ಬೆಳಗಾವಿ,ಡಿ.16- ವಕ್ಫ್ ಆಸ್ತಿ ಅತಿಕ್ರಮಣದ ಬಗ್ಗೆ ಮೌನವಾಗಿರಲು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾನ್ಪಡಿ ಅವರಿಗೆ 150 ಕೋಟಿ ರೂ. ಆಮಿಷವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೊಟ್ಟಿದ್ದಾರೆ ಎಂಬ ಆರೋಪ ಪ್ರಕರಣ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದು ಕೋಲಾಹಲದ ಪರಿಸ್ಥಿತಿ ಉಂಟಾಯಿತು.
ಇಂದು ಬೆಳಿಗ್ಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಿದ ನಂತರ ವಿರೋಧಪಕ್ಷದ ನಾಯಕ ಆರ್.ಅಶೋಕ್‌ರವರು ನಮ ಪಕ್ಷದ ಶಾಸಕರ ಮೇಲೆ ಸಚಿವರೊಬ್ಬರು 150 ಕೋಟಿ ರೂ. ಆಮಿಷವೊಡ್ಡಿದ ಆರೋಪ ಮಾಡಿದ್ದಾರೆ. ಆರೋಪ ಮಾಡಲು ಮೊದಲೇ ಸಭಾಧ್ಯಕ್ಷರಿಗೆ ನೋಟೀಸ್ ಕೊಡಬೇಕಿತ್ತು ಎಂದರು.
ಆಗ ಬಿಜೆಪಿ ಶಾಸಕರು ಎದ್ದುನಿಂತು ಮಾತನಾಡಲು ಮುಂದಾದರು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ನಾನು ಆರೋಪ ಮಾಡಿಲ್ಲ. ಪತ್ರಿಕೆಯಲ್ಲಿ ಬಂದ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಆದರೆ ವಿರೋಧಪಕ್ಷದ ನಾಯಕರು ನಿಯಮಾವಳಿ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದರು.
ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ವಕ್ಫ್ ಗೆ ಸಂಬಂಧಿಸಿದಂತೆ ನಡೆದ ಚರ್ಚೆ ಸಂದರ್ಭದಲ್ಲಿ ಅವರು ಹೇಳಿದ್ದಾರೆ ಎಂದು ವರದಿ ಮಂಡನೆ, ವಿತ್ತೀಯ ಕಾರ್ಯಕಲಾಪಗಳಿಗೆ ಅವಕಾಶ ಕಲ್ಪಿಸಿದರು. ಅನಂತರ ಸ್ಪಷ್ಟೀಕರಣ ನೀಡಲು ವಿಜಯೇಂದ್ರ ಅವರಿಗೆ ಅವಕಾಶ ಮಾಡಿಕೊಟ್ಟರು.
ವಿಜಯೇಂದ್ರ ಅವರು ಮಾತನಾಡುತ್ತಾ, ಮುಡಾ ಹಗರಣ ಎನ್ನುತ್ತಿದ್ದಂತೆ ಕಾಂಗ್ರೆಸ್‌ನ ಹಲವು ಶಾಸಕರು ಎದ್ದು ನಿಂತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಪ್ರತಿಯಾಗಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾಗ್ವಾದ, ಗೊಂದಲದ ವಾತಾವರಣ ಸದನದಲ್ಲಿ ನಿರ್ಮಾಣವಾಯಿತು.
ವಿಜಯೇಂದ್ರ ಅವರು ಮಾತು ಮುಂದುವರೆಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ವಿಜಯೇಂದ್ರ ಅವರನ್ನು ರಾಜಕೀಯವಾಗಿ ಹತ್ತಿಕ್ಕಬೇಕು ಎಂಬ ಉದ್ದೇಶದಿಂದ ಕೋವಿಡ್ ನೆಪ ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ. ಹೀಗಾಗಿ ಜವಾಬ್ದಾರಿಯುತ ಸಚಿವರು ಆರೋಪ ಮಾಡಿದ್ದಾರೆ. ಹಿಟ್ ಅಂಡ್ ರನ್ ಮಾಡಲು ಸದನ ಇಲ್ಲ ಎಂದು ಹೇಳಿದರು.
ಆಗ ಕಂದಾಯ ಸಚಿವ ಕೃಷ್ಣಾಭೈರೇಗೌಡ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದರು. ಪ್ರತಿಯಾಗಿ ಬಿಜೆಪಿ ಶಾಸಕರು ಮಾತನಾಡಿದ್ದರಿಂದ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಅಶೋಕ್ ಪತ್ರಿಕೆಯ ಜೆರಾಕ್ಸ್ ಪ್ರತಿಯೊಂದನ್ನು ಪ್ರದರ್ಶಿಸಿ ವಿಜಯೇಂದ್ರ ಅವರ ಮೇಲೆ ಸಚಿವ ಖರ್ಗೆ ಮಾಡಿರುವ ಆರೋಪ ಸಿಬಿಐಗೆ ಕೊಡಿ, ಅವರ ಬಳಿ ಯಾವ ಆಧಾರವಿದೆ, ಆರೋಪ ಮಾಡುವ ಮುನ್ನ ಸಭಾಧ್ಯಕ್ಷರಿಗೆ ನೋಟೀಸ್ ಕೊಡಬೇಕಿತ್ತಲ್ಲವೇ ಎಂದರು.
ಪ್ರತಿಯಾಗಿ ಖರ್ಗೆ, ಪತ್ರಿಕೆಯೊಂದರ ಜೆರಾಕ್ಸ್ ಪ್ರತಿಯನ್ನು ಪ್ರದರ್ಶಿಸಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ಅವಕಾಶ ಕೊಡಿ ಎಂದು ಹೇಳಿ, ಆಮಿಷ ಒಡ್ಡಿದ್ದಾರೆ ಎಂದು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನ್ಪಡಿ ಆರೋಪ ಮಾಡಿದ್ದಾರೆ. ಅವರು ಈ ಆರೋಪದ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಜೆ.ಪಿ.ನಡ್ಡಾ, ಅಮಿತ್ ಶಾ ಅವರಿಗೂ ಪತ್ರ ಬರೆದಿದ್ದಾರೆ. ಅಲ್ಪ ಸಂಖ್ಯಾತರ ಆಯೋಗಕ್ಕೆ ಬಿಜೆಪಿ ಸರ್ಕಾರವೇ ಮಾನ್ಪಡಿ ಅವರನ್ನು ನೇಮಕ ಮಾಡಿದ್ದರು ಎಂದರು.
ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಏರಿದ ಧ್ವನಿಯಲ್ಲಿ ಮಾತನಾಡಲು ಮುಂದಾದರು. ಪ್ರತಿಯಾಗಿ ಖರ್ಗೆಯೂ ಮಾತನಾಡಲು ಮುಂದಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಭಾಧ್ಯಕ್ಷರು ಪರಿಸ್ಥಿತಿಯನ್ನು ತಿಳಿಗೊಳಿಸಿ ಉತ್ತರಕರ್ನಾಟಕ ಅಭಿವೃದ್ಧಿಯ ಚರ್ಚೆಗೆ ಅವಕಾಶ ಮಾಡಿಕೊಟ್ಟರು.