Wednesday, January 15, 2025
Homeರಾಜ್ಯವಿಜಯೇಂದ್ರ ಮೇಲಿನ 150 ಕೋಟಿ ಲಂಚಾರೋಪ ಅಧಿವೇಶನದಲ್ಲಿ ಚರ್ಚೆ : ಪರಮೇಶ್ವರ್

ವಿಜಯೇಂದ್ರ ಮೇಲಿನ 150 ಕೋಟಿ ಲಂಚಾರೋಪ ಅಧಿವೇಶನದಲ್ಲಿ ಚರ್ಚೆ : ಪರಮೇಶ್ವರ್

Vijayendra's 150 crore bribery case to be discussed in session: Parameshwara

ಬೆಂಗಳೂರು,ಡಿ.15- ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನ್ಪಾಡಿ ಆರಂಭದಲ್ಲಿ ಯಾವ ರೀತಿಯ ಹೇಳಿಕೆ ನೀಡಿದ್ದರು ಎಂದು ಕಣ್ಣೆದುರಿಗೇ ಇದೆ, ಈಗ ತಿರುಚಿ ಮಾತನಾಡುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ವೈ.ವಿಜಯೇಂದ್ರ ನನಗೆ 150 ಕೋಟಿ ರೂ. ನೀಡಲು ಬಂದಿದ್ದರು ಎಂದು ಅನ್ವರ್ ಮಾನ್ಪಾಡಿ ಹೇಳಿರುವ ವಿಡಿಯೋಗಳಿವೆ. ಆ ವೇಳೆ ಅದು ದೊಡ್ಡ ಸುದ್ದಿಯಾಗಿತ್ತು. ಈಗ ಅನ್ವರ್ ಮಾನ್ಪಾಡಿ ಮಾತು ಬದಲಾಯಿಸುತ್ತಿದ್ದಾರೆ ಎಂದರು.

150 ಕೋಟಿ ರೂ. ಲಂಚದ ಆಮಿಷವೊಡ್ಡಿರುವುದು ಯಾರಿಗೂ ಗೊತ್ತಿರಲಿಲ್ಲ. ಅನ್ವರ್ ಮಾನ್ಪಾಡಿ ಹೇಳಿದ್ದಕ್ಕೆ ಮಾತ್ರ ಗೊತ್ತಾಗಿದೆ. ಈಗ ಉಲ್ಟಾ ಹೇಳಿಕೆ ನೀಡಿರುವ ಬಗ್ಗೆ ಯಾವ ರೀತಿ ಪರಿಗಣಿಸಬೇಕೆಂಬುದು ನಾಳೆ ವಿಧಾನಸಭೆಯಲ್ಲಿ ಪ್ರಸ್ತಾಪವಾದಾಗ ಚರ್ಚೆಗೆ ಬರಲಿದೆ ಎಂದು ಹೇಳಿದರು.

ಪತ್ನಿಯ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನಲ್ಲಿ ಸಾಫ್‌್ಟವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನ ಪತ್ನಿ, ಅತ್ತೆ ಮತ್ತು ಭಾಮೈದುನನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚುವರಿ ವಿಚಾರಣೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದರು.

ಅತುಲ್ ಸುಭಾಷ್ 40 ಪುಟಗಳ ಮರಣಪತ್ರವನ್ನು ಬರೆದಿದ್ದು, ಅದರಲ್ಲಿ ಮಹಿಳೆಯರಿಗಾಗಿ ಇರುವ ಕಾನೂನುಗಳು ದುರುಪಯೋಗವಾಗುತ್ತಿವೆ. ತಮ ಬಳಿ ಹಣಕ್ಕೆ ಒತ್ತಾಯ ಮಾಡುತ್ತಿದ್ದರು ಎಂಬ ಆರೋಪ ಮಾಡಿದ್ದು, ಕಾನೂನಿನಲ್ಲಿ ಗಂಡಂದಿರಿಗೆ ತೊಂದರೆಯಾಗುತ್ತಿದೆ ಎಂಬ ಚರ್ಚೆಯಾಗುತ್ತಿದ್ದು, ಇದರ ಬದಲಾವಣೆಗಳ ಬಗ್ಗೆಯೂ ವಿಮರ್ಶೆಗಳು ನಡೆಯುತ್ತಿವೆ.

