ಬೆಳಗಾವಿ,ಡಿ.12- ಮುಖ್ಯಮಂತ್ರಿ ಸ್ಥಾನವನ್ನು ಒದ್ದು ಕಿತ್ತುಕೊಳ್ಳುತ್ತೀರಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸಭೆಯಲ್ಲಿ ಪ್ರಶ್ನಿಸಿದರು.
ಸಂತಾಪ ಸೂಚನಾ ನಿರ್ಣಯದ ಮೇಲೆ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವಸ್ಥಾನ ಕೈತಪ್ಪುವ ಪರಿಸ್ಥಿತಿ ಇತ್ತು. ಆಗ ಕೃಷ್ಣ ಅವರ ಮನೆಯ ಬಾಗಿಲನ್ನು ಒದ್ದ ಘಟನೆಯನ್ನು ಉಲ್ಲೇಖ ಮಾಡಿದರು. ಆಗ ಮಧ್ಯೆ ಪ್ರವೇಶಿಸಿದ ಆರ್. ಅಶೋಕ್ ಮೇಲಿನಂತೆ ಪ್ರಶ್ನಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಡಿ.ಕೆ.ಶಿವಕುಮಾರ್, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸೇರಬೇಕಾದವರ ಸಚಿವರ ಹಾಗೂ ಖಾತೆಗಳ ಪಟ್ಟಿಯನ್ನು ನಾನೇ ಸಿದ್ಧಪಡಿಸ್ದೆಿ. ಆದರೆ ರಾಜಭವನಕ್ಕೆ ಹೋಗಿದ್ದು ಮಾತ್ರ 9 ಶಾಸಕರ ಹೆಸರು. ಅದರಲ್ಲಿ ನನ್ನ ಹೆಸರಿರಲಿಲ್ಲ. ಜಾತಿಗೊಂದು ಸಚಿವ ಸ್ಥಾನ ನೀಡಲಾಗಿತ್ತುಎಂದರು.
ಈ ವಿಚಾರವನ್ನು ದ್ವಾರಕಾನಾಥ್ ಎಂಬುವರ ಗಮನಕ್ಕೆ ತಂದಾಗ ಕೊಡುವುದಿಲ್ಲ, ಒದ್ದು ಕಿತ್ತುಕೊಳ್ಳಬೇಕೆಂಬ ಸಲಹೆ ನೀಡಿದರು. ಅದೇ ರೀತಿ ನಾನು, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಜೊತೆ ಹೋಗಿ ಎಸ್.ಎಂ.ಕೃಷ್ಣ ಅವರ ಮನೆಬಾಗಿಲನ್ನು ಒದ್ದು ಎಂದು ಹೇಳಿದರು.
ಯಾವಾಗಲೂ ನಿಮೊಂದಿಗಿರುತ್ತೇವೆ. ನನ್ನ ಹೊರತು ಪ್ರಮಾಣವಚನ ಆಗಬಾರದು ಎಂದು ಹೇಳಿದೆ. ಆಗ ಕೃಷ್ಣ ಅವರು ಏನು ನಿನ್ನ ರೌದ್ರಾವತಾರ? ಎಂದು ಕೇಳಿದರು. ಅಲ್ಲದೆ ಈಗ ನೀನು ಮಂತ್ರಿಯಾಗಲು ಸಮಯ ಸರಿಯಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆ ಎಂದರು. ಆದರೆ ಪಟ್ಟು ಹಿಡಿದು ಪ್ರಮಾಣವಚನದ ಸಮಯವನ್ನು ಬದಲಾಯಿಸಿ ಹೈಕಮಾಂಡ್ ಮೂಲಕ ಒಪ್ಪಿಗೆ ಪಡೆದು ನಾವೆಲ್ಲ ಸಚಿವರಾದೆವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಆರ್.ಅಶೋಕ್, ಈಗಲೂ ಅದೇ ಪರಿಸ್ಥಿತಿ ಇದೆ. ಅದೇ ರೀತಿ ಮಾಡುತ್ತೀರಾ? ಎಂದು ಪ್ರಶ್ನಿಸಿದರು.ಮಾತು ಮುಂದುವರೆಸಿದ ಅವರು, ನಾನು ಟೀಕೆ ಮಾಡುವುದಿಲ್ಲ. ಎಸ್.ಎಂ.ಕೃಷ್ಣ ಅವರಿಂದ ನಿಮಗೆ ಒಳ್ಳೆಯದಾಗಿದೆ. ಈಗ ಮುಖ್ಯಮಂತ್ರಿ ಸ್ಥಾನವನ್ನು ಒದ್ದು ಕಿತ್ತುಕೊಳ್ಳಬೇಕೆಂದು ಹೇಳುತ್ತೀರಾ? ಎಂದು ಪ್ರಶ್ನಿಸಿದರು.
