Thursday, December 19, 2024
Homeರಾಜ್ಯಮೂಡಾ ಹಗರಣದಲ್ಲಿ ಮತ್ತೊಂದು ಟ್ವಿಸ್ಟ್, 2,800 ಕೋಟಿ ರೂ. ಅಕ್ರಮ ಪತ್ತೆ

ಮೂಡಾ ಹಗರಣದಲ್ಲಿ ಮತ್ತೊಂದು ಟ್ವಿಸ್ಟ್, 2,800 ಕೋಟಿ ರೂ. ಅಕ್ರಮ ಪತ್ತೆ

Another twist in Muda scam, Rs 2,800 crore illegality detected

ಬೆಂಗಳೂರು,ಡಿ.6- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದಲ್ಲಿ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ಸುಮಾರು 4921 ನಿವೇಶನಗಳಲ್ಲಿ ಅಕ್ರಮ ಎಸಗಿ 2,800 ಕೋಟಿ ರೂ. ಹಗರಣ ನಡೆದಿರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆಹಚ್ಚಿದೆ.

ಈ ಹಿಂದೆ ಲೋಕಾಯುಕ್ತ ತನಿಖಾ ಸಂಸ್ಥೆಗೆ ಇಡಿ ಬರೆದ ಪತ್ರದಲ್ಲಿ 1091 ನಿವೇಶನಗಳ ಅಕ್ರಮ ಎಸಗಿ 700 ಕೋಟಿ ಹಗರಣ ನಡೆದಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದರು. ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಯತೀಂದ್ರ, ಮುಡಾ ಅಧ್ಯಕ್ಷರಾಗಿದ್ದ ಮರಿಗೌಡ, ಪಿ.ರಾಜೀವ್, ಇಬ್ಬರು ಮಾಜಿ ಆಯುಕ್ತರು ಪ್ರಭಾವ ಬೀರಿ ಹಂಚಿಕೆ ಮಾಡಿರುವುದನ್ನು ಸಹ ಇಡಿ ಪತ್ತೆ ಮಾಡಿದೆ.

ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿದ್ದ ಎಸ್.ಜಿ. ದಿನೇಶ್ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಮುಡಾದಲ್ಲಿ ಪ್ರಭಾವಿಯಾಗಿದ್ದರು. ಸಿಎಂ ಜತೆಗಿನ ಪ್ರಭಾವ ಬಳಸಿಕೊಂಡು ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆ ಮಾಡಿಸಿದ್ದು, ಕೆಲವು ಸಹಿಗಳನ್ನು ನಕಲು ಮಾಡಿದ್ದಾರೆ.

ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಕೂಡ ಪಾರ್ವತಿ ಅವರ ಬದಲಿ ನಿವೇಶನ ಹಂಚಿಕೆ ಕಡತವನ್ನು ಸಂಬಂಧಪಟ್ಟ ವಿಭಾಗಕ್ಕೆ ವರ್ಗಾಯಿಸದೇ ತಾವೇ ನಿರ್ವಹಣೆ ಮಾಡಿದ್ದಾರೆ. ಅಧಿಕಾರಿಗಳ ಈ ನಡೆ ಪಾರ್ವತಿ ಅವರಿಗೆ ಉದ್ದೇಶಪೂರ್ವಕವಾಗಿ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಜಯರಾಮು ಅವರು ಮುಡಾದಿಂದ ಪಡೆದ ನಿವೇಶನಗಳಲ್ಲಿ ಒಂದು ನಿವೇಶನವನ್ನು ಮುಡಾ ಮಾಜಿ ಅಧ್ಯಕ್ಷ ಕೆ.ಮರಿಗೌಡ ತಮ ಪತ್ನಿ ಎಸ್.ಎ. ಜಯಶ್ರೀ ಹೆಸರಿನಲ್ಲಿ ಪಡೆದಿದ್ದಾರೆ. ಈ ವಿಚಾರವನ್ನು ಜಯರಾಮು ಒಪ್ಪಿಕೊಂಡಿದ್ದಾಗಿ ಇ.ಡಿ ತಿಳಿಸಿದೆ.ಕೆಲವು ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸೇರಿ ಮುಡಾದಲ್ಲಿ ಒಟ್ಟು 2800 ಕೋಟಿ ಅಕ್ರಮ ವೆಸಗಿದ್ದಾರೆ. ಕೇವಲ 50:50 ಅನುಪಾತವಷ್ಟೇಲ್ಲದೆ 60:40 ಅನುಪಾತದಲ್ಲೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಲೇಔಟ್ಗಳನ್ನೇ ನಿರ್ಮಿಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನಗಳನ್ನು ಭೂ ಸ್ವಾಧೀನ ಮಾಡಿಕೊಂಡು ಭೂ ಪರಿವರ್ತನೆ ಮಾಡದ ಲೇಔಟ್ಗಳಲ್ಲೂ ಅಕ್ರಮ ಮಾಡಿರುವುದನ್ನು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಕಾನೂನು ನಿಯಮಗಳ ಉಲ್ಲಂಘನೆ, ಕರ್ತವ್ಯ ಲೋಪ, ನಕಲಿ ದಾಖಲೆ ತಿದ್ದುಪಡಿ, ಸಾಕ್ಷ್ಯನಾಶ, ರಾಜಕೀಯ ಪ್ರಭಾವವೂ ಇದರಲ್ಲಿ ಸಾಕಷ್ಟು ಕಂಡುಬಂದಿದೆ.

