Thursday, December 26, 2024
Homeಬೆಂಗಳೂರುಸದ್ದು ಮಾಡಿದ ಪೊಲೀಸರ ರಿವಾಲ್ವರ್, ರೌಡಿಗೆ ಗುಂಡೇಟು

ಸದ್ದು ಮಾಡಿದ ಪೊಲೀಸರ ರಿವಾಲ್ವರ್, ರೌಡಿಗೆ ಗುಂಡೇಟು

Police shot rowdy in Bengaluru

ಆನೇಕಲ್,ಡಿ.16- ಬೆಳ್ಳಂಬೆಳಗ್ಗೆ ಪೊಲೀಸರ ರಿವಾಲ್ವರ್ ಸದ್ದು ಮಾಡಿದ್ದು, ರೌಡಿ ಲೋಕೇಶ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.ಕೊಲೆ ಯತ್ನ ಪ್ರಕರಣದಲ್ಲಿ ರೌಡಿ ಬೆಸ್ತಮಾನಹಳ್ಳಿ ಲೋಕೇಶ್ ಪೊಲೀಸರಿಗೆ ಬೇಕಾಗಿದ್ದನು.

ಈತ ಹೊರವಲಯದ ಮಾಯಾಸಂದ್ರ ಸಮೀಪ ಇರುವ ಬಗ್ಗೆ ಖಚಿತಪಡಿಸಿಕೊಂಡು ಬಂಧನಕ್ಕೆ ಬನ್ನೇರುಘಟ್ಟ ಠಾಣೆ ಪಿಎಸ್ಐ ಸಿದ್ದನಗೌಡ ಮತ್ತು ಸಿಬ್ಬಂದಿ ತಂಡ ಇಂದು ಬೆಳಗ್ಗೆ ತೆರಳಿತ್ತು.

ಆ ವೇಳೆ ಪೊಲೀಸರನ್ನು ಕಂಡ ರೌಡಿ ಲೋಕೇಶ್ ಚಾಕುವಿನಿಂದ ಕಾನ್ಸ್ಟೇಬಲ್ ಚನ್ನಬಸವ ನಾಯಕ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.ತಕ್ಷಣ ಪಿಎಸ್ಐ ಸಿದ್ದನಗೌಡ ಅವರು ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದರೂ, ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಮುಂದಾದಾಗ ಆತ ರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿದಾಗ ಕುಸಿದು ಬಿದ್ದಿದ್ದಾನೆ.

ತಕ್ಷಣ ಪೊಲೀಸರು ಆತನನ್ನು ಸುತ್ತುವರಿದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಕಾನ್ಸ್ಟೇಬಲ್ ಚನ್ನಬಸವ ನಾಯಕ್ ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೌಡಿ ಲೋಕೇಶನ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಇತ್ತೀಚಿಗೆ ರೌಡಿ ಮನೋಜ್ ಮೇಲೆ ಲೋಕಿ ಗ್ಯಾಂಗ್ ದಾಳಿ ನಡೆಸಿತ್ತು. ತದ ನಂತರದಲ್ಲಿ ಲೋಕೇಶ್ ತಲೆ ಮರೆಸಿಕೊಂಡಿದ್ದನು . ಇಂದು ಮುಂಜಾನೆ ಪೊಲೀಸರ ಕಾರ್ಯಾ ಚರಣೆ ವೇಳೆ ಸಿಕ್ಕಿಬಿದ್ದಿದ್ದಾನೆ.
ಸುದ್ದಿ ತಿಳಿದು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ ನಾಗೇಶ್ ಕುಮಾರ ಮತ್ತು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ಕುಮಾರ್ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದರು.

RELATED ARTICLES

Latest News