ಬೆಂಗಳೂರು,ಡಿ.17- ಪತ್ನಿ ಹಾಗೂ ಆಕೆಯ ಕುಟುಂಬದವರೊಂದಿಗೆ ಜಗಳವಾಡಿ ತನ್ನದೇ 20 ದಿನದ ಮಗುವನ್ನು ಕೊಲ್ಲುವುದಾಗಿ ಬೆದರಿಸಿದ ರೌಡಿಯೊಬ್ಬ ಕೊಲೆಯಾಗಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಸಲಾನ್ (28) ಕೊಲೆಯಾದ ಸಿದ್ದಾಪುರ ಪೊಲೀಸ್ ಠಾಣೆಯ ರೌಡಿ ಶೀಟರ್. ಈತನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ.
ದಯಾನಂದ ನಗರದ ಸ್ಲಂ ಪ್ರದೇಶದಲ್ಲಿ ರೌಡಿ ಸಲಾನ್ ಕುಟುಂಬ ನೆಲೆಸಿದೆ. ಫ್ಯಾಬ್ರಿಕೇಶನ್ ವೃತ್ತಿ ಮಾಡುತ್ತಿದ್ದ ಈತನಿಗೆ ಮದುವೆಯಾಗಿದ್ದು 20 ದಿನದ ಮಗುವಿದೆ. ಪತ್ನಿಯೊಂದಿಗೆ ವಿನಾಕಾರಣ ಈತ ಜಗಳವಾಡುತ್ತಿದ್ದರಿಂದ ಆಕೆಯ ಕುಟುಂಬದವರು ನಿನ್ನೆ ಬಂದು ರಾಜಿ ಪಂಚಾಯ್ತಿ ಮಾಡಿದ್ದರು.
ರಾತ್ರಿಯೂ ಪತ್ನಿ ಜೊತೆ ಜಗಳವಾಡಿದಾಗ 112 ಗೆ ಕರೆ ಮಾಡಿದ್ದಾರೆ. ಪೊಲೀಸರು ಮನೆಗೆ ಬರುತ್ತಾರೆಂದು ಹೆದರಿದ ಸಲಾನ್ ಮನೆ ಮುಂದೆ ನಿಲ್ಲಿಸಿದ್ದ ಪತ್ನಿ ಸಂಬಂಧಿಯ ಬೈಕ್ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದನು.
ಪೊಲೀಸರು ಸ್ಥಳಕ್ಕೆ ಬಂದು ಬೆಂಕಿಯನ್ನು ನಿಂದಿಸಿ, ಗಲಾಟೆ ಬಗ್ಗೆ ವಿಚಾರಿಸಿ ತೆರಳಿದ್ದಾರೆ.
ಇಂದು ಬೆಳಗಿನ ಜಾವ 3.15ರ ಸುಮಾರಿಗೆ ಮತ್ತೆ ಸಲಾನ್ ಮನೆಗೆ ಬಂದಿದ್ದಾನೆ. ಆವೇಳೆ ತನ್ನದೇ 20 ದಿನದ ಮಗುವನ್ನು ಎತ್ತಿಕೊಂಡು, ಯಾರಾದರೂ ಹತ್ತಿರ ಬಂದರೆ ಮಗುವನ್ನು ಸಾಯಿಸುವುದಾಗಿ ಚಾಕು ತೋರಿಸಿ ಬೆದರಿಸಿದ್ದಾನೆ.
ಪತ್ನಿ ಹಾಗೂ ಭಾಮೈದ, ಸಂಬಂಧಿಕರು ಆತನಿಂದ ಮಗುವನ್ನು ಬಿಡಿಸಿಕೊಳ್ಳಲು ಮುಂದಾದಾಗ ತಳ್ಳಾಟ- ನೂಕಾಟ ನಡೆದಿದೆ. ಆಗ ಆರೋಪಿಗಳು ಸಲಾನ್ ಕೈಯಲ್ಲಿದ್ದ ಚಾಕು ಕಸಿದುಕೊಂಡು ಆತನಿಗೆ ಚುಚ್ಚಿ, ತಲೆಗೆ ಹೊಡೆದಿದ್ದರಿಂದ ಗಂಭೀರ ಗಾಯಗೊಂಡನು. ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ಸಲಾನ್ನನ್ನು ಕುಟುಂಬಸ್ಥರು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 10.15ರ ಸುಮಾರಿಗೆ ಮೃತಪಟ್ಟಿದ್ದಾನೆ.ಈ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.