Thursday, December 26, 2024
Homeರಾಜ್ಯವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ಡಾ.ಎಚ್‌.ಎಲ್‌‍.ನಾಗರಾಜ್‌ ನೇಮಕ

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ಡಾ.ಎಚ್‌.ಎಲ್‌‍.ನಾಗರಾಜ್‌ ನೇಮಕ

Dr. HL Nagaraj appointed as successor to Vishwa Vokkaligara Mahasamsthan Math

ಬೆಂಗಳೂರು,ಡಿ.14- ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದಿರುವ ಕೆಎಎಸ್‌‍ ಅಧಿಕಾರಿ, 49 ವರ್ಷದ ಡಾ.ಎಚ್‌.ಎಲ್‌‍.ನಾಗರಾಜ್‌ ಅವರನ್ನು ನೇಮಿಸಲಾಗಿದೆ ಎಂದು ವಿಶ್ವಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ವಾಮೀಜಿ, ನನಗೆ ಈಗ 81 ವರ್ಷ ಆಗಿದೆ. ಹೀಗಾಗಿ, ನಮ ಮಠದೊಂದಿಗೆ ಅನೇಕ ವರ್ಷಗಳಿಂದ ಸಂಪರ್ಕದಲ್ಲಿರುವ, ಸೇವಾ ಕಾರ್ಯಗಳನ್ನು ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಚ್‌.ಎಲ್‌‍.ನಾಗರಾಜ್‌ ಅವರನ್ನು ಉತ್ತರಾಧಿಕಾರಿಯಾಗಿ ಭಗವಂತನ ಇಚ್ಛೆಯಂತೆ ಆಯ್ಕೆ ಮಾಡಲಾಗಿದೆ.

ಈ ಆಯ್ಕೆಗೆ ಮಠದ ಟ್ರಸ್ಟ್‌ನ ಎಲ್ಲಾ ಸದಸ್ಯರು ಸರ್ವಾನುಮಂತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಮಠದ ಉತ್ತರಾಧಿಕಾರಿಯಾಗಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು ನಾಥ ಪರಂಪರೆಯಂತೆ ನಡೆಸಿಕೊಂಡು ಹೋಗಲಿದ್ದಾರೆ ಎಂದು ಹೇಳಿದರು.

ಇಂದು ಸಂಜೆ ಆರಂಭವಾಗುವ ವಿಧಿ ವಿಧಾನಗಳು, ಕಾರ್ಯಕ್ರಮಗಳು ಭಾನುವಾರ ಸಂಜೆವರೆಗೂ ಜರುಗಲಿವೆ. ಹತ್ತು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಜಗದ್ಗುರು ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಮಠಗಳ ಪೀಠಾಧ್ಯಕ್ಷರ ಸಮುಖದಲ್ಲಿ ಸನ್ಯಾಸ ದೀಕ್ಷೆ ನೀಡಿ ಉತ್ತರಾಧಿಕಾರಿಯಾಗಿ ನೇಮಿಸಲಾಗುತ್ತದೆ ಎಂದು ಹೇಳಿದರು.

ಧಾರ್ಮಿಕತೆ ಮತ್ತು ಸಮಾಜ ಸೇವಾ ಮನೋಭಾವ ಹೊಂದಿದ್ದ ನಾಗರಾಜ್‌ ಅವರು ಅವಿವಾಹಿತರಾಗಿಯೇ ಇದ್ದಾರೆ. ಅವರು ಶನಿವಾರದಿಂದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಮಹಾಸ್ವಾಮೀಜಿಯಾಗಿ ಮಠದ ಕಾರ್ಯಗಳು, ಶ್ರೀಮಠದ ಶಿಕ್ಷಣ ಸಂಸ್ಥೆಗಳನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲಿದ್ದಾರೆ. ಸೇವಾ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಿಕೊಂಡು ಹೋಗುತ್ತಾರೆ ಎಂದು ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಠದ ಟ್ರಸ್ಟಿಗಳಾದ ದೊಡ್ಡಮನೆ ವೆಂಕಟೇಶ, ಆಡಿಟರ್‌ ನಾಗರಾಜ್‌, ಪಂಚಲಿಂಗಯ್ಯ, ಶಿವಲಿಂಗಯ್ಯ, ಮಾರಪ್ಪಣ್ಣ, ವಕೀಲರಾದ ಸಿದ್ದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಉತ್ತರಾಧಿಕಾರಿ ಡಾ.ಎಚ್‌.ಎಲ್‌‍.ನಾಗರಾಜ್‌ ಅವರ ಹಿನ್ನೆಲೆ :
ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಹೊನ್ನೆನಹಳ್ಳಿ ಗ್ರಾಮದ ಲಿಂಗಯ್ಯ ಮತ್ತು ಗಂಗಮನವರ ಸುಪುತ್ರರಾಗಿರುವ ಎಚ್‌.ಎಲ್‌‍.ನಾಗರಾಜ್‌ ಅವರು ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮುಗಿಸಿದ್ದಾರೆ. ನಂತರ ಪದವಿ ಮುಗಿಸಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಕೋಫೈನಾನ್ಸ್ ನಲ್ಲಿ ಸಂಶೋಧನೆ (ಪಿಎಚ್‌ಡಿ) ಮಾಡಿದ್ದಾರೆ.

ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುವಾಗಿನಿಂದಲೂ ನಾಗರಾಜ್‌ ಅವರಿಗೆ ಧಾರ್ಮಿಕ ಕಾರ್ಯಗಳ ಕುರಿತು ಆಸಕ್ತಿ ಬೆಳೆದಿತ್ತು. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆದರ್ಶವಾಗಿ ತೆಗೆದುಕೊಂಡಿದ್ದರು. ಶಿಕ್ಷಣ ಮುಂದುವರೆಸಿ ಸ್ಪರ್ಧಾತಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗ ಅವರು ಆದಿಚುಂಚನಗಿರಿ ಮಠದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ಅವಧಿಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸೇವಾ ಕಾರ್ಯಗಳಿಂದ ಪ್ರಭಾವಿತರಾದರು. ಸನ್ಯಾಸತ್ವ ಮತ್ತು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವಾ ಕಾರ್ಯ ಮಾಡಬೇಕು ಎನ್ನುವ ಮನಸ್ಸು ಮಾಡಿದರು.

ತಹಸೀಲ್ದಾರ್‌ ಆಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ, ಮೈಶುಗರ್‌ ಕಾರ್ಖಾನೆಯ ಎಂ.ಡಿ. ಆಗಿ ಕೆಲಸ ಮಾಡಿರುವ ನಾಗರಾಜ್‌ ಅವರ ಪ್ರಾಮಾಣಿಕತೆ, ದಕ್ಷತೆ ಮತ್ತು ಜನಸೇವಾ ಮನೋಭಾವವನ್ನು ರೂಢಿಸಿಕೊಂಡಿದ್ದಾರೆ ಎಂದು ಮಠದ ಟ್ರಸ್ಟಿಗಳು ಉತ್ತರಾಧಿಕಾರಿಯವರ ಕುರಿತಾದ ಹಿನ್ನೆಲೆ ಹಂಚಿಕೊಂಡರು.

RELATED ARTICLES

Latest News