ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಎಸ್‌ಎಂಕೆ ಅಂತ್ಯಕ್ರಿಯೆ, ಪಂಚಭೂತಗಳಲ್ಲಿ ಅಭಿವೃದ್ಧಿಯ ಹರಿಕಾರ ಲೀನ
ಬೆಂಗಳೂರು,ಡಿ.11- ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸಾವಿರಾರು ಜನರ ಅಶ್ರುತರ್ಪಣದ ನಡುವೆ ಅವರ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ನೆರವೇರಿತು.
ಸನಾತನ ಹಿಂದೂ ಸಂಸ್ಕೃತಿಯ, ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಎಸ್.ಎಂ.ಕೃಷ್ಣ ಅವರ ಪ್ರೀತಿಯ ಮೊಮಗ ಅಮರ್ತ್ಯ ಹೆಗಡೆ ಅವರು ನೆರವೇರಿಸಿದರು.ಶ್ರೀರಂಗಪಟ್ಟಣದ ಭಾನು ಪ್ರಕಾಶ್ ಶರ್ಮ ಅವರ ತಂಡ ಅಂತಿಮ ಪೂಜಾ ವಿಧಿ ವಿಧಾನಗಳನ್ನು ನರೆವೇರಿಸಿ ಕೊಟ್ಟರು. ನಂತರ ಅಮರ್ತ್ಯ ಹೆಗಡೆ ಅವರು ಚಿತೆಗೆ ಆಗ್ನಿ ಸ್ಪರ್ಶ ಮಾಡಿದರು. ಇದಕ್ಕೂ ಮುನ್ನ ಸರ್ಕಾರದ ವತಿಯಿಂದ ಮೃತರ ಗೌರವಾರ್ಥ ಪೊಲೀಸರು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಿದರು.
ನಂತರ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣ ಧ್ವಜವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.ಎಸ್ ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಪುತ್ರಿಯರಾದ ಶಾಂಭವಿ, ಮಾಳವಿಕಾ ಕುಟುಂಬ ವರ್ಗದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಎಚ್‌ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಹಾಗು ಸಂಸದ ಬಸವರಾಜ ಬೊಮಾಯಿ, ಸಂಸದ ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ, ಸಚಿವರಾದ ಕೃಷ್ಣಬೈರೇಗೌಡ, ವೆಂಕಟೇಶ್, ಮಹದೇವಪ್ಪ, ಎಚ್.ಕೆ ಪಾಟೀಲ್ ಮತ್ತಿತರ ಸಚಿವರು, ವಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಡಾ.ಅಶ್ವಥ್ ನಾರಾಯಣ ರಾಜಕೀಯ ನಾಯಕರು,ಇತರ ಆನೇಕ ಶಾಸಕರು, ವಿವಿಧ ಕ್ಷೇತ್ರಗಳ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಎಸ್.ಎಂ.ಕೃಷ್ಣ ಅವರು ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡಿದ ಹಿನ್ನೆಲೆಯಲ್ಲಿ ಶ್ರೀಗಂಧದ ಕಟ್ಟಿಗೆಗಳಿಂದಲೇ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮುನ್ನ ಇಂದು ಬೆಳಗ್ಗೆ ಬೆಂಗಳೂರಿನಿಂದ ಮದ್ದೂರಿನವರೆಗೆ ಎಸ್.ಎಂ.ಕೃಷ್ಣ ಅವರ ಅಂತಿಮಯಾತ್ರೆ ನಡೆಯಿತು.
ಸದಾಶಿವನಗರದ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಬಳಿಕ 8.30ರ ಸುಮಾರಿಗೆ ಪಾರದರ್ಶಕ ವಾಹನದಲ್ಲಿ ಆರಂಭವಾದ ಅಂತಿಮಯಾತ್ರೆಯಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿ ಅಂತಿಮದರ್ಶನ ಪಡೆದು, ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಪಾರದರ್ಶಕ ವಾಹನದ ಒಳಗೆ ಪಾರ್ಥಿವ ಶರೀರದ ಪಕ್ಕದಲ್ಲೇ ಆಸೀನರಾಗುವ ಮೂಲಕ ಯಾತ್ರೆಯುದ್ದಕ್ಕೂ ಸಾಗಿದರು. ಅಲ್ಲಲ್ಲಿ ಅವರು ಗದ್ಗದಿತರಾಗಿ ದುಃಖಿಸುತ್ತಿರುವುದು ಕಂಡುಬರುತ್ತಿತ್ತು. ಸದಾಶಿವನಗರದಿಂದ ಮೇಖ್ರಿ ಸರ್ಕಲ್ ವೃತ್ತವನ್ನು ಬಳಸಿ ಬಳ್ಳಾರಿ ರಸ್ತೆ ಮೂಲಕ ವಿಂಡ್ಸರ್‌ಮ್ಯಾನರ್, ಚಾಲುಕ್ಯ ವೃತ್ತ, ಕೆ.ಆರ್.ವೃತ್ತ, ಹಡ್ಸನ್ ಸರ್ಕಲ್, ಚಾಮರಾಜಪೇಟೆ, ಶಿರಸಿ ಮೇಲ್ಸೇತುವೆ ಮೂಲಕ ಅಂತಿಮ ಯಾತ್ರೆ ಹಾದುಹೋಯಿತು.
