ಬೆಂಗಳೂರು,ಡಿ.14- ವಿಜೃಂಭಣೆಯಿಂದ ನನ್ನ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಡಿಸೆಂಬರ್ 16ರಂದು ನನ್ನ ಜನದಿನ.
ಪ್ರತೀ ವರ್ಷ ಪಕ್ಷದ ಕಾರ್ಯಕರ್ತರು ಬಹಳ ಅರ್ಥಪೂರ್ಣವಾಗಿ ನನ್ನ ಹುಟ್ಟುಹಬ್ಬ ಆಚರಿಸುತ್ತಾ ನನ್ನ ಬದುಕಿಗೆ ಸಾರ್ಥಕತೆ ತಂದು ಕೊಟ್ಟಿದ್ದೀರಿ. ರಾಜಕೀಯವಾಗಿ ನನ್ನ ಯಶಸ್ಸಿಗೆ ಮೂಲ ಆಧಾರಸ್ತಂಭವೇ ತಾವುಗಳು. ಆ ಕೃತಜ್ಞತಾ ಭಾವದಿಂದ ನಿಮಲ್ಲಿ ನನ್ನದೊಂದು ವಿನಮ್ರ ಕಳಕಳಿಯ ಮನವಿ ಎಂದಿದ್ದಾರೆ.
ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ನಾನು ನವದೆಹಲಿಯಲ್ಲಿಯೇ ಉಳಿಯಬೇಕಾಗಿದೆ. ಅಲ್ಲದೆ, ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪವೂ ಸಾಗಿದೆ. ಇಂಥಹ ಸನ್ನಿವೇಶದಲ್ಲಿ ವಿಜೃಂಭಣೆಯ ಹುಟ್ಟುಹಬ್ಬ ಬೇಡ ಎಂದು ಹೇಳಿದ್ದಾರೆ.
ತಾವುಗಳು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಅಷ್ಟು ಸಾಕು ನನಗೆ. ಸಾಧ್ಯವಾದರೆ ಸಮಾಜಕ್ಕೆ, ದುರ್ಬಲ ಜನರಿಗೆ ಏನಾದರೂ ಸಹಾಯ ಮಾಡಿ. ಜನಸೇವೆ ಜಾತ್ಯತೀತ ಜನತಾದಳ ಪಕ್ಷದ ಮೂಲತತ್ತ್ವ. ಅದೇ ನನಗೆ ತಾವು ನನಗೆ ಕೊಡುವ ಉಡುಗೊರೆ ಎಂದು ಕಾರ್ಯಕರ್ತರಲ್ಲಿ ಅವರು ಮನವಿ ಮಾಡಿದ್ದಾರೆ.