ಬೆಂಗಳೂರು,ಡಿ.7- ನವೆಂಬರ್ ತಿಂಗಳ ವಾಣಿಜ್ಯ ತೆರಿಗೆ ಸಂಗ್ರಹವು 9,147.87 ಕೋಟಿ ರೂ. ಆಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 17 ಕೋಟಿ ರೂ. ನಷ್ಟು ಹೆಚ್ಚಾಗಿದೆ.
ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ, ಕಳೆದ 8 ತಿಂಗಳಲ್ಲಿ ರಾಜ್ಯದ ವಾಣಿಜ್ಯ ತೆರಿಗೆ ಸಂಗ್ರಹ 67,564.31 ಕೋಟಿ ರೂ. ಸಂಗ್ರಹವಾಗಿದೆ.
ಕಳೆದ ವರ್ಷ 94,363.27 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು. ಇನ್ನು ನಾಲ್ಕು ತಿಂಗಳು ಬಾಕಿ ಇರುವುದರಿಂದ ಇದಕ್ಕಿಂತಲೂ ಹೆಚ್ಚಿನ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.
ಕಳೆದ ಎಂಟು ತಿಂಗಳಲ್ಲಿ 51,428.20 ಕೋಟಿ ರೂ. ಸರಕು ಸೇವಾ ತೆರಿಗೆ, 15,210.57 ಕೋಟಿ ರೂ.ಕರ್ನಾಟಕ ಮಾರಾಟ ತೆರಿಗೆ ಹಾಗೂ 925.54 ಕೋಟಿ ರೂ. ವೃತ್ತಿ ತೆರಿಗೆ ಸೇರಿದಂತೆ ಒಟ್ಟು 67,564.31 ಕೋಟಿ ರೂ. ಸಂಗ್ರಹವಾಗಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಸರಕು ಸೇವಾ ತೆರಿಗೆ 7051.83 ಕೋಟಿ ರೂ., ಮಾರಾಟ ತೆರಿಗೆ 1992.51 ಕೋಟಿ ರೂ. ಹಾಗೂ ವೃತ್ತಿ ತೆರಿಗೆ 103.53 ಕೋಟಿ ರೂ. ಸೇರಿದಂತೆ ಒಟ್ಟು 9147.87 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಈ ಮೂರೂ ತೆರಿಗೆ ಸೇರಿ ಒಟ್ಟು 7487.83 ಕೋಟಿ ರೂ.ನಷ್ಟು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿಯೂ ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಪ್ರತಿ ತಿಂಗಳೂ ವಾಣಿಜ್ಯ ತೆರಿಗೆ ಹೆಚ್ಚು ಹೆಚ್ಚು ಸಂಗ್ರಹವಾಗುತ್ತಿದೆ.