ಬೆಳಗಿನ ಸಮಯವಾದ್ದರಿಂದ ವಾಹನಗಳ ಸಂಚಾರ ಕಡಿಮೆಯಿತ್ತು. ಮುಂಜಾಗ್ರತಾ ಕ್ರಮವಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಶಿರಸಿ ವೃತ್ತ, ನಾಯಂಡಹಳ್ಳಿ ಮಾರ್ಗವಾಗಿ ಕೆಂಗೇರಿ ತಲುಪಿದ ಯಾತ್ರೆ ಮಧು ಪೆಟ್ರೋಲ್ ಬಂಕ್ ಸಮೀಪ ಕೃಷ್ಣಪ್ರಿಯ ಕಲ್ಯಾಣಮಂಟಪದ ಬಳಿ ಕೆಲ ನಿಮಿಷಗಳ ಕಾಲ ನಿಂತಿತ್ತು. ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ತಮ ಬೆಂಬಲಿಗರ ಜೊತೆಯಲ್ಲಿ ಹಾಜರಿದ್ದು, ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಪುಷ್ಪಾರ್ಚನೆ ಮೂಲಕ ಅಭಿಮಾನಿಗಳು ನಮನ ಸಲ್ಲಿಸಿದರು.
ನಂತರ ಬಿಡದಿಯಲ್ಲೂ ಅಭಿಮಾನಿಗಳು ನೆರೆದಿದ್ದು, ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಮಾಗಡಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಗುಬ್ಬಿ ಕ್ಷೇತ್ರದ ಎಸ್.ಆರ್.ಶ್ರೀನಿವಾಸ್ ಅವರು ಈ ವೇಳೆ ಹಾಜರಿದ್ದು, ಜನನಾಯಕನಿಗೆ ತಮ ಅಶ್ರುತರ್ಪಣ ಸಲ್ಲಿಸಿದರು. ದಾರಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಸ್ಕೈವಾಕ್‌ಗಳ ಮೇಲೆ ನಿಂತಿದ್ದ ಸಾರ್ವಜನಿಕರು ಪುಷ್ಪವೃಷ್ಟಿಗರೆಯುವ ಮೂಲಕ ತಮ ಅಭಿಮಾನ ಮೆರೆದರು.
ರಾಮನಗರದ ಐಜೂರು ವೃತ್ತದಲ್ಲಿ ಕೆಲಕಾಲ ಅಂತಿಮ ಯಾತ್ರೆಗೆ ನಿಲುಗಡೆ ಮಾಡಿದ್ದ ಸಂದರ್ಭದಲ್ಲಿ ಹಾಗೂ ಚನ್ನಪಟ್ಟಣದಲ್ಲಿ ನೂರಾರು ಅಭಿಮಾನಿಗಳು ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಮದ್ದೂರಿನ ಸೋಮನಹಳ್ಳಿ ತಲುಪಿದ ಪಾರ್ಥಿವ ಶರೀರವನ್ನು ಹೆದ್ದಾರಿ ಹತ್ತಿರ ಇರುವ ಕಾಫಿ ಡೇ ಸಮೀಪದಲ್ಲಿ ಇರಿಸಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತದಿಂದ ಸಚಿವರು, ಗಣ್ಯರು, ಹಿರಿಯ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು ಸೂಕ್ತ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
ಅಂತ್ಯಸಂಸ್ಕಾರ :
ರಾಷ್ಟ್ರಾದ್ಯಂತ ತನ್ನದೇ ಆದ ಛಾಪು ಮೂಡಿಸಿದ್ದ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆಗೆ ಸಕಲ ಸರ್ಕಾರಿ ಗೌರವದ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರ ಹಾಗೂ ರಾಜ್ಯಸರ್ಕಾರದ ಹಲವಾರು ಸಚಿವರು, ಗಣ್ಯರು, ಹಿರಿಯ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದಿದ್ದರಿಂದ ಸೂಕ್ತ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. 300 ಕೆ.ಜಿ. ಹೂವುಗಳನ್ನು ಬಳಕೆ ಮಾಡಿ ಪುಷ್ಪಾಲಂಕಾರ ಮಾಡಿದ್ದಲ್ಲದೆ 1 ಸಾವಿರ ಕೆ.ಜಿ. ಶ್ರೀಗಂಧವನ್ನು ಬಳಸಿ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗುವುದು. ಶ್ರೀರಂಗಪಟ್ಟಣದ ಭಾನುಪ್ರಕಾಶ್ ಶರ್ಮ ಅವರ ಪೌರೋಹಿತ್ಯದಲ್ಲಿ ಒಕ್ಕಲಿಗ ಸಂಪ್ರದಾಯದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗುವುದು.
