Tuesday, December 31, 2024
Homeರಾಜ್ಯಪ್ರಭಾವಿ ಬಿಜೆಪಿ ನಾಯಕರಿಗೆ ಕೋವಿಡ್ ಕಂಟಕ..!

ಪ್ರಭಾವಿ ಬಿಜೆಪಿ ನಾಯಕರಿಗೆ ಕೋವಿಡ್ ಕಂಟಕ..!

Covid Scam trouble for BJP leaders

ಬೆಂಗಳೂರು,ಡಿ.14- ಕೋವಿಡ್ ಕಾಲದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಈವರೆಗೂ ಕೇವಲ ಬಾಯಿಮಾತಿನ ಹೇಳಿಕೆಗಳನ್ನು ನೀಡುತ್ತಿದ್ದ ಸರ್ಕಾರ ಈಗ ಏಕಾಏಕಿ ಎಫ್ಐಆರ್ ದಾಖಲಿಸುವ ಮೂಲಕ ಕಾರ್ಯಾಚರಣೆಗಿಳಿದಿರುವುದು ವಿರೋಧಪಕ್ಷಗಳಿಗೆ ಅದರಲ್ಲೂ ಬಿಜೆಪಿಯ ಪ್ರಭಾವಿ ನಾಯಕರಿಗೆ ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಿಸಿದೆ.

ಕೋವಿಡ್ ಸಾಂಕ್ರಾಮಿಕ ಎಂಬುದು ಮಾರಣಾಂತಿಕ ತುರ್ತು ಪರಿಸ್ಥಿತಿಯಾಗಿತ್ತು. ಆ ಸಂದರ್ಭಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಜೀವ ಉಳಿಸುವುದು ಪ್ರಮುಖ ಆದ್ಯತೆಯಾಗಿತ್ತೇ ಹೊರತು ಕಾನೂನು ಪಾಲನೆ ಎಂದು ಕೈಕಟ್ಟಿ ಕುಳಿತಿದ್ದರೆ ಅಪಾರ ಪ್ರಮಾಣದ ಹಾನಿಯಾಗುತ್ತಿತ್ತು.

ಜೀವ ಉಳಿಸುವ ಕೆಲಸ ಮಾಡಿದ್ದಕ್ಕಾಗಿ ಕೇಸು ದಾಖಲಿಸುವುದು, ತನಿಖೆ ನಡೆಸುವುದು ಮಹಾಪರಾಧ ಎಂದು ಬಿಜೆಪಿ ನಾಯಕರು ವಾದಿಸುತ್ತಿದ್ದಾರೆ.ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಕೋವಿಡ್ ಎಂಬ ಮಾರಣಾಂತಿಕ ಸಂದರ್ಭವನ್ನು ಭ್ರಷ್ಟಾಚಾರ ಮಾಡಲು, ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ. ನೂರಾರು ಕೋಟಿ ರೂ.ಗಳು ಲೂಟಿಯಾಗಿದೆ. ಇದನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ ಎಂದು ಪ್ರತಿವಾದ ಮಾಡುತ್ತಿದೆ.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಈ ಹಗ್ಗಜಗ್ಗಾಟ ಕೋವಿಡ್ ಸಂದರ್ಭದಲ್ಲಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ ಹಲವಾರು ವೈದ್ಯರಿಗೆ ಈಗ ಸಂಕಷ್ಟ ತಂದಿಟ್ಟಿದೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರಾಗಿರುವ ಡಾ.ವಿಷ್ಣುಪ್ರಸಾದ್ ಎಂ. ಎಂಬುವರು ನಿನ್ನೆ ನೀಡಿರುವ ದೂರನ್ನು ಆಧರಿಸಿ ವಿಧಾನಸೌಧದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ಬಹುತೇಕ ಎಸ್ಐಟಿ ತನಿಖೆಗೆ ಒಳಪಡುವ ಸಾಧ್ಯತೆಯಿದೆ.

