ಬೆಂಗಳೂರು,ಡಿ.11- ಎಸ್.ಎಂ.ಕೃಷ್ಣ ಅವರ ನೆನಪಿಗಾಗಿ ಸ್ಮಾರಕ ನಿರ್ಮಿಸಲು ಚಿಂತನೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಈ ನಿಟ್ಟಿನಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತ್ಯಕ್ರಿಯೆಗಾಗಿ ನಿನ್ನೆ ಯಿಂದಲೂ ನಿರಂತರ ತಯಾರಿ ಗಳನ್ನು ನಡೆಸಲಾಗುತ್ತಿದೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಕುಟುಂಬ ಮತ್ತು ಹಿತೈಷಿಗಳಿಗೆ ವಾತಾವರಣ ಕಲ್ಪಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
24 ವರ್ಷಗಳಿಂದಲೂ ಎಸ್.ಎಂ.ಕೃಷ್ಣ ಅವರೊಂದಿಗೆ ನಾನು ಸಂಪರ್ಕದಲ್ಲಿದ್ದು, ಅವರಿಂದ ಸಾಕಷ್ಟು ಕಲಿತಿದ್ದೇನೆ. ಯಾರನ್ನೂ ಟೀಕೆ ಮಾಡದೇ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಟೀಕೆ ಮಾಡುವವರು ಅವರನ್ನು ನೋಡಿ ಕಲಿಯಬೇಕು ಎಂದರು.
ಎಸ್.ಎಂ.ಕೃಷ್ಣ ಅವರಿಗೆ ಅವರೇ ಸರಿಸಾಟಿ. ಅವರು ಅವರ ಅಧಿಕಾರಾವಧಿಯಲ್ಲಿ ರೂಪಿಸಲಾದ ಕಾರ್ಯಕ್ರಮಗಳು ಸದಾಕಾಲ ಪ್ರಸ್ತುತವಾಗಿರುತ್ತವೆ. ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ಕೇಂದ್ರಸಚಿವರಾಗಿ ಸಲ್ಲಿಸಿರುವ ಸೇವೆ ಅಮೋಘವಾದುದು.
ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಲಾದ ವಿಕಾಸಸೌಧ, ಉದ್ಯೋಗಸೌಧ, ಸ್ವಸಹಾಯ ಸಂಘಗಳ ಸ್ಥಾಪನೆ, ಬಿಸಿಯೂಟ ಯೋಜನೆ, ಕಾವೇರಿ ನೀರಾವರಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಸಂಸ್ಥೆಗಳನ್ನು ಹಾಗೂ ಯೋಜನೆಗಳನ್ನು ಆರಂಬಿಸಿದ ಕೀರ್ತಿ ಎಸ್.ಎಂ.ಕೃಷ್ಣ ಅವರಿಗೆ ಸೇರುತ್ತದೆ ಎಂದರು.
ಎಸ್.ಎಂ.ಕೃಷ್ಣ ಅವರ ಶಾಶ್ವತ ಸಾರಕವನ್ನು ನಿರ್ಮಿಸಬೇಕೆಂಬುದು ಜನಸಾಮಾನ್ಯರ ಬೇಡಿಕೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.