ಎಸ್.ಎಂ.ಕೃಷ್ಣ ಅವರ ಮೊಮಗ ಅಮರ್ತ್ಯ ಹೆಗ್ಡೆಯವರು ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ.
ಗಣ್ಯರು ಭಾಗಿ
ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯಾತಿಗಣ್ಯ ನಾಯ ಕರು ಭಾಗವಹಿಸಿದ್ದರು. ಸೋಮನಹಳ್ಳಿಗೆ ಮಧ್ಯಾಹ್ನ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಳಿಗ್ಗೆ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ತೆಗೆದುಕೊಂಡು ಹೋದಾಗಿನಿಂದಲೂ ಜೊತೆಯಲ್ಲೇ ಇದ್ದರು. ಶವಪೆಟ್ಟಿಗೆಯನ್ನು ಎತ್ತಿಳಿಸುವುದರಿಂದ ಹಿಡಿದು ಎಲ್ಲಾ ಹಂತದಲ್ಲೂ ಸೂಕ್ಷ್ಮವಾಗಿ ಪರಿಸ್ಥಿತಿಯ ಉಸ್ತುವಾರಿ ನಿಗಾ ವಹಿಸಿದ್ದರು.ಸಂಜೆ ನಡೆದ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಧಾನಸಭಾ ವಿರೋಧಪಕ್ಷದ ನಾಯಕ ಆರ್.ಅಶೋಕ್, ರಾಜ್ಯಸರ್ಕಾರದ ಸಂಪುಟದ ಎಲ್ಲಾ ಸಚಿವರು, ಪಕ್ಷಭೇದ ಮರೆತು ಬಹುತೇಕ ಶಾಸಕರು, ಉದ್ಯಮಿಗಳು, ಬಂಧುಮಿತ್ರರು, ಆಪ್ತವರ್ಗ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಶ್ರೀಗಂಧ ಕಟ್ಟಿಗೆಗಳಿಂದ ಅಂತ್ಯಕ್ರಿಯೆ
ಶಾಸ್ತ್ರೋಕ್ತ ವಿಧಿವಿಧಾನಗಳ ಮೂಲಕ ಎಸ್.ಎಂ.ಕೃಷ್ಣ ಅವರ ಅಂತಿಮ ಕ್ರಿಯೆಗೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಪೌರೋಹಿತ್ಯ ನಡೆಸುವ ಭಾನುಪ್ರಕಾಶ್ ಶರ್ಮ ತಿಳಿಸಿದ್ದಾರೆ. ವಿವಿಧ ನದಿಗಳ ಜಲ ಮತ್ತು ಪಂಚಗವ್ಯ ಪ್ರೋಕ್ಷಣೆ ಮಾಡಿ ಪಾರ್ಥಿವ ಶರೀರದ ಶುದ್ಧತಾ ಕಾರ್ಯ ನಡೆಸಿ ಶ್ರೀಗಂಧ ಸಹಿತ ಕಟ್ಟಿಗೆಗಳನ್ನು ಬಳಸಿ ಅಗ್ನಿಸ್ಪರ್ಶ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ ಅಂತಿಮ ವಿಧಿವಿಧಾನ ಆರಂಭಗೊಂಡಿದ್ದು, ಯಾವುದೇ ಅಡೆತಡೆ ಇಲ್ಲದೆ ಎಸ್.ಎಂ.ಕೃಷ್ಣ ಅವರ ಆತ ಸದ್ಗತಿ ಪಡೆಯಲು ಶುದ್ಧೋದಕ ಕಾರ್ಯವನ್ನು ನಡೆಸಲಾಗಿದೆ. ನೇರವಾಗಿ ಭಗವಂತನ ಸನ್ನಿಧಾನಕ್ಕೆ ಸೇರಲು ಈ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಸುಮಾರು 3 ಗಂಟೆ ವೇಳೆಗೆ ಬಂದಿರುವಂತಹ ಕುಟುಂಬ ಸದಸ್ಯರು, ಸಚಿವರು, ಶಾಸಕರು ಹಾಗೂ ಇತರ ಮುಖಂಡರು ಅಂತಿಮನಮನ ಸಲ್ಲಿಸಿದ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದರು.
