ನವದೆಹಲಿ,ಡಿ.7- ಚೆನ್ನೈ-ಬೆಂಗಳೂರು ಮತ್ತು ಹೈದ್ರಾಬಾದ್ -ಬೆಂಗಳೂರು ಕೈಗಾರಿಕಾ ಕಾರಿಡಾರ್ ಎರಡನ್ನೂ ಒಟ್ಟುಗೂಡಿಸಿ ಹಾಸನದಿಂದ ಮಂಗಳೂರಿಗೆ ಕೈಗಾರಿಕಾ ಕಾರಿಡಾರ್ ಘೋಷಣೆ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರಿಡಾರ್ ನಿರ್ಮಾಣವಾದರೆ ಬ್ಯುಸಿನೆಸ್ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲಿವೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾದಾಗ ಚೆನ್ನೈ-ಬೆಂಗಳೂರು ಕಾರಿಡಾರ್ ಘೋಷಣೆಯಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಈಗ ಚಂದ್ರಬಾಬು ನಾಯ್ಡು ಅವರು ಹೈದ್ರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಘೋಷಣೆ ಮಾಡಿದ್ದಾರೆ.
ಈ ಎರಡೂ ಕಾರಿಡಾರ್‌ಗಳನ್ನು ಒಟ್ಟುಗೂಡಿಸಿ ಹಾಸನ, ಮಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಿದರೆ ಆ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಹಾಸನ ವಿಮಾನನಿಲ್ದಾಣವನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಹಾಗೂ ವಾಣಿಜ್ಯಾಭಿವೃದ್ಧಿ ಕೂಡ ಆಗಲಿದೆ. ಹಾಸನದಲ್ಲಿ ವಿಮಾನನಿಲ್ದಾಣಕ್ಕೆ 1,200 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲಾಗಿತ್ತು. ಐವರು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಒಂದೊಂದು ಕಾಲದಲ್ಲಿ ಒಂದೊಂದು ರೀತಿ ಆಗಿದೆ. ಆದರೂ ವಿಮಾನನಿಲ್ದಾಣ ನಿರ್ಮಾಣ ವಿಳಂಬವಾಗುತ್ತಿದೆ. ಈಗ ವಿಮಾನನಿಲ್ದಾಣವನ್ನು ಅಭಿವೃದ್ಧಿಪಡಿಸಿದರೆ ವಾಣಿಜ್ಯ ಅಭಿವೃದ್ಧಿ ಜೊತೆಗೆ ರೈತರ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗಲಿದೆ. ಹೀಗಾಗಿ ರಫ್ತಿಗೂ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಈ ಮೂರೂ ಪ್ರಮುಖ ಪ್ರವಾಸಿ ಕೇಂದ್ರಗಳಾಗಿವೆ. ಈ ತಾಣಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ. ವಿಮಾನನಿಲ್ದಾಣದಿಂದ ಈ ಪ್ರವಾಸಿ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆಗಳಿಂದಲೇ ಟ್ಯಾಕ್ಸಿ ಸೇವೆ ಕಲ್ಪಿಸಿದರೆ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುತ್ತದೆ. ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತದೆ ಎಂದರು.
ಜನ ತೀರ್ಮಾನ ಮಾಡುತ್ತಾರೆ :
ಕಾಂಗ್ರೆಸ್‌ನಿಂದ ಹಾಸನದಲ್ಲಿ ಜನಕಲ್ಯಾಣ ಸಮಾವೇಶವನ್ನು ಮಾಡಿದ್ದಾರೆ. ಆ ಸಮಾವೇಶವನ್ನು ದೇವೇಗೌಡರ ಬಗ್ಗೆ ನಿಂದನೆ ಮಾಡಲು ಬಳಸಿಕೊಂಡಿದ್ದಾರೆ. ಸಂತೋಷ. ಅದಕ್ಕೆ ಯಾವುದೇ ತಕರಾರಿಲ್ಲ. ಜನರು ಮುಂದೆ ತೀರ್ಮಾನ ಮಾಡುತ್ತಾರೆ. ದೇವೇಗೌಡರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಏನೇನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಬಹಳಷ್ಟು ಜನ ನನ್ನನ್ನು ಗುರಿ ಮಾಡಿದವರು ಇದ್ದಾರೆ. ಆದರೂ ನಾವಿನ್ನೂ ಬದುಕಿದ್ದೇವೆ. ಗುರಿ ಮಾಡುವವರನ್ನು ಅಡ್ಡಿಪಡಿಸಲಾಗುವುದಿಲ್ಲ. ಮಾಡಿಕೊಳ್ಳಲಿ, ಯಾರೂ ಅದನ್ನು ಬೇಡ ಎನ್ನುವುದಿಲ್ಲ ಎಂದು ಗುಡುಗಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಅವರನ್ನು ಕ್ರಿಯಾಶೀಲರಾಗಿರುವಂತೆ ನಾನೇ ಹೇಳಿದ್ದೇನೆ. ಸೋತು ಮನೆಯಲ್ಲಿ ಇರುವುದು ಬೇಡ. ಹೋರಾಟದ ಕೆಚ್ಚು ಇದೆ. ಹೀಗಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಸೂಚಿಸಿದ್ದೇನೆ. ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಬೆಳೆದು, ಜನಸೇವೆ ಮಾಡುವುದನ್ನು ಯಾರೂ ತಡೆಯಲಾಗದು. ಅವರಿಗೂ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಹಾಗೂ ನಾನು ಒಟ್ಟಿಗೇ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಎನ್‌ಡಿಎ ಒಕ್ಕೂಟ ಸೇರಿದ್ದೇವೆ. ಹೀಗಾಗಿ ಬಿಜೆಪಿ ಜೊತೆ ಜೆಡಿಎಸ್ ರಾಜ್ಯದಲ್ಲಿ ಹೋರಾಟದಲ್ಲಿ ಭಾಗಿಯಾಗಲಿವೆ. ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಉಭಯ ಸದನದಗಳ ಅಧಿವೇಶನ ನಡೆಯಲಿದ್ದು, ಎರಡೂ ಪಕ್ಷಗಳ ಶಾಸಕರು ಒಟ್ಟಾಗಿ ಯಾವ ಯಾವ ವಿಚಾರ ಪ್ರಸ್ತಾಪ ಮಾಡಬೇಕು, ಯಾವ ರೀತಿ ಹೋರಾಟ ಮಾಡಬೇಕೆಂಬುದನ್ನು ನಿರ್ಧರಿಸುತ್ತಾರೆ ಎಂದರು.