Thursday, December 26, 2024
Homeರಾಜ್ಯಸದನದಲ್ಲಿ ಜಾತಿ ನಿಂದನೆ ಕುರಿತು ಮಾತಿನ ಚಕಮಕಿ, ವಿಪಕ್ಷಗಳಿಂದ ಸಭಾತ್ಯಾಗ

ಸದನದಲ್ಲಿ ಜಾತಿ ನಿಂದನೆ ಕುರಿತು ಮಾತಿನ ಚಕಮಕಿ, ವಿಪಕ್ಷಗಳಿಂದ ಸಭಾತ್ಯಾಗ

Clashes over caste abuse in the House, opposition parties walk out

ಬೆಳಗಾವಿ, ಡಿ.13– ವಿಧಾನಸಭೆ ಕಲಾಪದಲ್ಲಿ ಜಾತಿ ನಿಂದನೆ, ವಕ್ಫ್ ವಿಚಾರಗಳ ಪ್ರಸ್ತಾಪವಾಗಿ ಆಡಳಿತ, ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಡಳಿತ ಪಕ್ಷದ ಶಾಸಕರ ನಡವಳಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ನಡೆದಿದೆ.

ಪ್ರಶ್ನೋತ್ತರ ಹಾಗೂ ಶೂನ್ಯವೇಳೆ ಬಳಿಕ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಅವರಿಗೆ ಸಾರ್ವಜನಿಕ ಮಹತ್ವದ ವಿಷಯವಾಗಿ ವಕ್ಫ್ ವಿಚಾರವನ್ನು ಪ್ರಸ್ತಾಪಿಸಲು ಸಭಾಧ್ಯಕ್ಷರು ಅವಕಾಶ ಕಲ್ಪಿಸಿದರು.

ಈ ನಡುವೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಳೆಹಾನಿ ಕುರಿತು ಸ್ವಯಂಪ್ರೇರಿತ ಹೇಳಿಕೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆರ್‌.ಅಶೋಕ್‌ ಸಹಮತ ವ್ಯಕ್ತಪಡಿಸಿದರು. ಕಂದಾಯ ಸಚಿವರು ಹೇಳಿಕೆ ನೀಡಲು ಆರಂಭಿಸುವ ಮುನ್ನವೇ ಆಡಳಿತ ಪಕ್ಷದ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಪ್ರಸಾದ್‌ ಅಬ್ಬಯ್ಯ, ನಯನಾ ಮೋಟಮ, ಶರತ್‌ ಬಚ್ಚೇಗೌಡ ಮತ್ತಿತರರು ನಾವು ಕೂಡ ನಿಲುವಳಿ ಸೂಚನೆಯಡಿ ನೋಟೀಸ್‌‍ ಕಳುಹಿಸಿದ್ದೇವೆ. ಅವುಗಳ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಿ. ಈ ಸದನದ ಸದಸ್ಯರೊಬ್ಬರು ಜಾತಿನಿಂದನೆ ಮಾಡಿರುವುದು ಎಫ್‌ಎಸ್‌‍ಎಲ್‌ ವರದಿಯಲ್ಲಿ ಸಾಬೀತಾಗಿದೆ ಎಂದು ಪ್ರಸ್ತಾಪಿಸಿದರು.