ನಿವೇಶನ ಹಂಚಿಕೆ ನಡೆದಾಗ ಸಿದ್ದರಾಮಯ್ಯನವರು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದರೆ, ವಿಧಾನಪರಿಷತ್ ಸದಸ್ಯರಾಗಿರುವ ಯತೀಂದ್ರ ಅಂದು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಒಂದಿಲ್ಲೊಂದು ರೀತಿ ಅಧಿಕಾರದ ಪ್ರಭಾವ ಬಳಸಿಕೊಂಡೇ ಈ ವಂಚನೆ ನಡೆದಿದೆ ಎಂದು ಲೋಕಾಯುಕ್ತಕ್ಕೆ ಇ.ಡಿ ಬರೆದಿರುವ ಪತ್ರದಲ್ಲಿ ಇಂಚಿಂಚು ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

1905 ನಿವೇಶನ ಹಂಚಿಕೆ ಗೋಲ್ಮಾಲ್: ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ (ನಿವೇಶನ ಹಂಚಿಕೆ ಹಾಗೂ ಪರಿಹಾರ) ನಿಯಮಾವಳಿ 2009 ಹಾಗೂ 2015 ಅನ್ನು ಮುಡಾ ಉಲ್ಲಂಘಿಸಿದ್ದು, 1095 ನಿವೇಶನಗಳ ಹಂಚಿಕೆಯಲ್ಲಿ ಭಾರೀ ಪ್ರಮಾಣದ ನಿಯಮ ಉಲ್ಲಂಘನೆಯಾಗಿದೆ. ನಿವೇಶನ ಹಂಚಿಕೆಯಲ್ಲಿ ಮುಡಾ ಆಯುಕ್ತರು ನಿರ್ದಿಷ್ಟ ಮಾನದಂಡಗಳನ್ನು ಪಾಲಿಸದೆ ಇಚ್ಛಾನುಸಾರ ಅಕ್ರಮವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸರಕಾರಿ ಮಾರ್ಗಸೂಚಿ ದರ 400 ಕೋಟಿ ರೂ. ಮೌಲ್ಯದ 1095 ನಿವೇಶನಗಳನ್ನು ಬಹುತೇಕ ಭೂಮಿ ಕಳೆದುಕೊಂಡವರಿಗಿಂತ ಬೇನಾಮಿದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿಗಳಿಗೆ ಹಂಚಿಕೆ ಮಾಡಲಾಗಿದೆ.

50:50 ಅನುಪಾತದಲ್ಲಿ ನಿವೇಶನ ಹಂಚಿಕೆಯನ್ನು 2023ರ ಅಕ್ಟೋಬರ್ನಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ, 2024ರ ಮಾರ್ಚ್ನಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ 252 ನಿವೇಶನ ಹಂಚಲಾಗಿದೆ. ಈ ಅಕ್ರಮ ಮುಡಾದ ಅಂದಿನ ಅಧ್ಯಕ್ಷ ಕೆ.ಮರಿಗೌಡ ಹಾಗೂ ಆಯುಕ್ತ ಜಿ.ಟಿ. ದಿನೇಶ್ಕುಮಾರ್ ಮೌಖಿಕ ಸೂಚನೆ ಮೇರೆಗೆ ನಡೆದಿದೆ ಎಂದು ಇ.ಡಿ ತಿಳಿಸಿದೆ.

ಮುಡಾ ನಿವೇಶನಗಳನ್ನು ಅಕ್ರಮವಾಗಿ ಪಡೆದಿರುವವರ ಪೈಕಿ ಮುಡಾ ಉದ್ಯೋಗಿಗಳ ಸಂಬಂಧಿಕರು ಸೇರಿಕೊಂಡಿದ್ದಾರೆ. ಜತೆಗೆ, ನಿವೇಶನ ಹಂಚಿಕೆ ಹಾಗೂ ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡಲು ಮಾಜಿ ಆಯುಕ್ತ ಜಿ.ಟಿ. ದಿನೇಶ್ಕುಮಾರ್ಗೆ ಹಣ ನೀಡಿರುವುದು ಬಯಲಾಗಿದೆ ಎಂದು ಇ.ಡಿ ಹೇಳಿದೆ.

