ಬೆಂಗಳೂರು,ಡಿ.7- ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಭರ್ಜರಿ ಗೆಲುವಿ ನಿಂದ ಬೀಗುತ್ತಿರುವ ಆಡಳಿತಾರೂಢ ಕಾಂಗ್ರೆಸ್, ತನ್ನ ಆಂತರಿಕ ಕಚ್ಚಾಟದಿಂದಲೇ ಯುದ್ಧಕ್ಕೂ ಮುನ್ನ ಶಸ್ತ್ರ ತ್ಯಾಗ ಮಾಡಿದ ಶಾಸಕರನ್ನು ಹಿಡಿದಿಟ್ಟು ಕೊಳ್ಳುವ ಯತ್ನದಲ್ಲಿ ಜೆಡಿಎಸ್ ಇಂತಹ ಹತ್ತು ಹಲವು ವೈರುದ್ಧ್ಯಗಳ ನಡುವೆಯೇ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭ ವಾಗಲಿದೆ.
ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಭಾರೀ ಗೆಲುವಿನಿಂದ ಆತವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ ಪ್ರತಿಪಕ್ಷಗಳ ಬಳಿ ಇದ್ದ ಅಸ್ತ್ರಗಳೆಲ್ಲವೂ ಖಾಲಿಯಾದಂತಾಗಿದೆ.
ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿದ್ದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ತನ್ನ ಪಕ್ಷದೊಳಗಿನ ಕಚ್ಚಾಟಗಳನ್ನು ಬಗೆಹರಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸರ್ಕಾರಕ್ಕೂ ನಿರಾಳವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಆರೋಪ, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರೈತರ ನಿದ್ದೆಗೆಡಿಸಿರುವ ವಕ್‌್ಫ ಆಸ್ತಿ ವಿವಾದ ಚರ್ಚೆಯ ಪ್ರಮುಖ ಅಂಶಗಳಾಗಿವೆ.
ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಚಾಟಿ ಬೀಸಲು ವಿಪಕ್ಷಗಳು ತಯಾರಿ ನಡೆಸಿವೆ. ಹಾಗೇ ಉತ್ತರ ಕರ್ನಾಟಕದ ಜಲ್ವಂತರ ಸಮಸ್ಯೆಗಳಾದ ಮೂಲಭೂತ ಸೌಕರ್ಯಗಳ ಕೊರತೆಗೆ ಪರಿಹಾರ ಸಿಗುತ್ತದೆಯೇ ಕಾದು ನೋಡಬೇಕಿದೆ. ಈ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳಿಗೆ ಸಾಕಷ್ಟು ಅಸ್ತ್ರಗಳಿದ್ದವು, ಕರ್ನಾಟಕ ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ, ಹಣದ ವಹಿವಾಟು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯನವರ ಕುಟುಂಬದ ಪಾತ್ರ, ವಕ್‌್ಫ ನೋಟಿಸ್, ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರ ಸಾವು, ಸಚಿವ ಆರ್.ವಿ.ತಿಮಾಪುರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ತುದಿಗಾಲಲ್ಲಿ ನಿಂತಿದ್ದವು.
ಆದರೆ ಇದಕ್ಕೆಲ್ಲವೂ ಉತ್ತರ ಎಂಬಂತೆ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದು ಪ್ರತಿಪಕ್ಷಗಳ ಜಂಘಾಬಲವನ್ನೇ ಹುದುಗಿಸಿದೆ. ಉಪಚುನಾವಣೆ ಫಲಿತಾಂಶದ ನಂತರ ಪ್ರತಿಪಕ್ಷ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ಹಾದಿಬೀದಿ ರಂಪಾಟವಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಹಠಾವೋ, ಬಿಜೆಪಿ ಬಚಾವೋ ಎಂದು ಭಿನ್ನಮತೀಯ ನಾಯಕ ಯತ್ನಾಳ್ ಘೋಷಿಸುತ್ತಿದ್ದರೆ, ಯತ್ನಾಳ್ ಅವರನ್ನೇ ಪಕ್ಷದಿಂದ ಉಚ್ಛಾಟಿಸಬೇಕೆಂದು ಬಿ.ವೈ.ಬಣ ಪಟ್ಟು ಹಿಡಿದಿದೆ. ಇದು ದೆಹಲಿಗೆ ಹೋಗಿದ್ದರೂ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಬಿಜೆಪಿಯೊಳಗಿನ ಮುಸುಕಿನ ಗುದ್ದಾಟ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದೆ.