ನ್ಯಾಯಾಲಯದಲ್ಲಿ ವಿಚ್ಛೇದನವಾದಾಗ ಮಾನಸಿಕವಾಗಿ ತೊಂದರೆಗೀಡಾಗಿರುತ್ತಾರೆ. ಆ ವೇಳೆ ಪತ್ನಿಗೆ ಜೀವನಾಂಶ ನೀಡಬೇಕೆಂಬ ಆದೇಶ ನೀಡಿದರೆ ಅದನ್ನು ಈಡೇರಿಸುವುದು ಹೇಗೆ? ಎಂಬೆಲ್ಲಾ ವಿಚಾರಗಳಿವೆ. ಅದರಲ್ಲಿ ಯಾವ ರೀತಿಯ ಬದಲಾವಣೆಯನ್ನು ತರಬೇಕು ಎಂಬ ಪರಾಮರ್ಶೆಗಳು ನಡೆಯಬೇಕಿದೆ ಎಂದರು.

ಕೋವಿಡ್ ಕಾಲಘಟ್ಟದಲ್ಲಿ ಅವ್ಯವಹಾರವಾಗಿರುವುದರಿಂದ ಜಸ್ಟೀಸ್ ಮೈಕಲ್ ಕುನ್ಹಾ ಅವರ ಸಮಿತಿ ಪ್ರತಿಯೊಂದನ್ನು ಇಂಚಿಂಚೂ ಪರೀಕ್ಷೆ ನಡೆಸಿದೆ. ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ಎಲ್ಲವನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಿ ಹಗರಣವನ್ನು ಪತ್ತೆ ಹಚ್ಚಿದ್ದಾರೆ. ಲೋಪಗಳ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳದೇ ಇದ್ದರೆ ಅದು ಅಧಿಕಾರಿಗಳ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು.

ಕೋವಿಡ್ ಸಂದರ್ಭದಲ್ಲಿ ಹಗರಣವಾಗಿರುವುದಂತೂ ನಿಜ. ಸಾವಿರಾರು ಕೋಟಿ ರೂ.ಗಳ ಲೂಟಿಯಾಗಿದೆ, ತನಿಖೆ ಮಾಡಿಸುತ್ತೇವೆ ಎಂದು ನಾವು ಭರವಸೆ ನೀಡಿದ್ದೆವು, ಅದರಂತೆ ನಡೆದುಕೊಳ್ಳುತ್ತೇವೆ. ಅಧಿಕಾರಿಗಳ ಹೆಸರು ಆರಂಭದಲ್ಲಿದೆ. ತನಿಖೆಯಲ್ಲಿ ರಾಜಕಾರಣಿಗಳ ಹೆಸರು ಬಂದರೆ, ಖರೀದಿ ವ್ಯವಹಾರಕ್ಕೆ ಸೂಚನೆ ನೀಡಿದ್ದರೆ ಅಥವಾ ನೇರವಾಗಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.

ಸಂವಿಧಾನ ಬದಲಾಯಿಸುತ್ತೇವೆ ಎಂದು ಬಿಜೆಪಿಯ ಸಂಸದರು, ಮುಖಂಡರು ದೇಶಾದ್ಯಂತ ಹೇಳಿಕೆಗಳನ್ನು ನೀಡಿದ್ದಾರೆ. ಈಗ ನೆಹರೂ ಮೇಲೆ ಆಪಾದನೆ ಮಾಡಿ ಸಂವಿಧಾನಕ್ಕೆ ಅಪಪ್ರಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.

