ಬೆಳಗಾವಿ,ಡಿ.16- ವಕ್ಫ್ ಆಸ್ತಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಮೌನವಾಗಿರಲು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನ್ಪಡಿ ಅವರಿಗೆ ತಾವು 150 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ವಿಧಾನಸಭೆಯಲ್ಲಿಂದು ಆಗ್ರಹಿಸಿದರು.
ಇಂದು ಬೆಳಿಗ್ಗೆ ಸದನದಲ್ಲಿ ಸಂತಾಪ ಸೂಚನೆಯ ನಂತರ ಸ್ಪಷ್ಟೀಕರಣ ನೀಡಲು, ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಅವಕಾಶ ಮಾಡಿಕೊಟ್ಟಾಗ ಮಾತನಾಡಿದ ವಿಜಯೇಂದ್ರ ಅವರು, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಅನ್ವರ್ ಮಾನ್ಪಡಿಯವರು ನೀಡಿರುವ ವರದಿ. ಇದರ ಬಗ್ಗೆ ಉಪಲೋಕಾಯುಕ್ತ ಆನಂದ ಅವರು ನೀಡಿರುವ ವರದಿಗಳು ಈ ಸದನದಲ್ಲಿ ಚರ್ಚೆಯಾಗಲಿ. ಅವುಗಳನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದರು.
ಸಚಿವ ಪ್ರಿಯಾಂಕ ಖರ್ಗೆಯವರು ತಮ ಮೇಲೆ ಮಾಡಿರುವ ಆರೋಪವನ್ನು ಮುಖ್ಯಮಂತ್ರಿ ಪುನರುಚ್ಚಾರ ಮಾಡಿದ್ದಾರೆ. ಮುಖ್ಯಮಂತ್ರಿಯವರ ಬಗ್ಗೆ ಅನುಕಂಪವಿದೆ. ಹಗರಣದ ಸರಮಾಲೆಯಲ್ಲಿ ಅವರು ಸಿಲುಕಿದ್ದಾರೆ. ಮುಡಾ ಹಗರಣದ ಆರೋಪ ಅವರ ಕುಟುಂಬದವರ ಮೇಲೆ ಕೇಳಿಬಂದಿದೆ ಎಂದು ವಾಗ್ದಾಳಿ ನಡೆಸಿದರು.
ತಮ ಮೇಲಿನ ಆರೋಪದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ಈಗ ಸಿಬಿಐ ಮೇಲೆ ವಿಶ್ವಾಸ ಬಂದಿರುವುದು ಸಂತೋಷವಾಗಿದೆ ಎಂದರು.ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಕೊಡಲಿ ಎಂದಾಗ ಬಿಜೆಪಿ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.
ಸದನ ನಡೆಯುವಾಗ ನನ್ನ ಅನುಪಸ್ಥಿತಿಯಲ್ಲಿ ಸಚಿವರು ಗುರುತರವಾದ 150 ಕೋಟಿ ರೂ. ಆಮಿಷವೊಡ್ಡಿರುವ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರ ಹೇಳಿಕೆ ಮೇಲೆ ಮಾಡಿರುವುದಾಗಿ ಹೇಳಿದ್ದಾರೆ. ವಕ್ಫ್ ಬೋರ್ಡ್‌ನಲ್ಲಿ ಯಾವ ರೀತಿ ಹಗರಣ ಆಗಿದೆ. ಕಾಂಗ್ರೆಸ್‌ನವರು ಅದನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಅನ್ವರ್ ಮಾನ್ಪಡಿಯವರು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದಾಗ ವರದಿ ಕೊಟ್ಟಿದ್ದರು.
ಆ ವರದಿ ಬಗ್ಗೆ ಉಪಲೋಕಾಯುಕ್ತರಾಗಿದ್ದ ಆನಂದ್‌ರವರು ಕೂಡ ವರದಿ ನೀಡಿ ಸೂಕ್ತ ತನಿಖೆಗೆ ಮನವಿ ಮಾಡಿದ್ದಾರೆ. ಇದು 2016 ರ ಮಾರ್ಚ್‌ನಲ್ಲಿ ಆಗಿರುವಂತದ್ದು. ಆಗಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಅಲ್ಪಸಂಖ್ಯಾತರ ಆಯೋಗದ ವಿಶೇಷ ವರದಿಯನ್ನು ಆಗಿನ ಸಚಿವ ಸಂಪುಟ ತಿರಸ್ಕರಿಸಿದೆ ಎಂದು ಹೇಳಿದರು. ಆದರೂ ಜವಾಬ್ದಾರಿಯುತ ಸಚಿವರು ಆರೋಪ ಮಾಡಿದ್ದಾರೆ. ಇದು ಸರಿಯಲ್ಲ ಎಂದರು.