ಸರ್ಕಾರದ ವಿರುದ್ಧ ವಾಕ್ಸಮರ ನಡೆಸಲು ಸಜ್ಜಾಗಿದ್ದ ಬಿಜೆಪಿಗೆ ಸದ್ಯಕ್ಕೆ ತನ್ನ ಪಕ್ಷದೊಳಗಿನ ಭಿನ್ನಮತವನ್ನು ಪರಿಹರಿಸಿಕೊಂಡರೆ ಸಾಕು ಎನ್ನುವಂತಾಗಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾವು ಸಜ್ಜಾಗಿದ್ದೇವೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳುತ್ತಿದ್ದರೂ ಬಿಜೆಪಿಯಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಎಲ್ಲಾ ಶಾಸಕರು ಕೈಜೋಡಿಸಲಿದ್ದಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ ಯತ್ನಾಳ್, ರಮೇಶ್ ಜಾರಕಿಹೊಳಿ, ಚಂದ್ರಪ್ಪ ಸೇರಿದಂತೆ ವಿಜಯೇಂದ್ರ ಬಣ ವಿರೋಧಿ ನಾಯಕರು ಸರ್ಕಾರದ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ಮೀನಾಮೇಷ ಎಣಿಸುತ್ತಿದ್ದಾರೆ.
ಇದು ಸದನದಲ್ಲಿ ಬಿಜೆಪಿಯನ್ನೇ ಮುಜುಗರಕ್ಕೆ ಸಿಲುಕಿಸಿದರೂ ಅಚ್ಚರಿಯಲ್ಲ. ಯತ್ನಾಳ್ ಅವರ ತಂಡ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಎಂಬುದು ದೃಢಪಟ್ಟಿಲ್ಲ. ಬಿಜೆಪಿಯದು ಈ ಸ್ಥಿತಿಯಾದರೆ ಜೆಡಿಎಸ್ ಸ್ಥಿತಿ ಕೂಡ ಭಿನ್ನವಾಗಿಲ್ಲ. ಹಿರಿಯ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಮತ್ತಿತರರು ಪಕ್ಷದಿಂದ ಅಂತರ ಕಾಪಾಡಿಕೊಳ್ಳುತ್ತಿರುವುದು ದಳಪತಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸರ್ಕಾರದ ವಿರುದ್ಧ ಒಟ್ಟಾಗಿ ಸದನದಲ್ಲಿ ಹೋರಾಟ ಮಾಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಎಚ್.ಡಿ.ಕುಮಾರಸ್ವಾಮಿ ಸೂಚನೆ ಕೊಟ್ಟಿದ್ದಾರೆ. ಆದರೆ ಪಕ್ಷದ ಕೆಲವು ನಾಯಕರ ವರ್ತನೆಯಿಂದ ಬೇಸತ್ತಿರುವ ಕೆಲವು ಶಾಸಕರು ತಟಸ್ಥರಾಗಿರುವುದು ಜೆಡಿಎಸ್‌ಗೆ ಇರಿಸುಮುರಿಸು ತಂದಿದೆ.
ಸಾಮಾನ್ಯವಾಗಿ ಪ್ರತಿ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ರಣತಂತ್ರ ರೂಪಿಸುವುದು ಸರ್ವೇ ಸಾಮಾನ್ಯ. ಆದರೆ ಎರಡೂ ಪಕ್ಷಗಳಲ್ಲೇ ಬಣ ಬಡಿದಾಟ, ಆಂತರಿಕ ಕಚ್ಚಾಟ, ಮುಸುಕಿನ ಗುದ್ದಾಟ ಜೋರಾಗಿರುವುದರಿಂದ ಸರ್ಕಾರಕ್ಕೆ ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ ಎಂಬಂತಾಗಿದೆ.