ಬೆಳಗಾವಿ,ಡಿ.18- ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ವಿರೋಧ ಪಕ್ಷದ ನಾಯಕ ಆರ್ಅಶೋಕ್ ವಿಧಾನಸಭೆಯಲ್ಲಿಂದು ಒತ್ತಾಯಿಸಿದರು. ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ಅವರು, ಬಾಣಂತಿಯರ ಸಾವಿನ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು.
ಕಳಪೆ ಔಷಧಿ ಪೂರೈಸಿದ ಕಂಪನಿಗಳಿಗೆ ಕಠಿಣ ಕ್ರಮದ ಸಂದೇಶ ನೀಡುವಂತಾಗಬೇಕು. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಹೇಳಿದರು. ಬಾಣಂತಿಯರ ಸಾವಿಗೆ ಬೆಲೆ ಕಟ್ಟಲಾಗದು. ಔಷಧಿ ತಯಾರಿಸುವ ಕಂಪನಿಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆಯನ್ನು ತನ್ನಿ. ಮೋಸ ಮಾಡುವ ಕಂಪನಿಗಳಿಗೆ ಕಡಿವಾಣ ಹಾಕಿ. ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ನೀಡಬೇಕೆಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರಿಗೆ ನಂಬಿಕೆ, ವಿಶ್ವಾಸ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು. ಕರ್ನಾಟಕದಲ್ಲಿ ಬೆಚ್ಚಿ ಬೀಳುವಂತಹ ಬಾಣಂತಿಯರ ಸರಣಿ ಸಾವು, ನವಜಾತ ಶಿಶುಗಳ ಸಾವು ನಡೆದಿದೆ. ಬಳ್ಳಾರಿ ಮಾತ್ರವಲ್ಲದೆ ದಾವಣಗೆರೆ, ಚಿತ್ರದುರ್ಗ, ರಾಯಚೂರು, ಬೆಳಗಾವಿಯಲ್ಲೂ ಬಾಣಂತಿಯರ ಸಾವುಗಳು ಸಂಭವಿಸಿವೆ.
ಆರೋಗ್ಯ ಇಲಾಖೆ, ರೋಗ ಪೀಡಿತವಾಗಿದ್ದು, ಅನಾರೋಗ್ಯ ಇಲಾಖೆಯಾಗಿದೆ. ಇಲಾಖೆಗೆ ರೋಗ ಬಂದಂತಾಗಿದೆ. ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ. ನಮದೇನೂ ತಪ್ಪಲ್ಲ. ಔಷಧಿ ದೋಷದಿಂದಲೇ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳುತ್ತಾರೆ. 6 ತಿಂಗಳ ಹಿಂದೆಯೇ ಔಷಧಿಯಿಂದಲೇ ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನಕಲಿ ವೈದ್ಯರ ಹಾವಳಿ ಕೂಡ ಕಂಡುಬರುತ್ತಿದೆ. ಹೀಗಾದರೂ ಆರೋಗ್ಯ ಇಲಾಖೆ ಕ್ರಿಯಾಶೀಲವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಲೋಕಾಯುಕ್ತರು, ಕಾರ್ಯ ನಿರ್ವಹಿಸದ ವೆಂಟಿಲೇಟರ್, ಬಾಣಂತಿಯರಿಗೆ ಬಿಸಿನೀರು ನೀಡದಿರುವುದು ಮೊದಲಾದ ಕೊರತೆಗಳು ಕಂಡುಬರುವುದನ್ನು ತಿಳಿಸಿದ್ದಾರೆ. ಅವಧಿ ಮೀರಿದ ಔಷಧಿಗಳು ವಿಲೇವಾರಿಯಾಗಿಲ್ಲ. ಡ್ರಗ್ ಮಾಫಿಯಾದಲ್ಲಿ ಸಿಲುಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕ ಔಷಧಿ ದಾಸ್ತಾನು ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ದರ ಏರಿಕೆ ಮಾಡಲಾಗಿದೆ ಎಂದಾಗ, ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ ಹೆಚ್ಚಳ ಮಾಡಲಾಗಿದೆ. ನಮ ಆಸ್ಪತ್ರೆಗಳಲ್ಲಿ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಚರ್ಚೆ ಮುಂದುವರೆಸಿದ ಅಶೋಕ್, ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳು ಬೇರೆ ರಾಜ್ಯದಲ್ಲಿದೆಯೇ ಎಂದು ಪ್ರಶ್ನಿಸಿದರು. 100 ವಿವಿಧ ಪರೀಕ್ಷೆಗಳ ಬೆಲೆ ಹೆಚ್ಚಳ ಮಾಡಲಾಗಿದೆ. ಕೋವಿಡ್ನಿಂದ ಈಗತಾನೇ ಚೇತರಿಸಿಕೊಳ್ಳುತ್ತಿದ್ದೇವೆ. ಬೆಲೆ ಏರಿಕೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಬಾಣಂತಿಯರಿಗೆ ನೀಡಲಾಗಿದ್ದ ಐವಿ ದ್ರಾವಣದಿಂದಲೇ ಅಂಗಾಂಗ ವೈಫಲ್ಯವಾಗಿ ಮೃತಪಟ್ಟಿರುವುದು ಎಂದು ಹೇಳಲಾಗಿದೆ. ಆದರೆ ವರದಿ ಬೇರೆ ರೀತಿ ಕೊಟ್ಟಿದ್ದಾರೆ ಎಂದರು.
