ಡಮಾಸ್ಕಸ್,ಡಿ.8- ಆಫ್ಘಾನಿಸ್ತಾನ, ಬಾಂಗ್ಲಾ ದೇಶದ ಬಳಿಕ ಸಿರಿಯಾದಲ್ಲೂ ಆಂತರಿಕ ದಂಗೆ ಸರ್ಕಾರದ ಸ್ಥಾನಪಲ್ಲಟಕ್ಕೆ ಕಾರಣವಾಗಿದ್ದು, ಬಂಡುಕೋರರ ಗುಂಪು ರಾಜಧಾನಿ ಡಮಾಸ್ಕಸ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದಾಗಿ ಘೋಷಿಸಿದೆ. ಸಿರಿಯಾ ಅಧ್ಯಕ್ಷ ಬಶಾರ್ ಅಲ್-ಅಸಾದ್ ದೇಶಬಿಟ್ಟು ಪರಾರಿಯಾಗಿದ್ದಾರೆ.
ಸಿರಿಯಾದಲ್ಲಿ ನಾಗರಿಕ ಯುದ್ಧ ತೀವ್ರ ಸ್ವರೂಪಕ್ಕೆ ತಲುಪಿದೆ. ಸಿರಿಯಾದ ಸೇನೆಯ ಕಮಾಂಡರ್ ತನ್ನ ಅಧಿಕಾರಿಗಳಿಗೆ ನೀಡಿದ ಮಾಹಿತಿ ಪ್ರಕಾರ, ಅಧ್ಯಕ್ಷ ಬಶಾರ್ ಅಲ್-ಅಸಾದ್ ವಿಮಾನದಲ್ಲಿ ಅನಾಮಧೇಯ ಸ್ಥಳಕ್ಕೆ ಪರಾರಿಯಾಗಿದ್ದಾರೆ.ಬಂಡುಕೋರರ ಗುಂಪು ರಾಜಧಾನಿಗೆ ಪ್ರವೇಶಿಸಿದ್ದು, ಡಮಾಸ್ಕಸ್ ಅನ್ನು ಅಸಾದ್ರಿಂದ ಮುಕ್ತಗೊಳಿಸಿರುವುದಾಗಿ ಘೋಷಿಸಿದೆ.
ಅಸಾದ್ ಸರ್ಕಾರದ ವಿರುದ್ಧ ಪ್ರತಿವಾದಿಗಳ ಗುಂಪು ಭಾರೀ ಪೆಟ್ಟು ನೀಡಿದೆ. ಸಿರಿಯಾದ 14 ಪ್ರಾಂತೀಯ ರಾಜಧಾನಿಗಳ ಪೈಕಿ ಹಯಾತ್ ತಹ್ರೀರ್ ಅಲ್-ಶಮ (ಎಚ್ಟಿಎಸ್) ಗುಂಪು 3 ಪ್ರಾಂತ್ಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
ಡಮಾಸ್ಕಸ್, ಲಟಾಕಿಯ, ತರುಟಸ್ ಪ್ರದೇಶಗಳು ಬಂಡುಕೋರರ ವಶದಲ್ಲಿವೆ. ಪ್ರಮುಖವಾಗಿ ರಾಜಧಾನಿಯ ಪ್ರದೇಶ ಕೈವಶವಾಗಿರುವುದಕ್ಕೆ ಎಚ್ಟಿಎಸ್ ಸಂಭ್ರಮಿಸಿದೆ.ಬಂಡುಕೋರರನ್ನು ಒಂದು ದಶಕದಿಂದಲೂ ಇರಾನ್ ಮತ್ತು ರಷ್ಯನ್ ಮಿಲಿಟರಿಯ ಬೆಂಬಲದಿಂದ ಸಿರಿಯಾ ಆಡಳಿತ ಮೂಲೆಗುಂಪು ಮಾಡಿತ್ತು. ವಾಯುವ್ಯ ಭಾಗದಿಂದ ನುಗ್ಗಿಬರುತ್ತಿದ್ದ ಅಚ್ಚರಿದಾಯಕ ದಾಳಿಗಳನ್ನು ಅಲ್-ಅಸಾದ್ ಆಡಳಿತ ನಿಯಂತ್ರಿಸಿತ್ತು.
ಕ್ರಮೇಣ ತನ್ನ ಹಿಡಿತವನ್ನು ಕಳೆದುಕೊಳ್ಳಲಾರಂಭಿಸಿತು. ಹೆಚ್ಚಿನ ಸೇನಾಬಲ ಇಲ್ಲದೆ ಅತ್ತ ಪ್ರಮುಖ ಸ್ನೇಹರಾಷ್ಟ್ರವಾಗಿರುವ ಇರಾನ್ನ ಬೆಂಬಲವೂ ಇಲ್ಲದೆ ತನ್ನ ಭದ್ರತಾ ಪಡೆಗಳನ್ನು ವಿವಾದಿತ ಪ್ರದೇಶಗಳಿಂದ ಸಿರಿಯಾ ಹಿಂಪಡೆದುಕೊಳ್ಳಲಾರಂಭಿಸಿತು. ಶುಕ್ರವಾರ ಸೇನಾಪಡೆಗಳು ಹಂತಹಂತವಾಗಿ ಸ್ಥಳ ತೆರವು ಮಾಡುತ್ತಿದ್ದಂತೆ ಬಂಡುಕೋರರು ಆಕ್ರಮಿಸಿಕೊಳ್ಳಲಾರಂಭಿಸಿದ್ದಾರೆ.
