Thursday, December 19, 2024
Homeಬೆಂಗಳೂರುಬೆಂಗಳೂರಿಗರಿಗೆ 'ಕರೆಂಟ್ ಶಾಕ್‌' ನೀಡಲು ಮುಂದಾದ ಬೆಸ್ಕಾಂ

ಬೆಂಗಳೂರಿಗರಿಗೆ ‘ಕರೆಂಟ್ ಶಾಕ್‌’ ನೀಡಲು ಮುಂದಾದ ಬೆಸ್ಕಾಂ

Bescom proposes tariff hike of 67 paise per unit for 2025-26 in Bengaluru

ಬೆಂಗಳೂರು,ಡಿ.6- ಬೆಸ್ಕಾಂ ತನ್ನ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ ಶಾಕ್‌ ನೀಡಲು ಮುಂದಾಗಿದ್ದು, ಮುಂದಿನ ಮೂರು ವರ್ಷಗಳಿಗೆ ವಿದ್ಯುತ್‌ ದರ ಏರಿಕೆ ಮಾಡಲು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಪ್ರಸ್ತಾವನೆಯಲ್ಲಿ ಪ್ರತಿ ಯೂನಿಟ್‌ಗೆ ಮೊದಲ ವರ್ಷ ಅಂದರೆ, 2025-26 ಕ್ಕೆ 67 ಪೈಸೆ, 2 ನೇ ವರ್ಷ 2026-27 ಕ್ಕೆ ಯೂನಿಟ್‌ಗೆ 74 ಪೈಸೆ ಹಾಗೂ ಮೂರನೇ ವರ್ಷವಾದ 2027-28 ಕ್ಕೆ 91 ಪೈಸೆ ವಿಸ್ತರಣೆ ಮಾಡಲು ಮನವಿ ಸಲ್ಲಿಸಿದೆ. ಒಂದು ವೇಳೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಒಪ್ಪಿಗೆ ಸೂಚಿಸಿದರೆ ಮುಂದಿನ ವರ್ಷದಿಂದಲೇ ದರ ಏರಿಕೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ಬೇಡಿಕೆಯ ಹೆಚ್ಚಳವನ್ನು ನಿರ್ವಹಿಸಲು ವಿದ್ಯುತ್‌ ಖರೀದಿಗೆ ತಗಲುವ ವೆಚ್ಚವನ್ನು ಪೂರೈಸಲು ಈ ವಿದ್ಯುತ್‌ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹು ವಾರ್ಷಿಕ ದರ ವಿಧಾನ ಅಳವಡಿಸಿಕೊಂಡ ನಂತರ ಮೊದಲ ಬಾರಿಗೆ ಪರಿಷ್ಕರಣೆ ಇದಾಗಿರಲಿದೆ.

ಇತರೆ ಎಸ್ಕಾಂಗಳು ಪ್ರಸ್ತಾವನೆ: ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನವೆಂಬರ್‌ 30 ಕೊನೆಯ ದಿನವಾಗಿತ್ತು. ಆ ಗಡುವಿನೊಳೆ ಬೆಸ್ಕಾಂ ಮಾತ್ರವಲ್ಲದೇ ರಾಜ್ಯದ ಇತರೆ ಎಸ್ಕಾಂಗಳು ಕೂಡ ದರ ಏರಿಕೆಗೆ ಪ್ರಸ್ತಾವನೆ ಕೊಟ್ಟಿವೆ. ದರ ಏರಿಕೆಯು ಒಟ್ಟಿಗೆ ಬಹುತೇಕ ಏಕ ಮಾದರಿಯಲ್ಲಿಯೇ ಆಗಿದೆ.

ಸದ್ಯ ದರ ಏರಿಕೆ ಸಂಬಂಧ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಉದ್ಯಮಿಗಳು, ವ್ಯಾಪಾರಸ್ಥರು, ಸಾರ್ವಜನಿಕರು, ತಜ್ಞರ ಸಭೆ ನಡೆಸಿ ಅಹವಾಲು ಸ್ವೀಕಾರ ಮಾಡಲಿದೆ. ಪರ ವಿರೋಧಗಳನ್ನು ಆಲಿಸಲಿದೆ. ಆ ಬಳಿಕ ಮಾರ್ಚ್‌ನಲ್ಲಿ ದರ ಏರಿಕೆಯ ಬಗ್ಗೆ ಅಂತಿಮ ಆದೇಶ ಬರಲಿದೆ. ಏಪ್ರಿಲ್‌ 1ರಿಂದ ನೂತನ ದರ ಜಾರಿಯಾಗುವ ಸಾಧ್ಯತೆಗಳಿವೆ.

ಕೈಗಾರಿಕೆಗಳಿಂದ ವಿರೋಧ: ಮೂರು ವರ್ಷದ ದರ ಏರಿಕೆ ನಿರ್ಧಾರವನ್ನು ಒಮೆಗೆ ಮಾಡುವುದು ಸಮಂಜಸವಲ್ಲ. ಆಯಾ ಕಾಲಕ್ಕೆ ತಕ್ಕೆಂದು ತಜ್ಞರು, ಉದ್ಯಮಿಗಳ ಜತೆ ಚರ್ಚೆ ಮಾಡಿ ನಿರ್ಧಾರ ಮಾಡಬೇಕು ಎಂದು ಕೈಗಾರಿಕೋದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ನಂತರ ವಿಶೇಷವಾಗಿ ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಲ್ಲಿ ವಿದ್ಯುತ್‌ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ದರ ಏರಿಕೆ ನಿರ್ಧಾರ ಅಗತ್ಯ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವುದರಿಂದ ದರ ಏರಿಕೆ ಬಿಸಿ ಗೃಹ ಬಳಕೆ ಗ್ರಾಹಕರಿಗೆ ತಗಲುವುದು ಅನುಮಾನ. ಒಂದು ವೇಳೆ ವಿದ್ಯುತ್‌ ಬಳಕೆ ಶುಲ್ಕಕ್ಕಿಂತ ನಿಗದಿತ ಶುಲ್ಕ ಹೆಚ್ಚಳ ಮಾಡಿದರೆ ಗೃಹ ಬಳಕೆ ಗ್ರಾಹಕರೂ ದರ ಹೆಚ್ಚು ನೀಡಬೇಕಾಗುತ್ತದೆ.

RELATED ARTICLES

Latest News