ಬೆಳಗಾವಿ,ಡಿ.17- ರಾಜ್ಯಸರ್ಕಾರದ ಬಿಗಿಯಾದ ಕ್ರಮದಿಂದಾಗಿ ಶೇ.99ರಷ್ಟು ಅಕ್ರಮ ಗಣಿಗಾರಿಕೆಗಳು ಸ್ಥಗಿತಗೊಂಡಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿಧಾನಪರಿಷತ್ನಲ್ಲಿ ಹೇಳಿದ್ದಾರೆ.
ಸಚಿವ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಅಕ್ರಮ ಗಣಿಗಾರಿಕೆ ಚಟುವಟಿಕೆಗೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿತ್ತು. ಪರಿಣಾಮ ಈಗ ಶೇ.99 ರಷ್ಟು ಅಕ್ರಮ ಗಣಿಗಾರಿಕೆ ತನ್ನ ಚಟುವಟಿಕೆಗಳನ್ನು ನಿಲ್ಲಿಸಿವೆ. ಈಗ ಎಲ್ಲವೂ ಕಂಪ್ಯೂಟರೀಕರಣವಾಗಿರುವುದರಿಂದ ಶಿಸ್ತಿನಿಂದ ನಡೆಯುತ್ತಿವೆ. ಅಕ್ರಮ ಗಣಿಗಾರಿಕೆಗೆ ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಗಳಲ್ಲಿ ನಡೆಯುವ ಗಣಿಗಾರಿಕೆಗಳಿಗೆ ರಾಜಧನ ಮತ್ತು ಹೆಚ್ಚಿನ ತೆರಿಗೆ ವಿಧಿಸುವ ಹಕ್ಕು ರಾಜ್ಯಸರ್ಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಇದರಿಂದಾಗಿ ನಾವು ಗಣಿಗಾರಿಕೆ ನಡೆಸುವವರ ಮೇಲೆ ತೆರಿಗೆ ಹಾಕುವುದರಿಂದ ರಾಜ್ಯಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 4,750 ಕೋಟಿ ರೂ. ಆದಾಯ ಬರಲಿದೆ ಎಂದರು.
2015ಕ್ಕಿಂತ ಮುಂಚೆ ಗಣಿಗಾರಿಕೆ ಮೇಲೆ ಶೇ.55 ರಷ್ಟು ಹಾಗೂ 2015ರ ನಂತರ ಶೇ.45 ರಷ್ಟು ತೆರಿಗೆ ಹಾಕುತ್ತಿದ್ದೆವು. ಇದು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತಿತ್ತು. ಇದೀಗ ಸಂಪೂರ್ಣ ಅಧಿಕಾರ ರಾಜ್ಯಸರ್ಕಾರಕ್ಕೆ ಇರುವುದರಿಂದ ಸರ್ಕಾರಕ್ಕೆ 4,750 ಕೋಟಿ ರೂ. ಆದಾಯ ಬರಲಿದೆ. ಇದು ಮೊದಲು ಜಿಲ್ಲಾ ಖನಿಜ ನಿಧಿಗೆ ಹೋಗಿ ನಂತರ ಆರ್ಥಿಕ ಇಲಾಖೆಗೆ ಬರಲಿದೆ ಎಂದು ಮಲ್ಲಿಕಾರ್ಜುನ ಹೇಳಿದರು.