ಬೆಂಗಳೂರು,ಡಿ.2- ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ರಾಜಕೀಯ ಇದೀಗ ಮತ್ತೊಂದು ಮಜಲು ತಲುಪಿದ್ದು, ಪಕ್ಷದ ನಾಯಕರ ವಿರುದ್ದವೇ ಬಹಿರಂಗ ಹೇಳಿಕೆ ನೀಡುತ್ತಿದ್ದ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಕೇಂದ್ರ ಶಿಸ್ತು ಸಮಿತಿ 10 ದಿನದೊಳಗೆ ಉತ್ತರಿಸುವಂತೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಕೇಂದ್ರ ಬಿಜೆಪಿ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. 10 ದಿನಗಳ ಒಳಗಾಗಿ ಉತ್ತರಿಸಬೇಕು. ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿಯೂ ಯತ್ನಾಳ್ಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಈ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ.
ಹತ್ತು ದಿನಗಳೊಳಗೆ ಸ್ಪಷ್ಟೀಕರಣ ಕೊಡದಿದ್ದಲ್ಲಿ ನಿಮ ತಪ್ಪು ನೀವೇ ಒಪ್ಪಿಕೊಂಡಂತೆ. ನಾವು ಕ್ರಮಕ್ಕೆ ಮುಂದಾಗಲು ನಿಮ ಒಪ್ಪಿಗೆ ಇದೆಯೆಂದು ಭಾವಿಸುತ್ತೇವೆ. ಈ ಹಿಂದೆಯೂ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ತಪ್ಪು ಸರಿಪಡಿಸಿಕೊಳ್ಳೋದಾಗಿ ಭರವಸೆ ಕೊಟ್ಟಿದ್ದಿರಿ. ಆದರೆ ಯಾವುದೂ ಬದಲಾವಣೆ ಆಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿ ಪಕ್ಷದ ಅನುಮತಿಯಿಲ್ಲದೇ ವಕ್‌್ಫ ಭೂ ಅಕ್ರಮಗಳ ವಿರುದ್ಧ ರಾಜ್ಯದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವ ಯತ್ನಾಳ ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಭಿಯಾನದ ವೇಳೆ ಯತ್ನಾಳ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷರ ವಿರುದ್ಧ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷಕ್ಕೆ ಮುಜುಗರದ ಸನ್ನಿವೇಶ ಉಂಟು ಮಾಡಿತ್ತು.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿಯು ಶಾಸಕ ಬಸನಗೌಡ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಿ ಹತ್ತು ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.
ಪಕ್ಷದ ಹಿರಿಯ ಮುಖಂಡರಾದ ನೀವು ಬಿಜೆಪಿಯ ರಾಜ್ಯ ನಾಯಕತ್ವದ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಆಕ್ಷೇಪಾರ್ಹವಾಗಿವೆ. ಈ ಹಿಂದೆ ನೀಡಿದ್ದ ಭರವಸೆಗಳನ್ನು ಮೀರಿ ಮತ್ತೆ ಬಿಜೆಪಿ ನಾಯಕತ್ವ ಟೀಕಿಸುತ್ತಿರುವುದು ಶಿಸ್ತು ಉಲಂಘನೆಗೆ ಕಾರಣವಾಗುತ್ತಿದೆ. ನಿಮ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಯತ್ನಾಳ್ಗೆ ನೀಡಲಾದ ಶೋಕಾಸ್ ನೋಟಿಸ್ನಲ್ಲಿ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಕೇಳಿದ್ದಾರೆ.
ಹೈಕಮಾಂಡ್ ನಮ ಪರ ಇದೆ ಎನ್ನುತ್ತಿದ್ದ ಯತ್ನಾಳ್ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ಸದ್ಯಕ್ಕೆ ವಿಜಯೇಂದ್ರ ಮೇಲುಗೈ ಸಾಧಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನೀಡಿದ್ದ ಬಹಿರಂಗ ಹೇಳಿಕೆಗಳ ಕುರಿತು ಹೈಕಮಾಂಡ್ ಗರಂ ಆಗಿದೆ.
ನೋಟಿಸ್ನಲ್ಲೇನಿದೆ? :
ರಾಜ್ಯ ಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನೀವು (ಬಸನಗೌಡ ಪಾಟೀಲ್ ಯತ್ನಾಳ್) ಮಾಡುತ್ತಿರುವ ನಿರಂತರ ವಾಗ್ದಾಳಿ ಮತ್ತು ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸುತ್ತಿರುವ ಬಗ್ಗೆ ಪಕ್ಷದ ವಿವಿಧ ವೇದಿಕೆಗಳಲ್ಲಿ ವರದಿಯಾಗಿದೆ. ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಎಲ್ಲಾ ವಿಷಯಗಳ ಬಗ್ಗೆ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಸಾರ್ವಜನಿಕವಾಗಿ ನೀವು ಹೇಳಿಕೆಗಳನ್ನು ನೀಡುತ್ತಿರುವುದು ಮತ್ತು ನಿಲುವುಗಳನ್ನು ವ್ಯಕ್ತಪಡಿಸುತ್ತಿರುವುದು ಮಾಧ್ಯಮಗಳಲ್ಲಿ ಮತ್ತು ವಿವಿಧ ಪಕ್ಷದ ವೇದಿಕೆಗಳಲ್ಲಿ ವರದಿಯಾಗಿದೆ.
