ಬೆಳಗಾವಿ,ಡಿ.17- ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಎಐಸಿಸಿ ಕುಟುಂಬದ ಒಡೆತನಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಸಿಎ ನಿವೇಶನ ನೀಡಿರುವ ವಿಚಾರ ವಿಧಾನಪರಿಷತ್ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಸಿ.ಟಿ.ರವಿ ಅವರು ಕೆಐಎಡಿಬಿ ವತಿಯಿಂದ ಸಿಎ ನಿವೇಶನ ಹಂಚಿಕೆ ಕುರಿತು ಪ್ರಶ್ನೆ ಮಾಡಿದರು. ಈ ವೇಳೆ ಸಿಎ ನಿವೇಶನ ಹಂಚಿಕೆ ಮಾಡಲು ಇರುವ ಮಾನ ದಂಡಗಳೇನು?, ಕಾಲ ಕಾಲಕ್ಕೆ ಇವು ಬದಲಾಗುತ್ತವೆ. ನಿವೇಶನ ಹಂಚಿಕೆ ಕುರಿತು ಯಾವ ಪತ್ರಿಕೆಗೆ ಜಾಹೀರಾತು ಕೊಟ್ಟಿದ್ದೀರಿ, ನಿಯಮ ಪಾಲನೆ ಬಗ್ಗೆ ಜನರ ಕಣ್ಣಿಗೆ ಮಣ್ಣೆರೆಚಲು ಜಾಹೀರಾತು ನೀಡಿದ್ದೀರಾ? ಎಂದು ಪ್ರಶ್ನಿಸಿದರು.
ಸಿಎ ನಿವೇಶನ ಪಡೆದು ಶಾಲೆ, ಸಮುದಾಯ ಭವನ, ಆಸ್ಪತ್ರೆ ನಿರ್ಮಾಣ ಮಾಡಬೇಕು. ಅಪಾರ್ಟ್ಮೆಂಟ್ ಮತ್ತು ಹೋಟೆಲ್ ನಿರ್ಮಾಣ ಮಾಡುವುದು ಕಮರ್ಷಿಯಲ್ ಆಗುವುದಿಲ್ಲವೇ?, ಇವೆಲ್ಲಾ ಕೈಗಾರಿಕಾ ಸಿಎ ನಿವೇಶನ ವ್ಯಾಪ್ತಿಗೆ ಬರುತ್ತದೆಯೇ? ಎಂದು ಪ್ರಶ್ನಿಸಿದರು.
ಆಗ ಉತ್ತರಿಸಿದ ಸಚಿವ ಎಂ.ಬಿ.ಪಾಟೀಲ್, ಸಿಎ ನಿವೇಶನ ಹಂಚಿಕೆಗಳ ಕುರಿತಂತೆ ನಮ ಸರ್ಕಾರ ಹೊಸದಾಗಿ ನಿಯಮಗಳನ್ನು ಮಾಡಿಲ್ಲ. 1991 ರಲ್ಲಿಯೇ ಇದು ಇದೆ. 2023 ರಲ್ಲಿ ಅಂತಿಮ ಅಧಿಸೂಚನೆಯಾಗಿದೆ. ಇದರ ಪ್ರಕಾರ, ಸಿಎ ನಿವೇಶನದಲ್ಲಿ ಹೋಟೆಲ್ಗಳು, ಆಸ್ಪತ್ರೆ, ಕೈಗಾರಿಕಾ ಪಾರ್ಕ್ಗಳಲ್ಲಿ ಅಪಾರ್ಟ್ಮೆಂಟ್, ಕಾಂಪ್ಲೆಕ್‌್ಸ ನಿರ್ಮಿಸಿಕೊಳ್ಳುತ್ತಾರೆ.
ಉದ್ಯಮಿಗಳನ್ನು ಪ್ರೋತ್ಸಾಹಿಸಲು ನಾವು ಸಿಎ ನಿವೇಶನಗಳನ್ನು ಹೊರರಾಜ್ಯದವರಿಗೂ ನೀಡಬೇಕು. ನಮ ಸರ್ಕಾರ ಹೊಸದಾಗಿ ಈ ನಿಯಮಗಳನ್ನು ಮಾಡಿಲ್ಲ, ಹಿಂದಿನ ಸರ್ಕಾರ ಇದನ್ನು ಮಾಡಿದೆ ಎಂದು ಸಮರ್ಥನೆ ಮಾಡಿಕೊಂಡರು.
ಆಗ ಜೆಡಿಎಸ್ನ ಭೋಜೇಗೌಡ, ಶರವಣ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಮತ್ತಿತರರು ಸಚಿವರು ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರ ಕೊಡದೆ ಬೇಜವಾಬ್ದಾರಿ ಉತ್ತರ ಕೊಡುತ್ತಿದ್ದಾರೆ. ಹಿಂದಿನ ಸರ್ಕಾರ ತಪ್ಪು ಮಾಡಿದೆ. ಈಗ ನಮ ಸರ್ಕಾರವು ಅದೇ ತಪ್ಪು ಮಾಡುತ್ತದೆ ಎಂಬುದು ಇವರ ಹೇಳಿಕೆಯಾಗಿದೆ. ಇದು ಬೇಜವಾಬ್ದಾರಿ ಉತ್ತರ ಎಂದು ಭೋಜೇಗೌಡ ವಾಗ್ದಾಳಿ ನಡೆಸಿದರು.