ಎಫ್ಐಆರ್ನಲ್ಲಿ ವೈದ್ಯರಾದ ಡಾ.ಪಿ.ಜಿ.ಗಿರೀಶ್, ಸರ್ಕಾರದ ಹಿರಿಯ ಅಧಿಕಾರಿಗಳಾದ ಜಿ.ಪಿ.ರಘು, ಎನ್.ಮಂಜುನಾಥ್, ಪಿಪಿಇ ಕಿಟ್ ಹಾಗೂ ಮಾಸ್ಕ್ಗಳನ್ನು ಪೂರೈಸಿದ ಲಾಜ್ ಎಕ್‌್ಸಪೋರ್ಟ್, ಎಂ.ಎಸ್.ಪ್ರೂಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್‌್ಸ ಹಾಗೂ ಕರ್ನಾಟಕದ ಜನಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು ಮತ್ತು ಇತರರು ಎಂದು ಉಲ್ಲೇಖಿಸಲಾಗಿದೆ.
ಮೇಲ್ನೋಟಕ್ಕೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ಆದಂತೆ ಕಂಡುಬಂದು ಜನಪ್ರತಿನಿಧಿಗಳು ಎಂದು ಹೆಸರಿಸುವುದರಿಂದ ಆಗಿನ ಸಂದರ್ಭದಲ್ಲಿ ಆಡಳಿತ ನಡೆಸಿದ ಪ್ರಮುಖರತ್ತ ಬಾಣದ ಗುರಿ ನೆಟ್ಟಿದೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ 15,51,713 ಪಿಪಿಇ ಕಿಟ್ಗಳನ್ನು, 203.66 ಕೋಟಿ ರೂ. ವೆಚ್ಚದಲ್ಲಿ ಹಾಗೂ 42,15,047 ಎನ್ 95 ಮಾಸ್ಕ್ಗಳನ್ನು 9.75 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲಾಗಿದೆ. ದಾಖಲೆಗಳ ಪರಿಶೀಲನೆಯ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಕೀಯ ಕಾಲೇಜುಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪೂರೈಸುವ ಸಲುವಾಗಿ ಮೊದಲ ಹಂತದಲ್ಲಿ 2,59,269 ಎನ್ 95 ಮಾಸ್ಕ್ ಮತ್ತು ಅಷ್ಟೇ ಪ್ರಮಾಣದ ಪಿಪಿಇ ಕಿಟ್ಗಳನ್ನು 41.35 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ.

ಆದರೆ ಇವು ಆಸ್ಪತ್ರೆಗಳಿಗೆ ತಲುಪಿರುವ ಯಾವ ಮಾಹಿತಿಯೂ ಲಭ್ಯವಿಲ್ಲ ಎಂದು ತಿಳಿಸಲಾಗಿದೆ. ಆದರೂ ಖಾಸಗಿ ಕಂಪನಿಗಳಿಗೆ 41.35 ಕೋಟಿ ರೂ. ಪಾವತಿಯಾಗಿದೆ. ಹೆಚ್ಚುವರಿಯಾಗಿ 55,784 ಪಿಪಿಇ ಕಿಟ್ಗಳನ್ನು ಟೆಂಡರ್ ಪ್ರಕ್ರಿಯೆ ಇಲ್ಲದೆ 7.32 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ.

ಯಾವುದೇ ಸರಬರಾಜು ಆದೇಶವಿಲ್ಲದೆ 13,784 ಪಿಪಿಇ ಕಿಟ್ಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ 1.80 ಕೋಟಿ ರೂ.ಗಳನ್ನು ಪಾವತಿಸಲಾಗಿದೆ.ಮಾಸ್ಕ್ಗಳ ಖರೀದಿಯಲ್ಲೂ ಇದೇ ರೀತಿಯ ಅವ್ಯವಹಾರವಾಗಿದೆ ಎಂದು ಸುದೀರ್ಘವಾದ ದೂರು ನೀಡಲಾಗಿದೆ. ಪ್ರಥಮ ಪ್ರಕರಣವಾಗಿ ನಿನ್ನೆ ಎಫ್ಐಆರ್ ದಾಖಲಿಸುತ್ತಿದ್ದಂತೆ ಭಾರೀ ಸಂಚಲನವೇ ಸೃಷ್ಟಿಯಾಗಿದೆ.

ಈಗಿನ್ನೂ ಮೊದಲ ಹಂತದಲ್ಲಿ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ಗಳಿಗೆ ಸಂಬಂಧಪಟ್ಟಂತೆ ಮಾತ್ರ ಪ್ರಕರಣ ದಾಖಲಾಗಿದ್ದು, ಮುಂದುವರೆದು ಚಿಕಿತ್ಸೆ, ಪ್ರಯೋಗಾಲಯ, ವೈದ್ಯಕೀಯ ಸೌಲಭ್ಯಗಳು, ಬೆಡ್ ಹಾಗೂ ಇತರ ವಿಚಾರಗಳಿಗೆ ಹಂತಹಂತವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆಯಿದೆ.

RELATED ARTICLES

Latest News