ಈ ಹಿಂದೆಯೂ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆಗ ನೀವು ಸದ್ವರ್ತನೆಯ ಭರವಸೆ ನೀಡಿದ್ದರೂ ಅಶಿಸ್ತಿನ ಕೃತ್ಯಗಳು ನಿಮಿಂದ ಅವ್ಯಾಹತವಾಗಿ ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಇದು ಪಕ್ಷದ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ನಿಮ ಹಿರಿತನ ಮತ್ತು ಪಕ್ಷದಲ್ಲಿನ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು, ಈ ಹಿಂದೆ ನೀವು ಸಲ್ಲಿಸಿದ ವಿವರಣೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿಯು ಮೃದುವಾದ ದೃಷ್ಟಿಕೋನವನ್ನು ತೆಗೆದುಕೊಂಡಿತ್ತು ಎಂದು ಶೋಕಾಸ್ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ನಿಮ ವಿರುದ್ಧ ಶಿಸ್ತು ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಿ. ಹತ್ತು ದಿನಗಳ ಒಳಗೆ ಪ್ರತಿಕ್ರಿಯೆ ನೀಡಬೇಕು. ಈ ಸಮಯದೊಳಗೆ ನಿಮ ವಿವರಣೆಯನ್ನು ಸಲ್ಲಿಸದಿದ್ದಲ್ಲಿ, ಕೇಂದ್ರ ಶಿಸ್ತು ಸಮಿತಿಯು ನಿಮಗೆ ಹೇಳಲು ಏನೂ ಇರುವುದಿಲ್ಲ. ಈ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಮುಂದುವರಿಯುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ಶೋಕಾಸ್ ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ.
ಏತನಧ್ಯೆ, ವಿಜಯೇಂದ್ರ ತಂಡ ವರಿಷ್ಠರನ್ನು ಭೇಟಿಯಾಗಿ ಬಂದ ಬೆನ್ನಲ್ಲೇ ಯತ್ನಾಳ್ ಬಣ ಕೂಡ ಹೈಕಮಾಂಡ್ ಭೇಟಿಗೆ ಸಮಯ ಕೇಳಿದೆ ಎನ್ನಲಾಗುತ್ತಿದೆ. ಒಂದೆಡೆ, ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಯತ್ನಾಳ್ ತಂಡದ ವಿರುದ್ಧ ರಣಕಹಳೆ ಮೊಳಗಿಸಲು ವಿಜಯೇಂದ್ರ ತಂಡ ರೆಡಿಯಾಗುತ್ತಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ, ದಾವಣಗೆರೆ ಸಮಾವೇಶಕ್ಕೆ ತಿರುಗೇಟು ನೀಡಲು ಹಿಂದೂ ಸಮಾವೇಶ ಆಯೋಜಿಸಲು ಹೊರಟಿದೆ ಎನ್ನಲಾಗಿತ್ತು. ಇದೀಗ ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಯತ್ನಾಳ್ಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದೆ.
ಉತ್ತರ ನೀಡುತ್ತೇನೆ : ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಸದಸ್ಯರು ಶೋಕಾಸ್ ನೋಟಿಸ್ ನೀಡಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿಯ ಸ್ಥಿತಿಯ ಬಗ್ಗೆ ಹೈಕಮಾಂಡ್‌ಗೆ ವಿವರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್‌ಗೆ ಉತ್ತರ ನೀಡುತ್ತೇನೆ. ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ಅವರ ಮುಂದೆ ಪ್ರಸ್ತುತಪಡಿಸುತ್ತೇನೆ.
ಹಿಂದುತ್ವದ ಪರ ಹೋರಾಟ, ಭ್ರಷ್ಟಾಚಾರದ ವಿರುದ್ಧದ ಹೋರಾಟ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ವಂಶ ರಾಜಕಾರಣದ ವಿರುದ್ಧದ ಹೋರಾಟ ಸಂಬಂಧ ನನ್ನ ಬದ್ಧತೆ ಅಚಲವಾಗಿ ಇರಲಿದೆ ಎಂದು ಯತ್ನಾಳ್ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ, ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಸತತ ಹೇಳಿಕೆಗಳನ್ನು ನೀಡುವುದರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ.