ಬೆಂಗಳೂರು, ಡಿ.17- ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದರು.ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಪಕ್ಷಾತೀತವಾಗಿ ಎಲ್ಲಾ ಶಾಸಕರು ತಮಗೆ ಅನುದಾನ ದೊರೆಯುತ್ತಿಲ್ಲ ಅಳಲು ಹೇಳಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಯವರು ಈಗಲಾದರೂ ಎಚ್ಚೆತ್ತುಕೊಂಡು ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಹೆಚ್ಚಿನ ಹಣ ನೀಡಿ ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ ಶಾಶ್ವತ ಪರಿಹಾರ, ಕಬ್ಬು ಹಾಗೂ ತೊಗರಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ. ಯುವಕರ ನಿರುದ್ಯೋಗ ಸಮಸ್ಯೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಸೆಪ್ಟಂಬರ್ 17ರಂದು ಕಲರ್ಗ್ಬಿಯಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆ ನಡೆಸಲಾಗಿದೆ. 11 ಸಾವಿರ ಕೋಟಿ ರೂಪಾಯಿಗಳ ಕ್ರೀಯಾ ಯೋಜನೆ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಈವರೆಗೂ ಹಣ ಬಿಡುಗಡೆಯಾಗಿಲ್ಲ, ಯಾವ ಘೋಷಣೆಗಳು ಅನುಷ್ಠಾನಕ್ಕೆ ಬಂದಿಲ್ಲ ಎಂದರು.
ಕೃಷ್ಣ ಮೆಲ್ದಂಡೆ ಯೋಜನೆಗಾಗಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಪ್ರತಿ ವರ್ಷ 40 ಸಾವಿರ ಕೋಟಿ ರೂಪಾಯಿ ಕೊಟ್ಟು ಯೋಜನೆ ಪೂರ್ಣಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಚುನಾವಣೆ ವೇಳೆ ಭರವಸೆ ನೀಡಿದ್ದರು, ಅದು ಈಡೇರಿಲ್ಲ. ಈವರೆಗೂ ಆಲಮಟ್ಟಿ ಮುಳುಗಡೆ ಪ್ರದೇಶಕ್ಕೆ ಸೂಕ್ತ ಪುನರ್ವಸತಿ ಯೋಜನೆ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಲಬುರ್ಗಿ ಪ್ರದೇಶದಲ್ಲಿ ಆರು ಸಾವಿರ ಎಕರೆಯಲ್ಲಿ ತೋಗರಿ ಬೆಳೆದಿದ್ದಾರೆ. ಬೆಳೆ ನಷ್ಟವಾಗಿದೆ, ಅದಕ್ಕೆ ಪರಿಹಾರ ಪಾವತಿಸಿಲ್ಲ. ಬೆಳೆ ಸಮೀಕ್ಷೆ ಕೂಡ ನಡೆದಿಲ್ಲ. ಅಥಣಿಯಲ್ಲಿ ಕಳಪೆ ಬೀತ್ತನೆ ಬೀಜದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಭದ್ರ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದಾಗ ಸಾಕಷ್ಟು ನೀರು ಪೋಲಾಗಿದೆ. ರೈತರು ಆತಂಕದಲ್ಲಿದ್ದರು. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಉಳಿದ ಕ್ರಸ್ಟ್ ಗೇಟ್ಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದರು.
ಜಲಜೀವನ್ ಮೀಷನ್ ಯೋಜನೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯಿಸುತ್ತಿದೆ. ಬಿಜೆಪಿ ಸರ್ಕಾರದ ಇದ್ದಾಗ ಮೂರನೆ ಸ್ಥಾನದಲ್ಲಿದ್ದ ಕರ್ನಾಟಕ ಈಗ 26ನೇ ಸ್ಥಾನಕ್ಕೆ ಕುಸಿದಿದೆ. ಯೋಜನೆಯನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗದ ಸಾರಿಗೆ ಸೌಲಭ್ಯಕ್ಕೆ ಹೆಚ್ಚಿನ ಬಸ್ಗಳನ್ನು ಒದಗಿಸಬೇಕು. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ವರ್ಷದಲ್ಲಿ ಮೂರು ವಾರಗಳ ಕಾಲ ನಡೆಸಬೇಕು ಎಂದು ಆಗ್ರಹಿಸಿದರು.