Friday, April 4, 2025
Homeಬೆಂಗಳೂರುಜಿಟಿಜಿಟಿ ಮಳೆಯಿಂದ ಥಂಡಾಹೊಡೆದಿದ್ದ ಬೆಂಗಳೂರಿಗರು ಇಂದು ಕೊಂಚ ನಿರಾಳ

ಜಿಟಿಜಿಟಿ ಮಳೆಯಿಂದ ಥಂಡಾಹೊಡೆದಿದ್ದ ಬೆಂಗಳೂರಿಗರು ಇಂದು ಕೊಂಚ ನಿರಾಳ

Cyclone Fengal

ಬೆಂಗಳೂರು,ಡಿ.3- ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಇಂದು ಕಡಿಮೆಯಾಗಿದೆ.ಫೆಂಗಲ್‌ ಚಂಡಮಾರುತದ ಪ್ರಭಾವದಿಂದ ಕಳೆದ ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಪದೇಪದೇ ಜಿಟಿಜಿಟಿ ಮಳೆಯಾಗಿ ವಾತಾವರಣ ತಂಪಾಗಿತ್ತು. ಇದರಿಂದ ಮಳೆ ಹಾಗೂ ಚಳಿಯಿಂದ ಜನರು ತತ್ತರಿಸಿ ಹೋಗಿದ್ದರು.

ಆದರೆ ಇಂದು ಬೆಳಿಗ್ಗೆಯಿಂದ ಮಳೆ ಹಲವೆಡೆ ನಿಂತಿದ್ದು, ಭಾಗಶಃ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಕೆಲವೆಡೆ ಮಾತ್ರ ಇಂದು ಬೆಳಿಗ್ಗೆ ತುಂತುರು ಮಳೆ ಮುಂದುವರೆದಿತ್ತು.

ನಗರದಲ್ಲಿ ಭಾನುವಾರ ಆರಂಭವಾದ ಮಳೆ ಇಂದು ಬೆಳಗಿನವರೆಗೂ ಮುಂದುವರೆದಿತ್ತು. ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ರಜೆ ನೀಡಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಲ್‌ಕೆಜಿ, ಯುಕೆಜಿ, ಅಂಗನವಾಡಿ ಮಕ್ಕಳಿಗೆ ಮಾತ್ರ ರಜೆ ನೀಡಲಾಗಿದೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತ ದುರ್ಬಲಗೊಂಡು, ವಾಯುಭಾರ ಕುಸಿತವಾಗಿ ಮಾರ್ಪಟ್ಟಿತ್ತು. ಈಗಾಗಲೇ ಅದು ಅರಬ್ಬೀಸಮುದ್ರ ಪ್ರವೇಶಿಸಿದೆ. ಹೀಗಾಗಿ ಮೋಡ ಕವಿದ ವಾತಾವರಣ ಇಳಿಕೆಯಾಗುತ್ತಿದ್ದು, ಬಿಸಿಲು ಅಲ್ಲಲ್ಲಿ ಕಂಡುಬರುತ್ತಿದೆ.

ಹವಾಮಾನ ಮುನ್ಸೂಚನೆ ಪ್ರಕಾರ, ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ, ಮಲೆನಾಡು ಭಾಗದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದ್ದು, ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಬೆಳೆ ಹಾನಿ :
ಮುಂಗಾರು ಹಂಗಾಮಿನ ಭತ್ತ, ರಾಗಿ ಸೇರಿದಂತೆ ಹಲವು ಬೆಳೆಗಳು ನಿರಂತರವಾಗಿ ಬಿದ್ದ ಜಿಟಿಜಿಟಿ ಮಳೆಗೆ ಹಾನಿಗೀಡಾಗಿವೆ. ಕೊಯ್ಲು ಮಾಡಿದ ಬೆಳೆಗಳು ನೀರಿನಲ್ಲಿ ನೆನೆದು ಮೊಳಕೆಯೊಡೆಯುವ ಪರಿಸ್ಥಿತಿ ಇದ್ದರೆ ಬೆಳೆದು ನಿಂತಿದ್ದ ಭತ್ತ, ರಾಗಿ ಕಟಾವು ಮಾಡಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ತಂಪಾದ ಗಾಳಿಗೆ ಭತ್ತ, ರಾಗಿ ನೆಲಕ್ಕುರುಳಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ರೈತರಿಗೆ ಉಂಟಾಗಿದೆ.

RELATED ARTICLES

Latest News