ಬೆಂಗಳೂರು,ಡಿ.16– ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ಕಾರ್ಯ ಶೈಲಿಗೆ ಸ್ವಪಕ್ಷದಲ್ಲಿಯೇ ಅಸಮಾಧಾನ ವ್ಯಕ್ತವಾಗಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬದಲು ನಾವೇ ಸಮಸ್ಯೆ ಸೃಷ್ಟಿಸಿಕೊಂಡಿದ್ದೇವೆ ಎಂಬ ಅಸಮಾಧಾನ ಬಿಜೆಪಿಯಲ್ಲಿ ವ್ಯಕ್ತವಾಗಿದೆ.
ಕಳೆದ ವಾರ ನಡೆದ ನಾಲ್ಕು ದಿನಗಳ ವಿಧಾನಸಭೆ ಕಲಾಪದಲ್ಲಿ ಸರ್ಕಾರದ ಹಗರಣಗಳ ಬಗ್ಗೆ ಪ್ರಸ್ತಾಪಿಸುವಲ್ಲಿ ಅಶೋಕ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡದೆ ಬಿಜೆಪಿಯನ್ನೇ ಮುಜಗರಕ್ಕೆ ಸಿಲುಕಿಸಿದರು ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
ವಕ್‌್ಫ ಮತ್ತು ಮುಡಾ ಹನಗರಣ, ಅನ್ವರ್ ಮಾನಪ್ಪಾಡಿ ವರದಿ, ಪಂಚಮಶಾಲಿ ಮೀಸಲಾತಿ ವಿವಾದ ಸೇರಿದಂತೆ ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿದು ಬಿಸಿ ಮುಟ್ಟಿಸಬೇಕಾದ ಅಶೋಕ್ ಅವರು ಪರಿಣಾಮಕಾರಿಯಾಗಿ ದಾಖಲೆಗಳು ಮತ್ತು ಅಂಕಿಅಂಶಗಳ ಸಮೇತ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅನೇಕ ಶಾಸಕರು ದೂರಿದ್ದಾರೆ.
ಹಾಗೇ ನೋಡಿದರೆ ವಕ್‌್ಫ ಸೇರಿದಂತೆ ಸರ್ಕಾರದ ವೈಫಲ್ಯಗಳ ವಿರುದ್ದ ರಾಜೀ ಮಾಡಿಕೊಳ್ಳದೆ ಯತ್ನಾಳ್ ಅವರ ಕಾರ್ಯ ವೈಖರಿಯೇ ಪರಿಣಾಮಕಾರಿಯಾಗಿದೆ. ಅಶೋಕ್ ಯಾವುದೇ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಅನೇಕ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅನೇಕ ಅಸ್ತ್ರಗಳಿದ್ದವು, ಮುಡಾ, ವಾಲೀಕಿ, ವಕ್‌್ಫ , ಪಂಚಮಸಾಲಿ ವಿವಾದ ಸೇರಿದಂತೆ ಹಲವಾರು ವಿಚಾರಗಳಿದ್ದರೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ವಿಫಲರಾಗುತ್ತಿದ್ದಾರೆ.
ಪ್ರತಿಪಕ್ಷದ ನಾಯಕನಾಗಿ ಇರಬೇಕಾದ ಗಂಭೀರತೆ, ವಿಷಯ ಪ್ರಾಧಾನ್ಯತೆ, ಸದನದಲ್ಲಿ ವಿಷಯ ಮಂಡನೆಯಲ್ಲಿ ಎಡವುತ್ತಿದ್ದಾರೆ ಎಂದು ಅಸಮಾಧಾನಗೊಂಡಿದ್ದಾರೆ.
ಹಾಗೇ ನೋಡಿದರೆ ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾರೆ. ಯಾವುದೇ ವಿಷಯದಲ್ಲಿ ರಾಜಿಯಾಗದೆ ಅವರು ನೇರವಾಗಿ ಹೇಳಬೇಕಾದ್ದುದನ್ನು ಹೇಳುತ್ತಾರೆ. ಒಬ್ಬ ಪ್ರತಿಪಕ್ಷದ ನಾಯಕ ಹೀಗೇ ಇರಬೇಕೆಂಬುದು ಅನೇಕ ಶಾಸಕರ ಆಗ್ರಹವಾಗಿದೆ.
ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿಯೂ ಅಶೋಕ್ ವಿಫಲರಾಗುತ್ತಿದ್ದಾರೆ. ಮೊದಲೇ ಬಣ ರಾಜಕೀಯದಿಂದ ದಿಕ್ಕೆಟ್ಟಿರುವ ಬಿಜೆಪಿಗೆ ಅಶೋಕ್ ಸಾರಥ್ಯದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ವಿಫಲರಾಗಿದ್ದಾರೆ.
ಸರ್ಕಾರದ ಚಳಿ ಬಿಡಿಸುವ ಬದಲು ನಾವೇ ಕೈಗೆ ಹಗ್ಗ ಕೊಟ್ಟು ಎಳೆಸಿಕೊಳ್ಳುವ ಸ್ಥಿತಿಯಾಗಿದೆ ಎಂಬುದು ಶಾಸಕರ ಅಳಲು. ವಕ್‌್ಫ ಭೂ ಕಬಳಿಕೆ ವಿಷಯದಲ್ಲಿ ಕಳೆದ ವಾರ 2ನೇ ದಿನದ ಕಲಾಪದ ವೇಳೆ ವಕ್‌್ಫ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಬೇಕೆಂದು ತೀರ್ಮಾನಿಸಲಾಗಿತ್ತು. ಅಷ್ಟರಲ್ಲಿ ಸಿದ್ದರಾಮಯ್ಯನವರು ಪಂಚಮಸಾಲಿ ಮೀಸಲಾತಿ ಕುರಿತು ಹಿಂದಿನ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡೆವಿಟ್‌ನ್ನು ಸದನದಲ್ಲಿ ಮಂಡನೆ ಮಾಡುತ್ತಿದ್ದೇನೆ ಎಂದರು. ಈ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಬೇಕೋ ಇಲ್ಲವೆ ಸುಮನಿರಬೇಕೋ ಎಂಬ ಗೊಂದಲಕ್ಕೆ ಸಿಲುಕಿ ಸಿಕ್ಕ ಅಸ್ತ್ರವನ್ನು ಕೈ ಚೆಲ್ಲಿಕೊಂಡು ಕುಳಿತರು.
ಪಂಚಮಸಾಲಿ ಮೀಸಲಾತಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾನಿರತರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ನೀಡಿದಂತಾಗಿತ್ತು. ಬಿಜೆಪಿಗರು ಒಗ್ಗಟ್ಟಿನಿಂದ ಹೋರಾಡುವ ಬದಲು ಕೇವಲ ತಮ ತಮ ಪ್ರತಿಷ್ಠೆಗಾಗಿ ಕೆಲವೇ ಬೆರಳಣಿಕೆಯ ನಾಯಕರು ಸದನದಲ್ಲಿ ಮಾತನಾಡಿದರೇ ಹೊರತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ವಿಫಲರಾದರು. ಈ ವಿಷಯದಲ್ಲೂ ಕೂಡ ಅಶೋಕ್ ಪರಿಣಾಮಕಾರಿಯಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ ಎಂಬ ಅಸಮಾಧಾನ ಕೇಳಿಬಂದಿದೆ.
ಲಾಠಿ ಚಾರ್ಜ್ ನಡೆಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಕೇವಲ ದಾಖಲಾತಿಗೆ ಸೇರಲು ಹೇಳಿದರೆ ಹೊರತು, ಪರಿಣಾಮಕಾರಿಯಾಗಿ ಅವರು ಸರ್ಕಾರದ ಮೇಲೆ ಮುಗಿಬೀಳಲು ವಿಫಲರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಶೋಕ್ ಅವರು ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಈಗಲಾದರೂ ನಿಲ್ಲಿಸದಿದ್ದರೆ ಪ್ರತಿಪಕ್ಷವಾಗಿ ನಾವು ಸಂಪೂರ್ಣವಾಗಿ ವಿಫಲರಾಗುತ್ತಿದ್ದೇವೆ ಎಂಬುದು ಬಹುತೇಕ ಶಾಸಕರ ಅಳಲಾಗಿದೆ.