ಸೋಮನಹಳ್ಳಿಯಲ್ಲಿ ನೀರವ ಮೌನ
ಕೃಷ್ಣನೂರಿನಲ್ಲಿ ನೀರವ ಮೌನ ಆವರಿಸಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ತವರೂರಾದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ದುಃಖ ಮಡುವುಗಟ್ಟಿತ್ತು. ನಿನ್ನೆ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜನ ಆಘಾತಕ್ಕೆ ಒಳಗಾಗಿದ್ದರು. ಇಂದು ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆಯಲು ಜನ ಮುಗಿಬಿದ್ದರು.
ಸೋಮನಹಳ್ಳಿಯನ್ನು ದೇಶ-ವಿದೇಶಗಳಿಗೆ ತಲುಪಿಸಿದ ಕೀರ್ತಿ ಕೃಷ್ಣ ಅವರದಾಗಿತ್ತು. ಸೋಮನಹಳ್ಳಿಯ ಜನ ಕೃಷ್ಣ ಅವರ ಅಪಾರ ಕೀರ್ತಿಗೆ ಪಾತ್ರರಾಗಿದ್ದಾರೆ. ತಮ ಕೃಷ್ಣ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ತಮ ಹಳ್ಳಿಯ ಜನರನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಅವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ತೀರ್ಮಾನಿಸುತ್ತಿದ್ದಂತೆ ಜನರು ಸ್ವಯಂಪ್ರೇರಿತವಾಗಿ ಮುಂದಾದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸೋಮನಹಳ್ಳಿ ಗ್ರಾಮವಷ್ಟೇ ಅಲ್ಲದೆ ಸುತ್ತಮುತ್ತಲ ಗ್ರಾಮ ಸೇರಿದಂತೆ ಮಂಡ್ಯ ಜಿಲ್ಲೆಯಾದ್ಯಂತ ಜನ ಅಪಾರ ಸಂಖ್ಯೆಯಲ್ಲಿ ಆಗಮಿಸಿ ತಮ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ತಮ ಮಕ್ಕಳ ಭವಿಷ್ಯ ರೂಪಿಸಿ ಲಕ್ಷಾಂತರ ರೂ. ಸಂಬಳ ಪಡೆಯುವಂತೆ ಮಾಡಿದ ಮಹಾನ್ ನಾಯಕನ ನಿಧನಕ್ಕೆ ಜನ ಕಂಬನಿ ಮಿಡಿದರು.
ಚಿರಶಾಂತಿ ವಾಹನಕ್ಕೂ ಹೂಗಳ ಅಂಲಂಕಾರ
ಮಾಜಿ ಸಿಎಂ ಎಸ್.ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ವಿಶೇಷವಾಗಿ ಬಿಳಿ ಬಣ್ಣದ ಹೂ ಹಾಗೂ ತುಳಸಿ ಎಲೆಗಳಿಂದ ವಾಹನಕ್ಕೆ ಅಲಂಕಾರ ಮಾಡಲಾಗದೆ. ಗಾಜಿನಿಂದ ಕೂಡಿರುವ ಚಿರಶಾಂತಿ ವಾಹನದ ಮುಂಭಾಗದಲ್ಲಿ ಎಸ್.ಎಂ.ಕೃಷ್ಣ ಭಾವಚಿತ್ರ ಅಳವಡಿಸಲಾಗಿದೆ. ಸೇವಂತಿಗೆ, ತುಳಸಿ, ಗುಲಾಬಿ, ಮಿಕ್್ಸ ಲೀವ್್ಸ, ಜಿಪ್ಸಿ ಹೂವಿನಿಂದ ಅಲಂಕಾರ ಮಾಡಲಾಗಿದೆ.