ನೆಹರೂ ಅವರ ಕಾಲಘಟ್ಟದಲ್ಲಿ ಕಟ್ಟಿದ ಸಂಸ್ಥೆಗಳು, ಸ್ಥಾಪನೆ ಮಾಡಿದ ಉದ್ಯಮಗಳನ್ನು ನರೇಂದ್ರ ಮೋದಿಯವರು ಕನಸು ಮನಸಿನಲ್ಲಿಯೂ ಆರಂಭ ಮಾಡಲಾಗುವುದಿಲ್ಲ. ಆದರೆ ಆಗ ಆರಂಭಿಸಿದ ಸಂಸ್ಥೆಗಳ ಹೆಸರು ಬದಲಾವಣೆ ಮಾಡಿ ತಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅದರ ಹೊರತಾಗಿ ನರೇಂದ್ರ ಮೋದಿಯವರ ಕೊಡುಗೆಗಳು ಏನಿವೆ ಎಂದು ಪ್ರಶ್ನಿಸಿದರು.

1950ರಲ್ಲಿ ಸಂವಿಧಾನ ಅಳವಡಿಕೆಯಾಗಿದೆ. 75 ವರ್ಷ ಕಳೆದಿದ್ದೇವೆ. ಅಲ್ಲಿಂದ ಇಲ್ಲಿವರೆಗೂ ಸಂವಿಧಾನದ ಟೈಂ ಟೆಸ್ಟಿಂಗ್ ನಡೆದಿದೆ. ಬೇರೆ ಬೇರೆ ದೇಶಗಳ ಜನ ಭಾರತದ ಸಂವಿಧಾನ ಅತ್ಯುನ್ನತ ಶ್ರೇಷ್ಠತೆ ಹೊಂದಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಭಾರತಕ್ಕೆ ಬಂದು ಅಧ್ಯಯನ ಮಾಡಿಕೊಂಡು ಹೋಗಿದ್ದಾರೆ ಎಂದರು.

ಭಾರತದಲ್ಲಿ ಭಾಷೆ, ಸಂಸ್ಕೃತಿ, ಉಡುಪು, ಆಹಾರ ಎಲ್ಲವೂ ಭಿನ್ನ ಸ್ವರೂಪದಲ್ಲಿವೆ. ಆದರೂ ಒಂದಾಗಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಸಂವಿಧಾನ. ಅದನ್ನೇ ಬಿಜೆಪಿಯವರು ಪ್ರಶ್ನೆ ಮಾಡಿದ್ದರು. ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ್ದು ಬಿಜೆಪಿಯವರೇ ಹೊರತು ಕಾಂಗ್ರೆಸ್ನವರಲ್ಲ ಎಂದು ಹೇಳಿದರು.

ಸಂಸತ್ನಲ್ಲಿ ನಿಂತು ನೆಹರೂ ಟೀಕೆ ಮಾಡುವ ಮೋದಿಯವರು ನೆಹರೂ ಮಾಡಿದ ಕೆಲಸದಲ್ಲಿ ಶೇ.10 ರಷ್ಟನ್ನಾದರೂ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು. ನಾಳೆಯಿಂದ ಮೂರು ದಿನಗಳ ಕಾಲ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆಯಾಗಲಿದೆ ಎಂದರು.

ಒತ್ತುವರಿಯಾಗಿರುವ ಆಸ್ತಿಗಳ ಪಹಣಿಯಲ್ಲಿ ಈವರೆಗೂ ವಕ್‌್ಫ ಎಂದು ನಮೂದಿಸಲಾಗಿತ್ತು. ಹೊಸದಾಗಿ ಸರ್ಕಾರ ಇದನ್ನು ನಮೂದಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲದಕ್ಕೂ ಆರೋಪ ಮಾಡುತ್ತಾ ಕುಳಿತರೆ ಹೇಗೆ?, ಸರ್ಕಾರದ ಆಸ್ತಿ ಸರ್ಕಾರಕ್ಕೆ ಬಂದರೆ ಅದರಲ್ಲಿ ತಪ್ಪೇನು?, ಆರೋಪ ಮಾಡುವಂತಹದ್ದೇನಿದೆ? ಎಂದು ಪ್ರಶ್ನಿಸಿದರು.

RELATED ARTICLES

Latest News