ಬೆಳಗಾವಿ,ಡಿ.13- ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 144.75 ಕೋಟಿ ರೂ. ಮೊತ್ತದಲ್ಲಿ ಶೀತಲಗೃಹ ಮತ್ತು ಇತರ ಮೂಲಸೌಕರ್ಯ ಕಾರ್ಯಗಳನ್ನು ಕೈಗೊಳ್ಳಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಕ್ತ ಸಾಲಿನ ಆರ್ಐಡಿಎಫ್-30 ಯೋಜನೆಯಡಿ 254 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡುವಂತೆ ಕಳೆದ ಮೇ 18ರಂದು ಕೋರಲಾಗಿತ್ತು. ಆ.8ರಂದು ಆರ್ಥಿಕ ಇಲಾಖೆ 144. 75 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿರುತ್ತದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಅಧಿನಿಯಮಕ್ಕೆ ತಿದ್ದುಪಡಿ ತಂದ ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೃಷಿ ಉತ್ಪನ್ನಗಳ ಆವಕ ಹೆಚ್ಚಾಗಿ ಬರುತ್ತಿವೆ. ರೈತರು ಬೆಳೆಗೆ ಯೋಗ್ಯ ದರ ಹಾಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೀತಲ ಗೃಹಗಳನ್ನು ಸ್ಥಾಪಿಸಲು ಮತ್ತು ಹೆಚ್ಚು ಮೂಲಸೌಲಭ್ಯ ಕಲ್ಪಿಸಲು ಸಚಿವರು ಹಾಗೂ ಶಾಸಕರಿಂದ ಕೋರಿಕೆಗಳು ಸ್ವೀಕೃತವಾಗಿದೆ.
ಈ ಹಿನ್ನಲೆಯಲ್ಲಿ 2024-25ನೇ ಸಾಲಿನ ಆರ್ಡಿಎಫ್-30 ಯೋಜನೆಯಡಿ 374.75 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ ಎಂದು ಹೇಳಿದರು.
ಅರಸೀಕೆರೆ ಅಬ್ಬನಘಟ್ಟ ಕಾವಲ್, ಉಪಮಾರುಕಟ್ಟೆ ಪ್ರಾಂಗಣದಲ್ಲಿ 5 ಕೋಟಿ ವೆಚ್ಚದಲ್ಲಿ ಶೀತಲಗೃಹ ಸ್ಥಾಪಿಸುವ ವಿಷಯವು ಹೆಚ್ಚುವರಿ ಅನುದಾನ ಕೋರಿ ಸಲ್ಲಿಸುವ ಪ್ರಸ್ತಾವನೆಯಲ್ಲಿ ಸೇರಿದ್ದು, ಅನುಮೋದನೆ ದೊರೆತ ಕೂಡಲೆ ಶೀತಲಗೃಹ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಬಾರ್ಡ್ನಿಂದ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ತೋಟಗಾರಿಕೆ ಇಲಾಖೆ, ಕೆಫೆಟ್ನಲ್ಲೂ ಶೀತಲಗೃಹ ನಿರ್ಮಾಣಕ್ಕೆ ಅನುದಾನ ಪಡೆಯಬಹುದಾಗಿದ್ದು, ಅರಸೀಕೆರೆಯಲ್ಲಿ ಶೀತಲಗೃಹ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.