ಬೆಳಗಾವಿ,ಡಿ.18- ಸಂಸದರಾದವರು ಸಭಾಧ್ಯಕ್ಷರ ಪೀಠದಲ್ಲಿ ಕುಳಿತರೆ ಲೋಕಸಭೆ ಮಾದರಿ ಕಲಾಪ ನಡೆಸಲು ಸಾಧ್ಯವಾಗುತ್ತದೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು. ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಮಾಡಿದ ಸಲಹೆಗೆ ಸಭಾಧ್ಯಕ್ಷರು, ಸಚಿವರು ಲೋಕಸಭೆ ಮಾದರಿಯಲ್ಲಿ ಕಲಾಪ ನಡೆಸಲು ಅಪೇಕ್ಷಿಸುತ್ತಿದ್ದಾರೆ. ಸಲಹೆ ಮಾಡುತ್ತಿದ್ದಾರೆ.
ಅಲ್ಲಿ ಹೇಗೆ ಕಲಾಪಗಳು ನಡೆಸಲಾಗುತ್ತದೆ ಎಂಬ ವಿಷಯ ಗೊತ್ತಿಲ್ಲದೆ ನಾವು ಜಾರಿ ಮಾಡಲು ಸಾಧ್ಯವಿಲ್ಲ. ಲೋಕಸಭೆಯಲ್ಲಿ ಸದಸ್ಯರಾಗಿದ್ದ ನಿಮಂಥವರು ಈ ಪೀಠದಲ್ಲಿ ಕುಳಿತರೆ ಸಾಧ್ಯವಾಗುತ್ತದೆ ಎಂದು ಮುನಿಯಪ್ಪ ಅವರನ್ನು ಉದ್ದೇಶಿಸಿ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಮುನಿಯಪ್ಪ ಅವರು, ಲೋಕಸಭೆ ರೀತಿ ವಿಧಾನಸಭೆಯನ್ನು ಪ್ರಾರಂಭಿಸಿ. ಲೋಕಸಭೆಯಲ್ಲಿ 11 ಗಂಟೆಗೆ ಕಲಾಪ ಆರಂಭವಾಗುತ್ತದೆ. ರಾತ್ರಿಯವರೆಗೂ ನಡೆಯುತ್ತದೆ. ಅದೇ ರೀತಿ ವಿಧಾನಸಭೆಯಲ್ಲೂ ಕಲಾಪ ನಡೆಯಬೇಕು.
ಮೊದಲು ಪ್ರಶ್ನೋತ್ತರ ಪ್ರಾರಂಭಿಸಬೇಕು. ಆ ಕಲಾಪದಲ್ಲಿ ಮುಖ್ಯಮಂತ್ರಿ, ಸಚಿವರೂ ಇರಬೇಕು. 1 ಗಂಟೆ ಬೆಲ್ ಹಾಕಿದರೆ ಸರಿಯಲ್ಲ. ಹೊಸ ಬದಲಾವಣೆ ತರಬೇಕು ಶಿಸ್ತಿಲ್ಲ. ನಮಲ್ಲೇ ಶಿಸ್ತಿಲ್ಲ ಎಂದರೆ ಹೇಗೆ? ಜನರ ಇದನ್ನೆಲ್ಲ ನೋಡುತ್ತಿದ್ದಾರೆ ಎಂದರು.
ಇಂದು ಬೆಳಗ್ಗೆ 9 ಗಂಟೆಗೆ ಸದನ ಪ್ರಾರಂಭವಾಗಬೇಕಿತ್ತು. ಆದರೆ. 9.45ಕ್ಕೆ ಪ್ರಾರಂಭವಾಯಿತು. ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ನಿತ್ಯ ನಾವು ಸದನಕ್ಕೆ ತಡವಾಗಿ ಬರುತ್ತಿದ್ದೆವು. ಇಂದು ನೀವೇ ವಿಳಂಬ ಮಾಡಿದ್ದೀರಿ. ಈಗ ಉಲ್ಟಾ ಆಗಿದೆ ಎಂದರು. ಆಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಆಡಳಿತ ಪಕ್ಷದ ವರ್ತನೆಗೆ ಬೇಸತ್ತು ಸಭಾಧ್ಯಕ್ಷರು ಮೌನ ವ್ರತ ಮಾಡುತ್ತಿದ್ದಾರೆ ಎಂದು ಛೇಡಿಸಿದರು.