ಒಂದು ಟ್ರಸ್ಟ್ಗೆ ರಕ್ಷಣಾ ವಲಯಕ್ಕೆ ಸೇರಿದ ಕಡೆ ನಿವೇಶನ ನೀಡಲಾಗಿದೆ. ಇದರಲ್ಲಿ ನಿಮ ಹಿತಾಸಕ್ತಿ ಏನು ಎಂದು ಛಲವಾದಿ ನಾರಾಯಣಸ್ವಾಮಿಯವರು ಎಂ.ಬಿ.ಪಾಟೀಲ್ಗೆ ಪ್ರಶ್ನಿಸಿದರು.
ಆಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಗದ್ದಲದ ನಡುವೆಯೇ ಸಚಿವ ಎಂ.ಪಿ.ಪಾಟೀಲ್ರು, ಸಿಎ ನಿವೇಶನದಲ್ಲಿ ಆರ್ ಆ್ಯಂಡ್ ಡಿ ಸೆಂಟರ್, ಇನ್ನೋವೇಷನ್ ಸೆಂಟರ್, ಟೆಕ್ನಿಕಲ್ ಇನ್ಸ್ಟಿಟ್ಯೂಟ್, ಬ್ಯಾಂಕ್, ಹೋಟೆಲ್ಗಳು, ಕ್ಯಾಂಟೀನ್ಗಳು, ಅಪಾರ್ಟ್ಮೆಂಟ್ಗಳಿಗೂ ಹಂಚಿಕೆ ಮಾಡಿದ್ದೇವೆ. ಇದರಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ. ಎಲ್ಲವೂ ನಿಯಮಬದ್ಧವಾಗಿ ನಡೆದಿದೆ ಎಂದು ಬಲವಾಗಿ ಸಮರ್ಥಿಸಿಕೊಂಡರು.
ಸಿಎ ನಿವೇಶನಕ್ಕೆ ಒಟ್ಟು 287 ಅರ್ಜಿಗಳು ಬಂದಿದ್ದವು. ಇದರಲ್ಲಿ 41 ಅರ್ಜಿಗಳನ್ನು ಹಂಚಿಕೆ ಮಾಡಿದ್ದೇವೆ. ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ನಾನು ಸರಿಯಾದ ಉತ್ತರವನ್ನು ಕೊಟ್ಟಿದ್ದರೂ ಸದಸ್ಯರು ಏಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು. ಸಿಎ ನಿವೇಶನ ಪಡೆದ ಇಬ್ಬರು ನಿವೇಶನಗಳನ್ನು ಇಲಾಖೆಗೆ ಹಿಂದಿರುಗಿಸಿದ್ದಾರೆ.
ಕಾಲಕಾಲಕ್ಕೆ ಒಳ್ಳೆಯ ಕಾರಣಕ್ಕೆ ನಿಯಮಗಳನ್ನು ಬದಲಾವಣೆ ಮಾಡುತ್ತೇವೆ. ಇನ್ನೂ 150 ಸಿಎ ನಿವೇಶನ ಹಂಚಿಕೆ ಬಾಕಿ ಉಳಿದಿವೆ. ಹಿಂದೆ ಏರೋಸ್ಪೇಸ್ ಡಿಫೆನ್‌್ಸ ಪಾರ್ಕ್ನಲ್ಲಿ ಒಂದು ಶಿಕ್ಷಣ ಸಂಸ್ಥೆಗೆ ನಿವೇಶನ ಕೊಡಲಾಗಿದೆ. ಇದರಿಂದ ಸರ್ಕಾರಕ್ಕೆ 135 ಕೋಟಿ ರೂ. ನಷ್ಟ ಉಂಟಾಗಿತ್ತು. ಆದರೆ ಶಿಕ್ಷಣ ಸಂಸ್ಥೆಗೆ ನೀಡಲಾಗಿದೆ. ರಾಜಕೀಯ ಮಾಡುವುದಾದರೆ ನಾವೂ ಮಾಡುತ್ತೇವೆ ಎಂದು ಸಿ.ಟಿ.ರವಿ ತಿರುಗೇಟು ನೀಡಿದರು.
ಕೆ ಐಎಡಿಬಿಗೆ ಸಿಎ ನಿವೇಶನ ಹಂಚಿಕೆ ಕುರಿತು ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸುವಂತೆ ಸಿ.ಟಿ.ರವಿ ಆದೇಶಿಸಿದರು.ಆಗ ಮಧ್ಯಪ್ರವೇಶ ಮಾಡಿದ ಸಭಾಪತಿಯವರು ನಿಮಗೆ ಸಚಿವರ ಉತ್ತರ ತೃಪ್ತಿ ಇರದಿದ್ದರೆ, ನೋಟಿಸ್ ಕೊಡಿ, ಅರ್ಧಗಂಟೆ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಚರ್ಚೆಗೆ ತೆರೆ ಎಳೆದರು.