ಬೆಂಗಳೂರು,ಡಿ.12– ಪ್ರೀತ್ಸೆ…ಪ್ರೀತ್ಸೆ…. ಎಂದು ಮದುವೆಯಾಗಿ ಒಂದು ಮಗುವಿರುವ ಮಹಿಳೆಗೆ ಪೀಡಿಸುತ್ತಿದ್ದ ಪಾಗಲ್ ಪ್ರೇಮಿ ಚಾಕುವಿನಿಂದ ಆಕೆಗೆ ಇರಿದು ಕೊಲೆ ಮಾಡಿ ನಂತರ ಆತಹತ್ಯೆಗೆ ಶರಣಾಗಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ವೂಓಹ ಮಂಡಲ್ (26) ಎಂಬ ಮಹಿಳೆಯನ್ನು ಕೊಂದು ಆತಹತ್ಯೆಗೆ ಶರಣಾದ ಪಾಗಲ್ ಪ್ರೇಮಿ ಮಿಥುನ್ ಮಂಡಲ್ ಇಬ್ಬರೂ ಸಹ ಪಶ್ಚಿಮ ಬಂಗಾಳ ರಾಜ್ಯದವರು.ವೈಟ್ ಫೀಲ್ಡ್ ನ ಸಾವಿತ್ರಮ ಶೆಡ್ನಲ್ಲಿ ವಾಸವಿದ್ದ ವೂಓಹ ಮಂಡಲ್ – ಹರಿಪ್ರಸಾದ್ ಮಂಡಲ್ ದಂಪತಿಗೆ ಒಂದು ಮಗುವಿದೆ.
ಈ ಮೊದಲು ವೂಓಹ ಅವರು ಕೆಲಸಮಾಡುತ್ತಿದ್ದ ಶಾಲೆಯಲ್ಲಿಯೇ ಮಿಥುನ್ ಮಂಡಲ್ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ವೈಟ್ಫೀಲ್ಡ್ ನ ಪಿಜಿ ಒಂದರಲ್ಲಿ ವಾಸವಾಗಿದ್ದನು.
ಆಗಿನಿಂದಲೂ ಮಿಥುನ್ ಈ ಮಹಿಳೆಗೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನನ್ನನ್ನು ಪ್ರೀತಿಸುವಂತೆ ಹಿಂಸೆನೀಡುತ್ತಿದ್ದನಲ್ಲದೇ ನೀನು ಪತಿ, ಮಗುವನ್ನು ಬಿಟ್ಟು ಬಾ, ನಾವಿಬ್ಬರೂ ಒಂದಾಗೋಣ ಎಂದು ಪೀಡಿಸುತ್ತಿದ್ದನಂತೆ.
ಈತನ ವರ್ತನೆಗೆ ಬೇಸತ್ತು ಮಹಿಳೆ ಆ ಶಾಲೆಬಿಟ್ಟು ಆತನಿಂದ ಅಂತರ ಕಾಯ್ದುಕೊಂಡು ಬೇರೆ ಖಾಸಗಿ ಶಾಲೆಯಲ್ಲಿ ಕೇರ್ಟೇಕರ್ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಆದರೂ ಸಹ ಈತನ ಕಾಟ ತಪ್ಪಿರಲಿಲ್ಲ.
ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಈ ಮಹಿಳೆ ನಿನ್ನೆ ಸಂಜೆ 7.30ರ ಸುಮಾರಿನಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಇದೇ ಸಮಯಕ್ಕಾಗಿ ಹೊಂಚು ಹಾಕಿ ಕುಳಿತ್ತಿದ್ದ ಪಾಗಲ್ ಪ್ರೇಮಿ ಹಿಂಬಾಲಿಸಿಕೊಂಡು ಹೋಗಿ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಓಡಿಹೋಗಿದ್ದಾನೆ.
ನಂತರ ಮಿಥುನ್ ಮಂಡಲ್ ನಲ್ಲೂರಳ್ಳಿ ಕೆರೆ ಬಳಿ ಹೋಗಿ ಅಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.ವಿಷಯ ತಿಳಿಯುತ್ತಿದ್ದಂತೆ ವೈಟ್ಫೀಲ್‌್ಡ ಠಾಣಾ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.