Thursday, December 19, 2024
Homeರಾಜಕೀಯ | Politicsಅಧಿಕಾರ ಒಪ್ಪಂದ ಚರ್ಚೆಗೆ ತೆರೆ : ಸಿದ್ದು ಬಣದಲ್ಲಿ ಸಂಭ್ರಮ, ಮೂಲ ನಿವಾಸಿಗಳು ಸಿಡಿಮಿಡಿ

ಅಧಿಕಾರ ಒಪ್ಪಂದ ಚರ್ಚೆಗೆ ತೆರೆ : ಸಿದ್ದು ಬಣದಲ್ಲಿ ಸಂಭ್ರಮ, ಮೂಲ ನಿವಾಸಿಗಳು ಸಿಡಿಮಿಡಿ

Full Stop for Power Sharing discussion in congress

ಬೆಂಗಳೂರು, ಡಿ.8- ಅಧಿಕಾರ ಹಂಚಿಕೆ ಸೂತ್ರವಾಗಿ ಪದೇ ಪದೇ ಕೇಳಿ ಬರುತ್ತಿದ್ದ ಗೊಂದಲಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೆರೆ ಎಳೆದ ಬಳಿಕ, ಈಗಿರುವ ಮುಖ್ಯಮಂತ್ರಿ ಅಧಿಕಾರಾವಧಿ ಐದು ವರ್ಷ ಪಕ್ಕಾ ಎಂಬಂತಾಗಿದ್ದು, ಸಿದ್ದರಾಮಯ್ಯ ಅವರ ಬೆಂಬಲಿಗರು ನಿಟ್ಟುಸಿರು ಬಿಟ್ಟು, ಒಳಗೊಳಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ರಾಜ್ಯದಲ್ಲಿ 136 ಸ್ಥಾನ ಗಳಿಸಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಆಯ್ಕೆ ದೊಡ್ಡ ತಲೆನೋವಾಗಿತ್ತು. ಕಾಂಗ್ರೆಸ್ನಲ್ಲಿ ಹಲವು ಮುಖಂಡರು ನಾನು, ನೀನು ಎಂದು ಗದ್ದುಗೆಗಾಗಿ ಮುಗಿ ಬಿದ್ದಿದ್ದರು. ಅಂತಿಮ ರೇಸ್ ನಲ್ಲಿ ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಉಳಿದುಕೊಂಡರು. ಇಬ್ಬರ ನಡುವೆ ದೆಹಲಿಯಲ್ಲಿ ಒಂದು ವಾರ ಕಾಲ ಸಂಧಾನ ನಡೆದಿತ್ತು. ಅಳೆದುತೂಗಿ ರಾಜಿ ಸೂತ್ರ ರೂಪಿಸುವಲ್ಲಿ ಹೈಕಮಾಂಡ್ ನಾಯಕರು ಯಶಸ್ವಿಯಾದರು.

ಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಪಟ್ಟ ನೀಡಿ, ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲೂ ಮುಂದುವರೆಸಿದರು. ಆದರೆ ಈ ವ್ಯವಸ್ಥೆ ಲೋಕಸಭೆ ಚುನಾವಣೆವರೆಗೂ ಇರಲಿದೆ ಎಂದು ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದರು. ಲೋಕಸಭೆ ಚುನಾವಣೆ ಮುಗಿದು, ನಂತರ ವಿಧಾನಸಭೆ ಉಪಚುನಾವಣೆಯಾಗಿ ಕಾಂಗ್ರೆಸ್ ಎಲ್ಲಾ ಮೂರು ಕ್ಷೇತ್ರಗಳನ್ನು ಗೆದ್ದರೂ, ಹೈಕಮಾಂಡ್ನಿಂದ ಬದಲಾವಣೆಯ ಸುಳಿವು ಸಿಗಲಿಲ್ಲ.

