಳ್ಗೆ ಖಂಡಿತ ಒಳ್ಳೆಯದಾಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ವಿಜಯೇಂದ್ರ ಬದಲಾವಣೆ ಮಾಡುವುದಕ್ಕೆ ಅವರ ಜೊತೆ ಇನ್ನೂ ಹತ್ತು ಜನರನ್ನು ಸೇರಿಸಿಕೊಳ್ಳಲಿ ನನಗೇನು ತೊಂದರೆ ಇಲ್ಲ. ಈಗಲೂ ಮನವಿ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ನಮ ನಡವಳಿಕೆ ಸಂಘಟನೆಗೆ ಪೂರಕವಾಗಿ ಇರಬೇಕು. ಅದು ಬಿಟ್ಟು ತೊಂದರೆ ಕೊಡುವ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದರು.
ಇದೇ ವೇಳೆ ಯತ್ನಾಳ್ ಜೊತೆ ಪರ ನಿಂತಿರುವ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ವಿರುದ್ಧವೂ ವಿಜಯೇಂದ್ರ ಕಿಡಿಕಾರಿದರು.
ರಾಜ್ಯದಲ್ಲಿ ಸಂಘಟನಾ ಪರ್ವ ನಡೆಯುತ್ತಿದೆ. ಪಕ್ಷದ ವರಿಷ್ಠರ ಭೇಟಿ ಮಾಡಿದ್ದೇನೆ. ಮೂರು ಕ್ಷೇತ್ರಗಳ ಹಿನ್ನಡೆ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ತಿಳಿಸಿದ್ದೇನೆ ಎಂದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು, ಆದರೆ ಅವರಿಗೆ ಅರ್ಥ ಆಗುತ್ತಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಬೈಯುವುದೇ ಒಂದು ಪದವಿ ಅಂದುಕೊಂಡಿದ್ದಾರೆ ಎಂದು ಟೀಕಿಸಿದರು. ಯತ್ನಾಳ್ ಅವರ ಉಚ್ಛಾಟನೆ ಕಾರ್ಯಕರ್ತರ ಅಪೇಕ್ಷೆ ಇದೆ. ಬಿಗಿ ಕ್ರಮ ಆಗಬೇಕು. ಇದರ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಅವರು ಹೇಳಿದರು.
ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಗೆದ್ದಿರುವ ಭರದಲ್ಲಿ ಮೊನ್ನೆ ವಕ್‌್ಫ ವಿಷಯದಲ್ಲಿ ಫ್ರೀಡಂಪಾರ್ಕ್ನಲ್ಲಿ ಹೋರಾಟ ನಡೀತ್ತಿತ್ತು. ಚಂದ್ರಶೇಖರ್ ಸ್ವಾಮೀಜಿಗಳ ಬಗ್ಗೆ ಸರ್ಕಾರ ಎಫ್ಐರ್ ದಾಖಲು ಮಾಡಿದೆ. ಸ್ವಾಮೀಜಿಗಳು ಕ್ಷಮೆ ಕೂಡ ಕೇಳಿದ್ದಾರೆ. ಸ್ವಾಮೀಜಿಗಳ ದಾಟಿ ಅಲ್ಪಸಂಖ್ಯಾತರ ಓಲೈಕೆಯಿಂದ ಮಠಮಂದಿರಗಳ ಆಸ್ತಿ ಕಿತ್ತುಕೊಳ್ಳಲಾಗುತ್ತಿದೆ ಎಂದು ನೋವಿನಿಂದ ಹೇಳಿದ್ದಾರೆ. ಆದರೆ ಅವರ ವಿರುದ್ಧ ಎಫ್ಐಆರ್ ಹಾಕಿರುವುದು ನಿಜಕ್ಕೂ ಖಂಡನೀಯ ಎಂದರು. ರಾಜ್ಯ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವವರಿಗೆ ತೊಂದರೆ ಕೊಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.