ಸಭಾಧ್ಯಕ್ಷರು ಕಂದಾಯ ಸಚಿವರ ಹೇಳಿಕೆಗೆ ಅವಕಾಶ ಮಾಡಿಕೊಟ್ಟಾಗ ಆಡಳಿತ ಪಕ್ಷದ ಶಾಸಕರು ಏರಿದ ಧ್ವನಿಯಲ್ಲಿ ಗದ್ದಲ ಎಬ್ಬಿಸಿದರು. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌‍ನಿಂದಲೂ ಪ್ರತಿಗದ್ದಲಗಳು ಕೇಳಿಬಂದವು.ಸಭಾಧ್ಯಕ್ಷ ಯು.ಟಿ.ಖಾದರ್‌ ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಟ್ಟರು. ಆಡಳಿತ ಪಕ್ಷದ ಶಾಸಕರೇ ಈ ರೀತಿ ವರ್ತಿಸುವುದು ಸರಿಯಲ್ಲ, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಜಾತಿನಿಂದನೆಯಾಗಿದೆ, ಇಂತಹ ಪ್ರಕರಣಗಳಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಇಲ್ಲಿ ಸುಮನೆ ಕೂರಬೇಕೆ ಎಂದು ಪಿ.ಎಂ.ನರೇಂದ್ರಸ್ವಾಮಿ ಅವರು ಏರಿದ ಧ್ವನಿಯಲ್ಲಿ ಗದ್ದಲ ಮಾಡುತ್ತಲೇ ಇದ್ದರು.

ವಿಪಕ್ಷ ನಾಯಕ ಆರ್‌.ಅಶೋಕ್‌ ಈ ಸರ್ಕಾರಕ್ಕೆ ಸರಿಯಾಗಿ ಸದನ ನಡೆಸಲು ಬರುವುದಿಲ್ಲ. ವಿರೋಧ ಪಕ್ಷವಾಗಿ ನಾವು ಸಹಕಾರ ಕೊಡುತ್ತೇವೆ ಎಂದರೂ ಆಡಳಿತ ಪಕ್ಷದ ಶಾಸಕರೇ ಅತಿರೇಕದ ವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಈ ವೇಳೆ ಮಾತಿನ ಚಕಮಕಿ, ಗದ್ದಲ ಹೆಚ್ಚಾಯಿತು. ಆಡಳಿತ ಪಕ್ಷದ ಶಾಸಕರ ನಡವಳಿಕೆ ವಿರೋಧಿಸಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ಜೆಡಿಎಸ್‌‍ ಶಾಸಕರು ಅವರನ್ನು ಅನುಸರಿಸಿದರು.

ಬಿಜೆಪಿಯ ಎಸ್‌‍.ಟಿ.ಸೋಮಶೇಖರ್‌ ಮಾತ್ರ ಸಭಾತ್ಯಾಗ ಮಾಡದೆ ಸದನದಲ್ಲಿ ಕುಳಿತಿದ್ದರು. ಶಿವರಾಮ್‌ ಹೆಬ್ಬಾರ್‌ ಕೂಡ ಅವರ ಬಳಿ ಬಂದು ಕುಳಿತುಕೊಂಡರು. ಕಂದಾಯ ಸಚಿವ ಕೃಷ್ಣಭೈರೇಗೌಡ, ಇದು ಮಹತ್ವದ ವಿಚಾರ. ಮಳೆ ಹಾನಿಯಾಗಿದೆ. ವಿರೋಧ ಪಕ್ಷಗಳು ಸಹಕಾರ ಮಾಡಬೇಕು. ಸಭಾತ್ಯಾಗ ಮಾಡಬಾರದು. ಹಾನಿ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಪದೇ ಪದೇ ಮನವಿ ಮಾಡಿದರು.

ಆದರೆ, ಆಡಳಿತ ಪಕ್ಷದ ಶಾಸಕರೇ ಈ ರೀತಿ ವರ್ತನೆ ಮಾಡುವಾಗ ನಾವು ಹೇಗೆ ಇರಬೇಕು. ಇದೇ ರೀತಿಯ ವರ್ತನೆಗಳಾದರೆ ನಾವು ಅಧಿವೇಶನಕ್ಕೆ ಬರುವುದಿಲ್ಲ ಎಂದು ಹೇಳಿ ಆರ್‌.ಅಶೋಕ್‌ ಹಾಗೂ ಮತ್ತಿತರರು ಹೊರನಡೆದರು.

RELATED ARTICLES

Latest News