ಈ ನಡುವೆ ಮುಡಾ ಹಗರಣಕ್ಕೆ ಸಿದ್ದರಾಮಯ್ಯ ಹುದ್ದೆ ತ್ಯಾಗ ಮಾಡಬೇಕಾಗಬಹುದು ಎಂಬ ಲೆಕ್ಕಾಚಾರಗಳು ನಡೆದವು. ಆದರೆ ಡಿ.ಕೆ.ಬಣ ನಿರೀಕ್ಷೆಯಂತೆ ಯಾವ ಬದಲಾವಣೆಯೂ ನಡೆಯದೇ, ಇದ್ದಾಗ ಖಾಸಗಿ ಚಾನೆಲ್ ನ ಸಂದರ್ಶನದಲ್ಲಿ ಕುಳಿತ ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ತಾವೇ ಹೇಳಿಕೆ ನೀಡಿ, ವಿವಾದ ಹುಟ್ಟು ಹಾಕಿದರು. ಇದು ಕಾಂಗ್ರೆಸ್ ನಲ್ಲಿ ಭಾರೀ ಸಂಚಲನ ಮೂಡಿಸಿದ್ದಲ್ಲದೆ, ವಿರೋಧ ಪಕ್ಷಗಳಿಗೂ ಹೊಸ ಅಸ್ತ್ರ ನೀಡಿದಂತಾಗಿತ್ತು.

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸೇರಿದಂತೆ ಹಲವು ಸಂಕಷ್ಟ ಸಂದರ್ಭಗಳಿರುವಾಗ, ಆಡಳಿತ ನಡೆಸುವವರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ ಎಂಬ ಭಾವನೆಯನ್ನು ಜನ ಸಾಮಾನ್ಯರಲ್ಲಿ ಮೂಡಿಸುವಲ್ಲಿ ವಿರೋಧ ಪಕ್ಷಗಳು ಯಶಸ್ವಿಯಾದವು.

ಇತ್ತ ಕಾಂಗ್ರೆಸ್ ಎಂದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರು ಮಾತ್ರ ಎಂಬ ವಾತಾವರಣ ನಿರ್ಮಾಣವಾಗುತ್ತಿರುವುದು ಪಕ್ಷದಲ್ಲಿ ಹಲವು ಹಿರಿಯ ನಾಯಕರು ಹಾಗೂ ಮೂಲ ನಿವಾಸಿಗಳಿಗೆ ಬಿಸಿ ತುಪ್ಪವಾಗಿದೆ. 2018ರಲ್ಲಿ ಆಗಲೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಏಕಚಕ್ರಾಧಿಪತ್ಯದಲ್ಲಿ ಚುನಾವಣೆಗೆ ಹೋಗಿ ಕಾಂಗ್ರೆಸ್ ಮುಗ್ಗರಿಸಿತ್ತು.

ಬುದ್ದಿ ಕಲಿತು 2023ರಲ್ಲಿ ಮೊದಲಿನ ಸಂಪ್ರದಾಯದಂತೆ ಸಾಮೂಹಿಕ ನಾಯಕತ್ವದ ಮೊರೆ ಹೋಗಿತ್ತು. ಪರಿಣಾಮ ಕಾಂಗ್ರೆಸ್ ತನ್ನ ವೈಭೋಗಕ್ಕೆ ಮರಳಿತ್ತು. ಸರ್ಕಾರದಲ್ಲಿ ಮುಂಚೂಣಿ ಹುದ್ದೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಉಳಿದೆಲ್ಲಾ ಪ್ರಮುಖ ನಾಯಕರನ್ನು ಮೂಲೆ ಗುಂಪು ಮಾಡಿ, ಇಬ್ಬರೇ ಮೇಳೈಸುತ್ತಿದ್ದಾರೆ ಎಂಬ ಸಿಡಿಮಿಡಿ ಪಕ್ಷದ ಒಳಗೊಳಗೆ ಕುದಿಯುತ್ತಿದೆ. ಇದೇ ವೇಳೆ ಡಿ.ಕೆ.ಶಿವಕುಮಾರ್ ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಹೇಳಿಕೆ ನೀಡಿದ್ದು ಹಿರಿಯ ನಾಯಕರ ಅಸಮಾಧಾನ ಸ್ಫೋಟಗೊಳ್ಳಲು ಕಾರಣವಾಗಿತ್ತು.

