ಮೈಸೂರು,ಡಿ.8– ರಾಜ್ಯಸರ್ಕಾರ ಬೇರೆ ಕೆಲಸ ಇಲ್ಲದೆ ಕೋವಿಡ್ ತನಿಖೆ ನಡೆಸಲು ಮುಂದಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಮದುವೆಗಾಗಿ ಮೈಸೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲು ಸರ್ವಸ್ವತಂತ್ರವಾಗಿದೆ. ಇದಕ್ಕೆ ನಮ ಆಕ್ಷೇಪಣೆಯಿಲ್ಲ ಎಂದರು.
ಆದರೆ ಸರ್ಕಾರಕ್ಕೆ ಬೇರೆ ಕೆಲಸ ಇಲ್ಲ. ಹತ್ತಾರು ವರ್ಷಗಳ ಹಿಂದಿನ ಕತೆಗಳನ್ನು ತೆಗೆದುಕೊಂಡು ತನಿಖೆ ಮಾಡಿಸುವುದರಿಂದ ಏನು ಪ್ರಯೋಜನವಾಗಲಿದೆ?, ಇದ್ಯಾವುದಕ್ಕೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಮದುವೆಗೆ ಆಗಮಿಸಬೇಕು ಎಂದು ಶ್ರೀಗಳು ಸೂಚಿಸಿದ್ದರು. ಅದಕ್ಕಾಗಿ ಇಲ್ಲಿಗೆ ಬಂದಿದ್ದೆ. ಬೆಂಗಳೂರಿನಲ್ಲಿ ಕೆಲಸ ಇದೆ. ಮದುವೆ ಮುಗಿಸಿ ನಾನು ತಕ್ಷಣ ವಾಪಸ್ ಹೊರಡುತ್ತೇನೆ ಎಂದು ಅವರು ತಿಳಿಸಿದರು.
ತೀವ್ರಗೊಳ್ಳುತ್ತಿರುವ ತನಿಖೆ :
2019ರ ನಂತರ ಆರಂಭವಾದ ಕೋವಿಡ್ ವೇಳೆ ನಡೆದಿದ್ದ ವೈದ್ಯಕೀಯ ಸಲಕರಣೆಗಳ ಖರೀದಿ, ಚಿಕಿತ್ಸೆ, ತಪಾಸಣೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದ್ದು, ಇದರ ವಿಚಾರಣೆಗಾಗಿ ರಾಜ್ಯಸರ್ಕಾರ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗವೊಂದನ್ನು ರಚನೆ ಮಾಡಿತ್ತು.
ವಿಚಾರಣೆಯ ನಂತರ ಆಯೋಗ ಮಧ್ಯಂತರ ವರದಿ ನೀಡಿದ್ದು, ಅದರ ಆಧಾರದಲ್ಲಿ ರಾಜ್ಯಸರ್ಕಾರ ಎಸ್ಐಟಿ ತನಿಖೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.
ವಿಚಾರಣಾ ವರದಿಯ ಕುರಿತು ಅನುಪಾಲನೆ ಮೇಲೆ ನಿಗಾ ವಹಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದೆ.
ಈ ಸಮಿತಿ ನಿನ್ನೆ ಸಭೆ ನಡೆಸಿದ್ದು, ಕೋವಿಡ್ ಟೆಸ್ಟ್ ಮಾಡುವುದರಲ್ಲಿ ನೂರಾರು ಕೋಟಿ ರೂ.ಗಳ ಅಕ್ರಮವಾಗಿದೆ ಎಂದು ಆರೋಪಿಸಿದೆ. ಇದರ ತನಿಖೆಗೆ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲು ನಿರ್ಧರಿಸಲಾಗಿದೆ.