ಬೆಳಗಾವಿ,ಡಿ.16– ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ ಮಾಡುವುದನ್ನು ಜನ ಸಹಿಸುವುದಿಲ್ಲ. ಉತ್ತರಕರ್ನಾಟಕಕ್ಕೆ ತಾರತಮ್ಯ ಮುಂದುವರೆದರೆ ಪ್ರತ್ಯೇಕ ರಾಜ್ಯದ ಕೂಗು ಏಳಲಿದೆ ಎಂದು ತೆರದಾಳು ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಎಚ್ಚರಿಕೆ ನೀಡಿದ್ದಾರೆ.
ಸುವರ್ಣಸೌಧದಲ್ಲಿಂದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರಕರ್ನಾಟಕದ ಪ್ರಮುಖ ಸಮಸ್ಯೆ ಎಂದರೆ ಅದು ಕೃಷ್ಣಾ ಮೇಲ್ದಂಡೆ ಯೋಜನೆಯಾಗಿದೆ. ಆಲಮಟ್ಟಿ ಎತ್ತರದ ಕುರಿತು ಪದೇಪದೇ ಚರ್ಚೆಗಳಾಗುತ್ತಿವೆ. 1964 ರಲ್ಲಿ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ 40 ವರ್ಷಗಳ ಬಳಿಕ ಪೂರ್ಣಗೊಂಡಿತ್ತು. ಆಲಮಟ್ಟಿ ಎತ್ತರ ಇನ್ನೂ ಬಾಕಿ ಇದೆ.
ಭೂಸ್ವಾಧೀನಕ್ಕೆ ಅಂತಿಮ ಹಂತದ ಸರ್ವೆ ಮಾಡಿ 2700 ಎಕರೆ ಪರಿಹಾರ ನೀಡಲಾಗಿದೆ. ಉಳಿದ ಭೂಮಿಗೆ ಹಣ ನೀಡಿಲ್ಲ. ಹೀಗಾಗಿ ರೈತರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೀರಿನ ಸಂಗ್ರಹಣೆಯಿಂದ ಭೂಮಿ ಜೌಗು ಪ್ರದೇಶವಾಗಿದ್ದು, ಕೃಷಿಗೆ ಯೋಗ್ಯವಿಲ್ಲದಂತಾಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗವನ್ನು ಎಲ್ಲಾ ಸರ್ಕಾರಗಳು ಕಡೆಗಣಿಸಿವೆ. ಕಾವೇರಿ ನದಿ ಯೋಜನೆಗಳಿಗೆ ನೀಡುವಷ್ಟು ಆದ್ಯತೆಯನ್ನು ಕೃಷ್ಣಾ ನದಿ ಯೋಜನೆಗಳಿಗೆ ನೀಡುತ್ತಿಲ್ಲ. ಕಾವೇರಿ ಯೋಜನೆಯಲ್ಲಿ ಪರಿಹಾರ ನೀಡುವುದರಲ್ಲಿ ವಿಳಂಬವಾಗಿದ್ದರೆ ರೈತರ ಪ್ರತಿಕ್ರಿಯೆಯೇ ಬೇರೆ ರೀತಿ ಇರುತ್ತಿತ್ತು. ಆದರೆ ನಮ ಭಾಗದಲ್ಲಿ ಒಗ್ಗಟ್ಟಿಲ್ಲದ ಕಾರಣ ಈವರೆಗೂ ಹಣ ಸಿಕ್ಕಿಲ್ಲ ಎಂದರು. ಸರ್ಕಾರ ನೀಡುತ್ತಿರುವ ಪರಿಹಾರಕ್ಕೂ, ಮಾರುಕಟ್ಟೆ ದರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪರಿಹಾರ ಪಡೆದ ರೈತರು ಬೇರೆ ಕಡೆ ಜಮೀನು ಪಡೆಯಲು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶದಲ್ಲಿ ಕೋಟ್ಯಾಂತರ ರೂ. ನೀಡಲಾಗುತ್ತಿದೆ. ರೈತರ ಜಮೀನುಗಳಿಗೆ ಕಡಿಮೆ ಹಣ ನೀಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಹಿನ್ನೀರಿನ ಪ್ರದೇಶದ ಜನರ ಬದುಕು ಧನನೀಯವಾಗಿದೆ. ಬಾಗಲಕೋಟೆ, ಬಿಜಾಪುರ ಜನರು ಪರಿತಪಿಸುತ್ತಿದ್ದಾರೆ. ಯೋಜನೆಯಿಂದ ಲಾಭ ಪಡೆಯುತ್ತಿರುವ ಜಿಲ್ಲೆಯ ಜನರು ನಮ ನೆರವಿಗೆ ಬರಬೇಕು. ಸರ್ಕಾರದ ನಿರ್ಲಕ್ಷ್ಯಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಯೋಜನೆ ಬಗ್ಗೆ ಶಾಸಕರು ಮಾತನಾಡುತ್ತಿದ್ದಾರೆ. ಸಚಿವರು ಇತ್ತ ಗಮನ ಹರಿಸಬೇಕು ಎಂದು ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಸಲಹೆ ನೀಡಿದರು.
ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಶಾಸಕರ ಮಾತು ಕೇಳುತ್ತಿದ್ದಾರೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಸ್ಪಷ್ಟನೆ ನೀಡಿದರು. ಚರ್ಚೆ ಮುಂದುವರೆಸಿದ ಸಿದ್ದು ಸವದಿ, ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತರಿಗೆ ಮೋಸವಾಗುತ್ತಿದೆ. ತೂಕದಲ್ಲೂ ಮೋಸವಾಗುತ್ತಿದೆ. ವಂಚನೆ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಧ್ಯಪ್ರವೇಶಿಸಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದಪಾಟೀಲ, ಕಬ್ಬಿಗೆ 3150 ದರ ಇತ್ತು. ಈ ಬಾರಿ 3,400 ರೂ.ಗಳಿಗೆ ಹೆಚ್ಚಿಸಿದ್ದೇವೆ. ಯಾವ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಆಗುತ್ತಿದೆ ಎಂಬ ದೂರು ಕೊಟ್ಟರೆ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುತ್ತೇವೆ. ಯಾರೂ ದೂರು ಕೊಡಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ಸರ್ಕಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬಹುದು ಎಂದು ಸಿದ್ದು ಸವದಿ ಹೇಳಿದರು. ಚರ್ಚೆಯನ್ನು ಮುಂದುವರೆಸಿದ ಶಾಸಕರು ಶೀಘ್ರವಾಗಿ ತೂಕದ ಯಂತ್ರಗಳನ್ನು ಅಳವಡಿಕೆ ಮಾಡಿ ಎಂದು ಆಗ್ರಹಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಇದೇ ಅಧಿವೇಶನದಲ್ಲಿ ಸಮರ್ಪಕ ಉತ್ತರ ನೀಡಬೇಕು. ಈ ಹಿಂದೆ ಯೋಜನೆಗೆ 40 ಸಾವಿರ ಕೋಟಿ ರೂ. ನೀಡುವುದಾಗಿ ಸಿದ್ದರಾಮಯ್ಯ ಹೇಳಿದರು. ಅದರಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ರೈತರು ಹೋರಾಟ ತೀವ್ರಗೊಳಿಸಲಿದ್ದಾರೆ. ಮಲತಾಯಿ ಧೋರಣೆ ಮುಂದುವರೆದರೆ ಉತ್ತರ ಕರ್ನಾಟಕ ಭಾಗದ ಪ್ರತ್ಯೇಕ ರಾಜ್ಯದ ಕೂಗು ಏಳಲಿದೆ. ಕಾವೇರಿ ನದಿ ಯೋಜನೆಗಳಷ್ಟೇ ಆದ್ಯತೆಯನ್ನು ಕೃಷ್ಣಾ ನದಿಗೂ ನೀಡಿ ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕರಿಗೆ ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಅನುದಾನ ಹಂಚಿಕೆಯಲ್ಲಿ ತೀವ್ರವಾದ ತಾರತಮ್ಯವಾಗುತ್ತಿದೆ. ಮನೆ ಹಂಚಿಕೆಯಲ್ಲೂ ಕಡೆಗಣಿಸಲಾಗುತ್ತಿದೆ. ಈ ಮಲತಾಯಿ ಧೋರಣೆಯನ್ನು ಹೇಗೆ ನಿಭಾಯಿಸಲು ಸಾಧ್ಯ. ಜನರಿಗೆ ಹೇಗೆ ಉತ್ತರ ನೀಡಬೇಕು ಎಂದು ಪ್ರಶ್ನಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮನೆಗಳ ಹಂಚಿಕೆಯಲ್ಲಿ ಸಮಾನತೆ ಇರಬೇಕು. ತಾರತಮ್ಯ ಒಳ್ಳೆಯದಲ್ಲ ಎಂದರು.ಸಿದ್ದು ಸವದಿಯವರು, ಉತ್ತರಕರ್ನಾಟಕ ಭಾಗದಲ್ಲಿ ನೇಕಾರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಸರ್ಕಾರ ವಿದ್ಯಾವಿಕಾಸ ಯೋಜನೆಗಳಡಿ ಸಮವಸ್ತ್ರ ಪೂರೈಕೆ ಜವಾಬ್ದಾರಿಯನ್ನು ನೇಕಾರರಿಗೆ ಒಪ್ಪಿಸಿದರೆ ನಿರಂತರ ಉದ್ಯೋಗ ದೊರೆಯಲು ಸಾಧ್ಯ. ಅಂಬಾನಿ, ಅದಾನಿಯಂತಹ ಶ್ರೀಮಂತ ಉದ್ಯಮಿಗಳಿಂದ ನೇಕಾರರಿಗೆ ಅನ್ಯಾಯವಾಗುತ್ತಿದೆ. ಇದಕ್ಕಾಗಿ ಅವರು ಕೆಲಸ ಬಿಟ್ಟು ಧರಣಿ ನಡೆಸುತ್ತಿದ್ದಾರೆ ಎಂದು ಹೇಳಿದರು.