2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದರೂ, ತಾನು ಸೋತು, ಮುಖ್ಯಮಂತ್ರಿ ಹುದ್ದೆಯನ್ನು ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡು, ಈಗಲೂ ಕೈ ಕೈ ಹಿಸುಕಿಕೊಳ್ಳುತ್ತಿರುವ ಡಾ.ಜಿ.ಪರಮೇಶ್ವರ್, 2023ರ ನಂತರ ಸಿದ್ದರಾಮಯ್ಯ ಕ್ಯಾಂಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ತಮ ತವರು ಜಿಲ್ಲೆ ತುಮಕೂರಿನಲ್ಲಿ ಸದಾ ಕಾಲದ ರಾಜಕೀಯ ಸಹಸ್ಪರ್ಧಿ ಕೆ.ಎನ್.ರಾಜಣ್ಣ ಅವರೊಂದಿಗಿನ ಅಸಮಾಧಾನವನ್ನು ಬದಿಗಿಟ್ಟು, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ ಅವರೊಂದಿಗೆ ಸೇರಿ ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಹೆಗಲು ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಗಳಸ್ಯಕಂಠಸ್ಯರಾಗಿದ್ದರು. ಪ್ರಸ್ತುತ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸಂಬಂಧ ಪಟ್ಟಂತೆ ಇವರಿಬ್ಬರ ನಡುವೆ ಸಂಬಂಧ ಹಳಸಿಕೊಂಡಿದೆ.

ಅಧಿಕಾರ ಹಂಚಿಕೆ ಒಪ್ಪಂದ ಕುರಿತು ಡಿ.ಕೆ.ಶಿವಕುಮಾರ್ ಹೇಳಿಕೆ ಸಹಜವಾಗಿ ಈಗಲೂ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಪರಮೇಶ್ವರ್ ಅವರಂಥ ಹಲವು ನಾಯಕರ ಬಿಪಿಯನ್ನು ಹೆಚ್ಚಿಸಿತ್ತು. ಅವರಿಬ್ಬರೇ ಎಲ್ಲವನ್ನೂ ಮಾಡುವುದಾದರೆ ಉಳಿದವರು ಎಲ್ಲಿ ಹೋಗಬೇಕು ಎಂದು ನೇರವಾಗಿ ಪ್ರಶ್ನಿಸುವ ಮೂಲಕ ಪರಮೇಶ್ವರ್ ತಮ ಅಸಹನೆಯನ್ನು ಹೊರ ಹಾಕಿದರು.

ಬಳಿಕ ಕೋವಿಡ್ ಹಗರಣದ ಪರಿಶೀಲನೆಗಾಗಿ ರಚಿಸಲಾಗಿರುವ ಸಚಿವ ಸಂಪುಟ ಸಭೆಯಲ್ಲಿ ನಿನ್ನೆ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕಾಯಿತು. ನಂತರದ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಡಿ.ಕೆ.ಶಿವಕುಮಾರ್ ಅವರಿಗೆ ಮುಜುಗರವಾಗಿತ್ತು. ಯಾವ ಒಪ್ಪಂದವೂ ಇಲ್ಲ. ಹೈಕಮಾಂಡ್ ನನಗೆ ಮತ್ತು ಸಿದ್ದರಾಮಯ್ಯ ಅವರಿಗೆ ಕೆಲವು ಜವಾಬ್ದಾರಿಗಳನ್ನು ನೀಡಿದೆ.