ನೀವು ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಾ? ಯಾವಾಗ ಮುಹೂರ್ತ ಫಿಕ್‌್ಸ ಆಗಿದೆ? ಜನವರಿಯೊಳಗೆ ನೀವು ಮುಖ್ಯಮಂತ್ರಿಯಾದರೆ ಆಗುತ್ತೀರಿ. ಇಲ್ಲವೆಂದರೆ ಇಲ್ಲ. ಜನವರಿ ನಂತರ ನಿಮ ಗ್ರಹಗತಿ ಸರಿಯಿಲ್ಲ ಎಂದು ಛೇಡಿಸಿದರು.
ನೀವು ಸೂಕ್ತ ತೀರ್ಮಾನ ಮಾಡಿ. ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಬಾರದು. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಎಸ್.ಆರ್.ಬೊಮಾಯಿ, ಜೆ.ಎಚ್.ಪಟೇಲ್ ಅವರ ವಿಚಾರದಲ್ಲಿ ಅವರ ನಡುವೆ ಇದೇ ರೀತಿಯ ಪರಿಸ್ಥಿತಿ ಉಂಟಾಗಿ ಬೇರೆಯವರಾದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ನಿಮ ವಿಚಾರದಲ್ಲಿ ಹಾಗಾಗಬಾರದು ಹುಷಾರಾಗಿರಿ ಎಂದು ಹೇಳಿದರು.
ಬಿಜೆಪಿ ಶಾಸಕ ಚಂದ್ರಪ್ಪಅವರು ಜನತಾದಳದಿಂದ 6 ಶಾಸಕರು ಎಸ್.ಎಂ.ಕೃಷ್ಣ ಅವರಿಗೆ ಮತ ಹಾಕಿದೆವು ಎಂದು ಹೇಳಿದರು. ಆಗ ಡಿ.ಕೆ.ಶಿ ಅವರು ದೇವೇಗೌಡರ ಮತವೂ ಬಿದ್ದಿತ್ತು ಎಂದರು.
ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ರವರು ವಿಪಕ್ಷ ನಾಯಕರು ನಿಮಗೆ 2-3 ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ನೀವು ನಿಮ ಕೊಠಡಿಯಲ್ಲಿ ಉತ್ತರ ಕೊಡಿ, ಸದನದಲ್ಲಿ ಕೊಡಬೇಡಿ ಎಂದು ಡಿಕೆಶಿಯವರಿಗೆ ಕಿವಿಮಾತು ಹೇಳಿದರು.ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ ಮಾತನಾಡಿ, ನಿಮ ನೇತೃತ್ವದಲ್ಲಾದರೂ ಪಂಚಮಸಾಲಿ ಮೀಸಲಾತಿ ಸಿಗಲಿ ಎಂದು ಡಿಕೆಶಿಯವರನ್ನು ಛೇಡಿಸಿದರು.
ಮತ್ತೆ ಮಾತು ಮುಂದುವರೆಸಿದ ಡಿಕೆಶಿ, ನಾನು ಇಲ್ಲಿ ಉತ್ತರ ಕೊಡುವುದಿಲ್ಲ. ಕೊಠಡಿಯಲ್ಲೇ ಉತ್ತರ ಕೊಡುತ್ತೇನೆ ಎಂದು ಹೇಳಿದರು.ಆಗ ಅಶೋಕ್ರವರು ಸಭಾಧ್ಯಕ್ಷರನ್ನು ಉದ್ದೇಶಿಸಿ ಹೊಸ ಪೀಠದಲ್ಲೇ ಇರಬೇಕೆಂದು ನೀವು ಭಾವಿಸಿದ್ದೀರಾ? ಎಂದು ಕೇಳಿದರು.
30 ಪ್ರತಿಪಕ್ಷಗಳ ಶಾಸಕರು ಬರುತ್ತಾರೆ:
ಆಗ ಮಾತು ಮುಂದುವರೆಸಿದ ಡಿ.ಕೆ.ಶಿವಕುಮಾರ್ ಅವರು, ಪ್ರತಿಪಕ್ಷಗಳ ಕಡೆಯ 25ರಿಂದ 30 ಶಾಸಕರು ನಮ ಕಡೆಗೆ ಬರುತ್ತಾರೆ.ಆಗ ಅಶೋಕ್ ಅವರು ಬಹುಶಃ ಡಿಕೆಶಿಯವರೇ ನಮ ಕಡೆ ಬರುತ್ತಾರೆ ಎಂದು ತಿರುಗೇಟು ನೀಡಿದರು.
ಮಾತು ಮುಂದುವರೆಸಿದ ಡಿಕೆಶಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಕರೆತರಲು ಮಾಜಿ ಸಚಿವ ಯೋಗೇಶ್ವರ್ ಪ್ರಯತ್ನಿಸಿದ್ದಾರೆ ಎಂಬೆಲ್ಲಾ ವಿಚಾರಗಳು ಪ್ರಸ್ತಾಪವಾಗಿದ್ದವು ಎಂದು ಹೇಳಿ ಈ ವಿಚಾರದ ಚರ್ಚೆಗೆ ತೆರೆ ಎಳೆದರು.