ಬೆಂಗಳೂರು,ಡಿ.16- ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರ ಮನೆ ಮುಂಬಾಗಿಲು ಮೀಟಿ ಒಳ ನುಗ್ಗಿದ ಚೋರರು ನಗದು ಸೇರಿದಂತೆ 50ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಿಲಕ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಯನಗರ 4ನೇ ಬ್ಲಾಕ್, 13ನೇ ಮುಖ್ಯರಸ್ತೆ 12ನೇ ಕ್ರಾಸ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ನಾಗರಾಜ್ ಎಂಬುವರ ಮನೆಯಿದೆ. ಡಿ.13ರಂದು ಅವರು ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗಿದ್ದರು.
ಆ ವೇಳೆ ಕಳ್ಳರು ಅವರ ಮನೆಯ ಮುಂಬಾಗಿಲು ಮೀಟಿ ಒಳನುಗ್ಗಿ ಬೀರುಗಳ ಬೀಗವನ್ನು ಒಡೆದು 3 ಲಕ್ಷ ರೂ. ಹಣ ಸೇರಿದಂತೆ 50 ಲಕ್ಷ ಮೌಲ್ಯದ ಅರ್ಧ ಕೆಜಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.ನಿನ್ನೆ ರಾತ್ರಿ ನಾಗರಾಜು ಹಾಗೂ ಕುಟುಂಬದವರು ವಾಪಸಾದಾಗ, ಮನೆ ಮುಂಬಾಗಿಲು ಮೀಟಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಒಳಗೆ ಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕಳ್ಳರು ಮನೆಯಲ್ಲಿದ್ದ ಅರ್ಧ ಕೆಜಿ ಚಿನ್ನಾಭರಣ, 3ಲಕ್ಷ ಹಣ ಕಳವು ಮಾಡಿರುವುದು ಗೊತ್ತಾಗಿದೆ.
ನಂತರ ನಾಗರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸುದ್ದಿತಿಳಿದು ತಿಲಕ್ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾಗರಾಜು ಅವರು ಮನೆ ಸುತ್ತ -ಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಅದರಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.