ನಾನು ಅದರ ಬಗ್ಗೆ ಹೇಳಿದ್ದೆ, ಉಳಿದಂತೆ ಯಾವ ಒಪ್ಪಂದವೂ ಇಲ್ಲ, ಅದರ ಬಗ್ಗೆ ಇನ್ನೂ ಮುಂದೆ ಯಾರೂ ಮಾತನಾಡುವಂತಿಲ್ಲ ಎಂದು ಖಡಕ್ ಸಂದೇಶ ನೀಡುವ ಮೂಲಕ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಡಿ.ಕೆ.ಶಿವಕುಮಾರ್ ಅವರು ಕಟುವಾದ ಮಾತುಗಳನ್ನಾಡುವಾಗ ಪಕ್ಕದಲ್ಲೇ ಇದ್ದ ಪರಮೇಶ್ವರ್ ಮುಖ ಮರಗಟ್ಟಿದಂತಾಗಿರುವುದು ಎದ್ದು ಕಾಣುತ್ತಿತ್ತು.

ಕಾಂಗ್ರೆಸ್ ನಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಜಪವಾಗುತ್ತಿದ್ದರೂ, ಒಳಗೊಳಗೆ ಅಸಮಾಧಾನದ ಜ್ವಾಲಾಗ್ನಿ ಕುದಿಯುತ್ತಿದೆ. ಹೊರಗಿನಿಂದ ಬಂದ ಸಿದ್ದರಾಮಯ್ಯ ನಿರಾಯಾಸವಾಗಿ ಏಳು ವರ್ಷ ಮುಖ್ಯಮಂತ್ರಿ ಹುದ್ದೆಯನ್ನು ಅನುಭವಿಸುತ್ತಿದ್ದಾರೆ ಎಂಬ ಅಸಹನೆ ಬಹಳಷ್ಟು ನಾಯಕರನ್ನು ಕಾಡುತ್ತಿದೆ.

ಮುಂದಿನ ಐದು ವರ್ಷವೂ ಅವರೇ ಮುಂದುವರೆದು ಬಿಡುತ್ತಾರೇನೋ ಎಂಬ ದುಗುಡ ಬಹಳಷ್ಟು ನಾಯಕರಲ್ಲಿದೆ. ಅದಕ್ಕಾಗಿಯೇ ಆಗಾಗ್ಗೆ ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆಯ ಸೂತ್ರ ಸೇರಿದಂತೆ ನಾನಾ ರೀತಿಯ ಹೇಳಿಕೆಗಳ ಮೂಲಕ ಗೊಂದಲ ಮೂಡಿಸುವ ಯತ್ನ ನಡೆಸುತ್ತಲೇ ಇರುತ್ತಾರೆ. ಇದಕ್ಕೆ ಎದಿರೇಟು ಎಂಬಂತೆ ಸಿದ್ದರಾಮಯ್ಯ ಬಣ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಬೇಡಿಕೆಯನ್ನು ಮುಂದಿಟ್ಟು ಟಾಂಗ್ ನೀಡುತ್ತಿರುತ್ತದೆ.

ಆಡಳಿತ ಪಕ್ಷದಲ್ಲೇ ಏನೆಲ್ಲಾ ಗೊಂದಲಗಳು ಸೃಷ್ಟಿಯಾದರೂ ಅದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಗಂಭೀರ ಚರ್ಚೆಯಾಗಬೇಕಿತ್ತು. ಆದರೆ ಎಲ್ಲಾ ಪಕ್ಷಗಳಲ್ಲಿ ಬಣ ರಾಜಕೀಯವೇ ಮೇಲುಗೈ ಸಾಧಿಸಿರುವುದರಿಂದ ವಿಷಯಾಂತರಿಸಲು ಬೇರೆ ಬೇರೆ ಚರ್ಚೆಗಳ ಮೂಲಕ ಕಾಲಹರಣವಾಗುತ್ತಿದೆ ಎಂಬ ಆಕ್ಷೇಪ ಸಾರ್ವಜನಿಕರದ್ದಾಗಿದೆ.

RELATED ARTICLES

Latest News