ಜಿ.ಟಿ. ದಿನೇಶ್ಕುಮಾರ್ ಕೋ ಆಪರೇಟಿವ್ ಸೊಸೈಟಿ ನಡೆಸುತ್ತಿರುವ ಜಯರಾಮು ಅವರಿಗೆ ನಿವೇಶನ ಹಂಚಿಕೆಗೆ ಸಹಕರಿಸಿ ಹಣ ಹಾಗೂ ಅಕ್ರಮ ಲಾಭ ಪಡೆದಿದ್ದಾರೆ. ಇದನ್ನು ತನ್ನ ಸಂಬಂಧಿಕರ ಹೆಸರಿನಲ್ಲಿ ಚರಾಸ್ತಿ/ಸ್ಥಿರಾಸ್ತಿ ಖರೀದಿಗೆ ಬಳಸಿದ್ದಾರೆ. ಇದಕ್ಕೆ ಪೂರಕವಾಗಿ ದಿನೇಶ್ ಕುಮಾರ್ ಹಾಗೂ ಅವರ ಬಾಮೈದ ತೇಜಸ್ಗೌಡ ಬಳಸುತ್ತಿದ್ದ ವಾಹನಗಳು ಜಯರಾಮು ಹೆಸರಿನಲ್ಲಿ ನೋಂದಣಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಇ.ಡಿ ಹೇಳಿದೆ.

ಅಕ್ರಮಕ್ಕೆ ಬಾಂಡ್ ದುರ್ಬಳಕೆ: ನಿವೇಶನ ಅಕ್ರಮ ಹಂಚಿಕೆ ಸಲುವಾಗಿ ಮುಡಾದಲ್ಲಿನ ಹೈ ಸೆಕ್ಯೂರಿಟಿ ಬಾಂಡ್ಗಳನ್ನು ದಿನೇಶ್ ಕುಮಾರ್ ಬಳಸಿಕೊಂಡಿದ್ದಾರೆ. ಅವರ ಆಪ್ತ ಸಹಾಯಕ ಪ್ರಶಾಂತ್ ರಾಜು ಹಲವು ಬಾಂಡ್ಗಳನ್ನು ವಿತ್ಡ್ರಾ ಮಾಡಿರುವುದು ಇದಕ್ಕೆ ಸಾಕ್ಷ್ಯ ನೀಡಿದೆ. ಹಲವು ಬಾಂಡ್ಗಳು ಕಳೆದು ಹೋಗಿರುವುದು ಗೊತ್ತಾಗಿದೆ.

ಮುಡಾ ಸಂಗ್ರಹದಲ್ಲಿದ್ದ ಐದು ಸಾವಿರ ಹೈಸೆಕ್ಯೂರಿಟಿ ಬಾಂಡ್ಗಳ ಪೈಕಿ 1946 ಲೆಕ್ಕಕ್ಕೆ ಸಿಗದಂತಾಗಿವೆ. ಉಳಿದಂತೆ 1368 ಬಾಂಡ್ ಬಳಕೆ ಮಾಡಲಾಗಿದೆ. ಸ್ಟಾಕ್ನಲ್ಲಿ 158 ಬಾಂಡ್ಗಳಿವೆ. 1528 ಮುಡಾದಲ್ಲಿ ಉಳಿದಿವೆ ಎಂದು ಇ.ಡಿ ಹೇಳಿದೆ.

ಜಮೀನು ಇಲ್ಲದೆ 17 ನಿವೇಶನ ಹಂಚಿಕೆ: ಮುಡಾದಿಂದ ಯಾವುದೇ ಭೂಮಿ ಒತ್ತುವರಿ ಮಾಡಿಕೊಳ್ಳದಿದ್ದ ವ್ಯಕ್ತಿ ಹೆಸರಿಗೂ 17 ನಿವೇಶನ ಹಂಚಿಕೆ ಮಾಡಲಾಗಿದೆ. ವಿಜಯನಗರ 3ನೇ ಹಂತದ ಸಿ ಬ್ಲಾಕ್ನ 5.09 ಎಕರೆ ಜಮೀನಿಗೆ ಸಂಬಂಧಿಸಿ ಲಷ್ಕರ್ ಮೊಹಲ್ಲಾ ನಿವಾಸಿ ಎಂ.ರವಿಕುಮಾರ್ ಹೆಸರಿಗೆ 17 ನಿವೇಶನ ಹಂಚಿಕೆ ಮಾಡಲಾಗಿದೆ. ವಾಸ್ತವದಲ್ಲಿ ರವಿಕುಮಾರ್ ಆ ಜಮೀನಿಗೆ ವಾರಸುದಾರನೇ ಅಲ್ಲ. ಹೀಗಾಗಿ, ಅಕ್ರಮದ ಉದ್ದೇಶದಿಂದಲೇ ನಿವೇಶನ ಹಂಚಲಾಗಿದೆ ಎಂದು ಇ.ಡಿ ತಿಳಿಸಿದೆ.

RELATED ARTICLES

Latest News