ಸಿರಿಯಾದ ಪ್ರತಿಪಕ್ಷಗಳ ನಾಯಕರು ಡಮಾಸ್ಕಸ್ ಈಗ ಸುರಕ್ಷಿತವಾಗಿದ್ದು, ಕತ್ತಲ ಯುಗ ಕಳೆಯುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.ವಿಪಕ್ಷ ನಾಯಕ ಅದಿ ಅಲ್-ಬಹ್ರಾ ಸುದ್ದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದು, ಅಸಾದ್ ಅವರ ಆಡಳಿತ ಕೊನೆಗೊಂಡಿರುವುದು ಸಿರಿಯಾದ ಐತಿಹಾಸಿಕ ಬೆಳವಣಿಗೆ. ಇನ್ನು ಮುಂದೆ ರಾಷ್ಟ್ರೀಯ ಸಮಿಶ್ರ ಕೂಟಗಳು ಒಗ್ಗಟ್ಟಾಗಲಿವೆ. ನಾಗರಿಕ ವ್ಯವಸ್ಥೆಯನ್ನು ರೂಪಿಸಲಾಗಿದೆ. ಜನ ಸುರಕ್ಷಿತವಾಗಿದ್ದಾರೆ. ಎಲ್ಲಾ ಧರ್ಮೀಯರನ್ನು ನಾವು ಗೌರವದಿಂದ ಕಾಣುತ್ತೇವೆ. ಜನಸಾಮಾನ್ಯರ ವಿರುದ್ಧ ಆಯುಧಗಳನ್ನು ಎತ್ತುವುದಿಲ್ಲ. ಎಲ್ಲರೂ ತಮ ಮನೆಯಲ್ಲಿಯೇ ಇರಿ. ಸುರಕ್ಷಿತವಾಗಿದ್ದೀರಿ ಎಂದು ತಿಳಿಸಿದ್ದಾರೆ.
ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಕ್ರಾಂತಿಕಾರಕ ಹಾಗೂ ಪ್ರತೀಕಾರ ಹೋರಾಟ ನಡೆಸಿದವರ ವಿರುದ್ಧ ಯಾವ ಪ್ರಕರಣವೂ ಇರುವುದಿಲ್ಲ. ಜನರ ಘನತೆ ಮತ್ತು ಗೌರವಗಳನ್ನು ಮರುಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆಗೆ ಅರಬ್, ಯೂರೋಪ್ ಮತ್ತು ವಿಶ್ವಸಂಸ್ಥೆ ರಾಷ್ಟ್ರಗಳ ಜೊತೆ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಡಮಾಸ್ಕಸ್ ಬಂಡುಕೋರರ ವಶವಾಗುತ್ತಿದ್ದಂತೆ ನಗರದ ಪ್ರಮುಖ ವೃತ್ತದಲ್ಲಿ ಸಾವಿರಾರು ಜನ ಜಮಾವಣೆಗೊಂಡಿದ್ದು, ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಅಧ್ಯಕ್ಷ ಅಲ್-ಅಸಾದ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಕಾರಿನ ಹಾರನ್ಗಳನ್ನು ನಿರಂತರವಾಗಿ ಬಜಾಯಿಸಲಾಗಿದೆ. ಕೆಲವರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.
ಅಸಾದ್ ಮತ್ತು ಆತನ ತಂದೆ ಹಲವು ವರ್ಷಗಳಿಂದಲೂ ನಮನ್ನು ಭಯದಲ್ಲೇ ಬದುಕುವಂತೆ ಮಾಡಿದ್ದರು. ಈಗ ಅದರಿಂದ ನಮಗೆ ಮುಕ್ತಿ ಸಿಕ್ಕಿದೆ. ಇದನ್ನು ನಂಬಲಾಗುತ್ತಿಲ್ಲ ಎಂದು 29 ವರ್ಷದ ವಕೀಲ ಓಮರ್ ದಹಿ ಹೇಳಿಕೊಂಡಿದ್ದಾರೆ.
ಸಿರಿಯಾ ರಾಜ್ಯಾಡಳಿತಕ್ಕೆ ಒಳಪಟ್ಟ ಚಾನಲ್ನಲ್ಲಿ ಪ್ರಸಾರವಾಗಿರುವ ಸುದ್ದಿಯ ಪ್ರಕಾರ, ಬಶಾರ್ ಅಲ್-ಅಸಾದ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲಾಗಿದೆ. ಜೈಲಿನಲ್ಲಿದ್ದ ಬಂಧಿಗಳನ್ನು ಬಿಡುಗಡೆ ಮಾಡಲಾಗಿದೆ.