ಬೆಳಗಾವಿ,ಡಿ.9– ಕೋವಿಡ್-19 ಸಂದರ್ಭದಲ್ಲಿ ತಾಲ್ಲೂಕು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ಗಳ ಅಳವಡಿಕೆಯಲ್ಲಿ ಉಂಟಾಗಿರುವ ಅಕ್ರಮದ ಕುರಿತು ನಿವೃತ್ತ ನ್ಯಾಯಮೂರ್ತಿ ಮೈಕಲ್ ಖುನ್ನಾ ಆಯೋಗದ ವರದಿಯ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಪರಿಷತ್ನ ಪ್ರಶ್ನೋತ್ತರ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಅವರು, ಕೋವಿಡ್ ಸಂದರ್ಭದಲ್ಲಿ ಎಷ್ಟು ಆಕ್ಸಿಜನ್ ಪ್ಲಾಂಟ್ಗಳನ್ನು ಅಳವಡಿಸಲಾಗಿದೆ. ಅದರ ಸಾಮರ್ಥ್ಯದ ಕುರಿತು ಪ್ರಶ್ನೆ ಮಾಡಿದ್ದರು.
ತಾಲ್ಲೂಕು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಇದುವರೆಗೂ 243 ಆಕ್ಸಿಜನ್ ಪ್ಲಾಂಟ್ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಪಿಎಂಕೇರ್ 50, ಎಂಒಪಿಎನ್ಜಿ 51, ರಾಜ್ಯ ನಿರ್ವಹಣೆ 40, ಪಿಎಸ್ಆರ್ 110, ಜಿಲ್ಲಾ ನಿರ್ವಹಣೆ 1, ರೈಲ್ವೆ ಮಂಡಳಿ 3, ಕಲಿದ್ದಲ್ಲು ಇಲಾಖೆ 6, ವಿದೇಶಿ ನಿರ್ವಹಣೆ 2 ಸೇರಿದಂತೆ 243 ಆಕ್ಸಿಜನ್ಪ್ಲಾಂಟ್ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ.
ಕೋವಿಡ್ ಮುಂಚೆ ರಾಜ್ಯದಲ್ಲಿ ಯಾವುದೇ ಸಿಎಫ್ಎ ಆಕ್ಸಿಜನ್ ಪ್ಲಾಂಟ್ಗಳು ಇರಲಿಲ್ಲ. ಆಕ್ಸಿಜನ್ ಸಿಲಿಂಡರ್ ಮೂಲಕ ವೇದಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿತ್ತು. ಕೋವಿಡ್ ಅಲೆ ಸಂದರ್ಭದಲ್ಲಿ 243 ಆಕ್ಸಿಜನ್ ಪ್ಲಾಂಟ್ಗಳನ್ನು ಅಳವಡಿಸಲಾಗಿದೆ.
500ಕ್ಕೂ ಹೆಚ್ಚು ಸಾಮರ್ಥ್ಯದ ಎಲ್ಪಿಎಂ 85, 500 ಎಲ್ಪಿಎಂ 95, 586-960 ಸಾಮರ್ಥ್ಯದ 17, 1 ಸಾವಿರ ಎಲ್ಪಿಎಂ 43, 2000 ಎಲ್ಪಿಎಂ 3 ಒಟ್ಟು 243 ಆಕ್ಷಿಜನ್ ಪ್ಲಾಂಟ್ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ಗೆ ಅತಿಹೆಚ್ಚು ಬೇಡಿಕೆ ಇತ್ತು. ಪ್ರಸ್ತುತ ದಿನಗಳಲ್ಲಿ ಆಕ್ಸಿಜನ್ಗೆ ಹೆಚ್ಚಿನ ಬೇಡಿಕೆ ಇಲ್ಲ. ಕೊರೊನಾ ವೇಳೆ ವೈದ್ಯಕೀಯ ಉಪಕರಣಗಳ ಖರೀದಿ ವೇಳೆ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಕೇಳಿ ಬಂದಿತ್ತು. ಹೀಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಖುನ್ನಾ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು. ಸರ್ಕಾರಕ್ಕೆ ಆಯೋಗ ವರದಿಯನ್ನು ಸಲ್ಲಿಸಿದ್ದು, ಮೇಲ್ನೋಟಕ್ಕೆ ಸಾಕಷ್ಟು ಲೋಪದೋಷಗಳು ನಡೆದಿರುವುದನ್ನು ಪತ್ತೆ ಮಾಡಿದೆ. ಆಯೋಗದ ಶಿಫಾರಸ್ಸಿನಂತೆ ಸರ್ಕಾರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.
ಈ ವೇಳೆ ಸದಸ್ಯ ಯತೀಂದ್ರ, ಕೊಡಗು, ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಆಕ್ಸಿಜನ್ ಪೂರೈಕೆಯನ್ನೆ ಮಾಡಿಲ್ಲ. ಪೂರೈಸಿದ ಕಡೆ ಉಪಯೋಗವಾಗಿಲ್ಲ. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.