ಬೆಂಗಳೂರು,ಡಿ.10-ರಾಜ್ಯದ 25ಕ್ಕೂ ಹೆಚ್ಚು ಕಡೆ 10 ಸರ್ಕಾರಿ ಅಧಿಕಾರಿಗಳ ಮನೆ,ಕಚೇರಿ ಸೇರಿ ವಿವಿಧೆಡೆ ಏಕಕಾಲದಲ್ಲಿ ಇಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು,ಬೆಂಗಳೂರು ಗ್ರಾಮಾಂತರ ,ಕೊಪ್ಪಳ, ಗದಗ,ಕಲಬುರ್ಗಿ, ಚಿತ್ರದುರ್ಗ,ರಾಯಚೂರಿನಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ.ಕೊಪ್ಪಳದ ಅಬಕಾರಿ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಮೇಶ ಅಗಡಿ ಅವರ ಬಿಟಿ ಪಾಟೀಲ್ ನಗರದ ಕಚೇರಿ ಹಾಗೂ ಅವರು ವಾಸಿಸುತ್ತಿರುವ ಬಾಡಿಗೆ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಯಲಬುರ್ಗಾ ತಾಲೂಕಿನ ತುಮರಗುದ್ದಿ ಗ್ರಾಮದಲ್ಲಿರುವ ಅವರ ತೋಟದ ಮನೆ ಮೇಲೂ ದಾಳಿ ಮಾಡಲಾಗಿದೆ. ಅಲ್ಲದೆ ವಿಜಯನಗರದಲ್ಲಿರುವ ಅವರ ಆಪ್ತ ಮಧ್ಯವರ್ತಿ ಎಂದು ಹೇಳಲಾದ ಏಜಂಟ್ ಮನೆಯಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ 4 ಅಧಿಕಾರಿಗಳ ನಿವಾಸ ಕಛೇರಿ ಹಾಗೂ ವಿವಿಧ ವಾಣಿಜ್ಯ ಮಳಿಗೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನೆಡಸಿದ್ದಾರೆ. ಬಾಣಸವಾಡಿ ಹೆಚ್ಆರ್ಬಿ ಲೇಔಟ್ ಬೆಂ.ಪೂರ್ವ ಬೆಸ್ಕಾಂ ಕಛೇರಿಯಲ್ಲಿ ಸೂಪರಿಟೆಂಡೆಂಟ್ ಆಗಿರುವ ಲೋಕೇಶ್ ಬಾಬು ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಅವರ ನಿವಾಸದಲ್ಲಿ ಕೆಲವು ದಾಖಲೆ ಪತ್ರಗಳು ಚಿನ್ನಾಭರಣ ಸೇರಿದಂತೆ ಹಲವು ಬ್ಯಾಂಕ್ಗಳಲ್ಲಿ ಹೂಡಿಕೆ ಮತ್ತಿತ್ತರ ವ್ಯವಹಾರಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನೂ ಬೊಮನಹಳ್ಳಿ ವಲಯದ ಬಿಬಿಎಂಪಿ ಕಂದಾಯ ನಿರೀಕ್ಷಕ ಸುರೇಶ್ ಬಾಬು ಅವರ ಮನೆ ಹಾಗೂ ಕಚೇರಿ ಮೇಲೆ ಬೆಂ. ನಗರ ಬಿಓಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿದ್ದಲ್ಲದೆ, ಯಲಹಂಕ ವಲಯದ ತೆರಿಗೆ ನಿರೀಕ್ಷಕ ಕೃಷ್ಣಪ್ಪ ಅವರ ಮನೆ ಹಾಗೂ ಕಛೇರಿಯಲ್ಲಿ ಲೋಕಾಯುಕ್ತ ತಪಾಸಣೆ ಕೈಗೊಂಡಿದೆ.
ಬೆಂ. ಗ್ರಾಮಾಂತರದ ಜಿಲ್ಲಾ ಆರೋಗ್ಯ ಅಧಿಕಾರಿ ಎಂ.ಸಿ. ಸುನಿಲ್ ಕುಮಾರ್ ಅವರ ನಿವಾಸ ಹಾಗೂ ಅವರು ಕಾರ್ಯನಿರ್ವಹಿಸುತ್ತಿದ್ದ ಕಛೇರಿ ಮೇಲೆ ದಾಳಿ ನಡೆದಿದೆ. ಇವರ ಬಳಿ ಹಲವೆಡೆ ನಿವೇಶನಗಳು ಚಿನ್ನಾಭರಣ ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆಯಾಗಿದೆಯೆಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಹಲವು ದಾಖಲೆಗಳನ್ನು ಕೂಡ ವಶಪಡಿಸಿಕೊಂಡಿದ್ದು, ಔಷಧಿ ಖರೀದಿ ಸೇರಿದಂತೆ ವಿವಿಧ ವಲಯಗಳಲ್ಲಿ ಇವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ದೂರು ನೀಡಲಾಗಿತ್ತು.
ಚನ್ನಪಟ್ಟಣದ ಪೊಲೀಸ್ ಟ್ರೈನಿಂಗ್ ಶಾಲೆಯ ಡಿಎಸ್ಪಿ ನಂಜುಂಡಯ್ಯ ಅವರ ಬೆಂಗಳೂರು ನಿವಾಸ ಸೇರಿದಂತೆ ಹಲವೆಡೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಇಲ್ಲೂ ಕೂಡ ಹಲವು ಆಸ್ತಿ ದಾಖಲೆಗಳು ಪತ್ತೆಯಾಗಿವೆ.
ಕಲಬುರಗಿಯ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ರಾಮಪ್ಪ ಅವರಿಗೂ ಲೋಕಾಯುಕ್ತ ಅಧಿಕಾರಗಳು ಶಾಕ್ ನೀಡಿದ್ದಾರೆ. ಮನೆ ಹಾಗೂ ಅವರಿಗೆ ಸೇರಿದ್ದ ಹಲವು ವಾಣಿಜ್ಯ ಕೇಂದ್ರ ಹಾಗೂ ಇವರ ಆಪ್ತ ಮಧ್ಯವರ್ತಿ ನಿವಾಸದ ಮೇಲೂ ದಾಳಿ ನಡೆಸಲಾಗಿದೆಯೆಂದು ತಿಳಿದು ಬಂದಿದೆ. ಹಿರಿಯೂರು ಉಪ-ವಿಭಾಗದ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಸುರೇಶ್ ಅವರ ಚಿತ್ರದುರ್ಗದ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆದಿದೆ.
ಬೆಂ. ಗ್ರಾಮಾಂತರದ ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಅಧಿಕಾರಿ ಎಂ ಸಿ ಸುನಿಲ್ ಕುಮಾರ್ ಅವರ ಬೆಂಗಳೂರು ನಿವಾಸ ಹಾಗೂ ವಿವಿಧ 3 ಕಡೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು ಅಪಾರ ಪ್ರಮಾಣದ ಚರಾಸ್ತಿ, ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.
ಕಾರ್ಯಾಚರಣೆ ಮುಂದುವರೆ ದಿದ್ದು ಅಧಿಕಾರಿಗಳ ಸಂಪತ್ತಿನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆಯೆಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.