ಔಷಧಿ ಪೂರೈಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದರೆ ಇನ್ನು ಒಂದು ವರ್ಷದಲ್ಲಿ ಬೇರೆ ಹೆಸರಿನಲ್ಲಿ ಅದೇ ಕಂಪನಿಯೇ ಔಷಧಿ ಪೂರೈಸುವಂತಹ ವ್ಯವಸ್ಥೆ ಇದೆ ಎಂದರು.
ನ್ಯಾಯಾಲಯದ ಆದೇಶದ ಮೇಲೆ ಅವರನ್ನು ಬಿಟ್ಟಿದ್ದೀರಿ ಎಂದಾಗ, ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅವರು ನ್ಯಾಯಾಲಯವು ತಡೆಯಾಜ್ಞೆ ಕೊಡುತ್ತದೆ. ಜೀವಕ್ಕೆ ಯಾರು ಜವಾಬ್ದಾರರು? ಒಂದು ಲ್ಯಾಬ್ ಸರಿಯಿಲ್ಲ ಎಂದರೆ , ಇನ್ನೊಂದು ಲ್ಯಾಬ್ ಸರಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಆಗ ಅಶೋಕ್ ಅವರು ಸರ್ಕಾರ ಏಕೆ ಹೈಕೋರ್ಟ್ನಲ್ಲಿ ಮೇಲನವಿ ಸಲ್ಲಿಸಲಿಲ್ಲ ಎಂದು ಪ್ರಶ್ನೆ ಮಾಡಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯಾಂಗದವರು ಕಾರ್ಯಾಂಗದ ಶಾಸನ ರಚಿಸುವ ಕೆಲಸ ಮಾಡುವುದಾದರೆ ನಾವು ಏಕೆ ಇರಬೇಕು.
ಆಡಳಿತದಲ್ಲಿ ಹಸ್ತಕ್ಷೇಪ ಎಷ್ಟು ಸರಿ? ನಮ ರಕ್ಷಣೆ ಯಾರು ಮಾಡುತ್ತಾರೆ ಎಂದರು. ಮಾತು ಮುಂದುವರೆಸಿದ ಅಶೋಕ್, ಕಳಪೆ ಔಷಧಿ ಪೂರೈಸಿದ ಕಂಪನಿ ವಿಚಾರದಲ್ಲಿ ನ್ಯಾಯಾಲಯದ ಆದೇಶವಿದೆ ಎಂದರೆ ಸಾವಿಗೆ ಯಾರು ನ್ಯಾಯ ಕೊಡುತ್ತಾರೆ.
ಗುಲ್ಬರ್ಗದಲ್ಲಿ ನಿನ್ನೆ ಮೃತಪಟ್ಟಿದ್ದಾರೆ ಎಂದು ಹಲವು ನಿದರ್ಶನ ಮತ್ತು ಅಂಕಿಅಂಶಗಳ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕ್ಯಾನ್ಸರ್ಗೆ ನೀಡುವಂತಹ ಔಷಧಿಯನ್ನು 40 ರೂ. ಗೆ ಪಡೆದು ಜನರು ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಮಹಿಳೆಯೊಬ್ಬರು ಹಾಕಿದ್ದಾರೆ. ಹೀಗಾದರೆ ಸರ್ಕಾರ ಇದೆಯೋ? ಸತ್ತಿದೆಯೋ, ಹಾದಿಬೀದಿಯಲ್ಲಿ ಡ್ರಗ್ ಸಿಗುತ್ತದೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.