ಬೆಂಗಳೂರು,ಡಿ.17- ಹೊಸ ವರ್ಷದ ಹೊಸ್ತಿಲಲ್ಲೇ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆಫ್ರಿಕಾ ದೇಶದ ಮಹಿಳೆಯನ್ನು ಬಂಧಿಸಿ 24 ಕೋಟಿ ರೂ. ಮೌಲ್ಯದ 12 ಕೆ.ಜಿ. ಎಂಡಿಎಂಎ ಕ್ರಿಸ್ಟಲ್, 78 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.ಇಷ್ಟೊಂದು ದುಬಾರಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲು ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಐದು ವರ್ಷದ ಹಿಂದೆ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದಿರುವ ಈ ಆಫ್ರಿಕಾ ಮೂಲದ ಮಹಿಳೆ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಕೆ.ಆರ್ಪುರದ ಟಿಸಿ ಪಾಳ್ಯದಲ್ಲಿ ನೆಲೆಸಿದ್ದು, ದಿನಸಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾಳೆ.ವಿದೇಶಿ ಪ್ರಜೆಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದರ ಜೊತೆಗೆ ಧಾನ್ಯದ ಪ್ಯಾಕೇಟ್ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದಳು.
ಈ ಬಗ್ಗೆ ಖಚಿತ ಮಾಹಿತಿ ಮೆರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದಾಳಿ ಮಾಡಿ ವಿದೇಶಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಮೋಜಿನ ಜೀವನ ನಡೆಸುವ ಸಲುವಾಗಿ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ಮುಂಬೈನಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಮಹಿಳೆ ಕ್ರಿಸ್ಟಲ್ ಮಾದಕವಸ್ತುಗಳನ್ನು ರೈಸ್, ಸೋಪು ಮತ್ತು ಒಣಮೀನಿನ ಪ್ಯಾಕೆಟ್ಗಳ ಕೆಳಗಡೆ ಇಟ್ಟು ಮುಂಬೈನಿಂದ ನಗರಕ್ಕೆ ತಂದು ಟಿ.ಸಿ.ಪಾಳ್ಯದಲ್ಲಿ ಅಂಗಡಿ ಇಟ್ಟುಕೊಂಡಿರುವ ಮಹಿಳೆಗೆ ಕೊಡುತ್ತಿದ್ದಳು ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಮುಂಬೈ ಮಹಿಳೆ ಕಡಿಮೆ ಬೆಲೆಗೆ ತಂದು ಕೊಡುತ್ತಿದ್ದ ಮಾದಕವಸ್ತುಗಳನ್ನು ವಿದೇಶಿ ಪ್ರಜೆಗಳಿಗೆ, ಪರಿಚಿತ ಗಿರಾಕಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್ ವೇರ್ ಉದ್ಯೋಗಿಗಳಿಗೆ ಬಂಧಿತ ಮಹಿಳೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.ಮುಂಬೈನಿಂದ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್ನ್ನು ನಗರಕ್ಕೆ ತಂದಿದ್ದ ವಿದೇಶಿ ಮಹಿಳೆ ತಪ್ಪಿಸಿಕೊಂಡಿದ್ದು, ಆಕೆಯ ಪತ್ತೆ ಕಾರ್ಯ ಮುಂದುವರೆದಿದೆ.
ಆರೋಪಿತೆಯಿಂದ ಬಿಳಿ ಮತ್ತು ಹಳದಿ ಬಣ್ಣದ ನಿಷೇದಿತ ಮಾದಕ ವಸ್ತು 12 ಕೆಜಿ ಎಂ.ಡಿ.ಎಂ.ಎ ಕ್ರಿಸ್ಟಲ್, ಒಂದು ಮೊಬೈಲ್ ಫೋನ್, 78 ಏರ್ಟೇಲ್ ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿ.ಸಿ.ಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಯಶಸ್ವಿಯಾಗಿ ಕೈಗೊಂಡಿದೆ.ಬಂಧಿತ ಆರೋಪಿ ಮಹಿಳೆ 78 ಸಿಮ್ ಕಾರ್ಡ್ಗಳನ್ನು ಏಕೆ ಇಟ್ಟುಕೊಂಡಿದ್ದಳು ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.