ಬೆಂಗಳೂರು,ಡಿ.11– ಎಸ್.ಎಂ.ಕೃಷ್ಣ ಅಮೆರಿಕದಿಂದ ಮರಳಿದಾಗ ಆಗಿನ ಕಾಲಕ್ಕೆ ರೈಲ್ವೆ ನಿಲ್ದಾಣದಿಂದ 111 ಎತ್ತುಗಳ ಗಾಡಿಗಳಲ್ಲಿ ಮದ್ದೂರಿನಲ್ಲಿ ಮೆರವಣಿಗೆ ಮಾಡಲಾಯಿತು ಎಂದು ಸೋಮನಹಳ್ಳಿಯ ಹಿರಿಯರು ವಿವರಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರ ಅಂತಿಮದರ್ಶನದಲ್ಲಿ ಭಾಗವಹಿಸಿದ್ದ ಅವರುಗಳು ವೀರಣ್ಣಗೌಡ ಅವರು ಮದ್ದೂರಿನ ಶಾಸಕರಾಗಿದ್ದರು, ಮೈಸೂರಿನ ಹುಲಿ ಎಂದು ಹೆಸರಾಗಿದ್ದರು. ಎಸ್.ಎಂ.ಕೃಷ್ಣ 1961 ರಲ್ಲಿ ಅಮೆರಿಕದಿಂದ ವಾಪಸ್ ಬಂದು 1962 ರಲ್ಲಿ ವೀರಣ್ಣಗೌಡರ ವಿರುದ್ಧ ಚುನಾವಣೆಗೆ ನಿಂತರು. ಜನ ಸ್ವಯಂಪ್ರೇರಿತವಾಗಿ ಸೈಕಲ್ಗಳಲ್ಲಿ ಅವರ ಪರವಾಗಿ ಪ್ರಚಾರ ನಡೆಸಿ ಎಸ್.ಎಂ.ಕೃಷ್ಣ ಅವರನ್ನು ಗೆಲ್ಲಿಸಿದರು ಎಂದು ವಿವರಿಸಿದ್ದಾರೆ.
ಮೈಸೂರಿನ ಹುಲಿಯನ್ನು ಸೋಲಿಸಿದ ಹುಡುಗ ಯಾರು ಎಂದು ನೋಡಲು ದೂರದೂರುಗಳಿಂದಲೂ ಆಗ ಜನ ಎಸ್.ಎಂ.ಕೃಷ್ಣ ಅವರ ಮನೆ ಬಳಿಗೆ ಬರುತ್ತಿದ್ದರು ಎಂದು ನೆನಪಿಸಿಕೊಂಡರು.1967 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರು. ಅದೇ ವರ್ಷ ಸಂಸದ ಶಿವನಂಜಪ್ಪ ಸಾವನ್ನಪ್ಪಿದ್ದರು. ನಂತರ 1968ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ಸ್ಪರ್ಧಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ಹುಟ್ಟೂರು ಸೋಮನಹಳ್ಳಿ ಎಂದು ಅಪಾರ ಅಭಿಮಾನ ಹೊಂದಿದ್ದರು. ಮಂಡ್ಯ ಜಿಲ್ಲೆಯ ಜನ ಹೋದರೆ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಗ್ರಾಮಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ಮಾಡಿಕೊಟ್ಟಿದ್ದಾರೆ. ಅವರಂತಹ ನಾಯಕರು ಮತ್ತೆ ಹುಟ್ಟಿಬರುವುದಿಲ್ಲ ಎಂದು ತಿಳಿಸಿದ್ದಾರೆ.
ಸೋಮನಹಳ್ಳಿ ಗ್ರಾಮದ ಮನೆಯಲ್ಲಿ ನಿಲ್ಲಿಸಲಾಗಿರುವ ಅಂಬಾಸಿಡರ್ ಕಾರನ್ನು ಜನ ಕುತೂಹಲದಿಂದ ವೀಕ್ಷಿಸುತ್ತಿರುವುದು ಕಂಡುಬಂದಿತು. ಚುನಾವಣಾ ಪ್ರಚಾರಕ್ಕಾಗಿ ಈ ಕಾರನ್ನು ಬಳಸುತ್ತಿದ್ದರು. ಅದನ್ನು ಈಗಲೂ ಸುಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಎಸ್.ಎಂ.ಕೃಷ್ಣ ಅವರ ಸಹೋದರ ಎಸ್.ಎಂ.ಶಂಕರ್ ಕಾರು ಬಳಸುತ್ತಿದ್ದರು. ಅವರ ನಂತರ ಶಂಕರ್ ಅವರ ಪುತ್ರ ಗುರುಚರಣ್ ಆ ಕಾರನ್ನು ಬಳಸುತ್ತಿದ್ದಾರೆ.
ಮದ್ದೂರು ತಾಲೂಕಿನಲ್ಲಿ ಕಾರ್ಖಾನೆ ನಿರ್ಮಿಸಿದ್ದರಿಂದ ಈ ಭಾಗ ಅಭಿವೃದ್ಧಿಯಾಯಿತು. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತರಿಗೆ ಕೈಗಾರಿಕೆಯಿಂದ ಆರ್ಥಿಕ ಶಕ್ತಿ ಹೆಚ್ಚಾಯಿತು. ತವರೂರಿಗೆ ಅವರು ಕೊಟ್ಟಿರುವ ಕೊಡುಗೆ ಅಪಾರವಾದುದು ಎಂದರು.