ಮದ್ದೂರು, ಡಿ.18– ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೆ ಬೇರೆಯವರನ್ನು ಮದುವೆ ಯಾಗಿ ನೊಂದಿದ್ದ ಪ್ರೇಮಿಗಳು ಆತಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂ ಕಿನಲ್ಲಿ ನಡೆದೆದೆ. ಯರಗನಹಳ್ಳಿ ಗ್ರಾಮದ ಸೃಷ್ಟಿ(20) ನದಿಗೆ ಹಾರಿ ಮೃತಪಟ್ಟರೆ, ಬನ್ನಹಳ್ಳಿ ಗ್ರಾಮದ ಪ್ರಸನ್ನ(25) ನೇಣಿಗೆ ಶರಣಾಗಿದ್ದಾನೆ.
ಕಳೆದ ಕೆಲವು ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಟಿ ಪ್ರೀತಿಸುತ್ತಿದ್ದರು. ಮನೆಯವರ ಒತ್ತಾಯಕ್ಕೆ ಸೃಷ್ಟಿಯ ಸ್ನೇಹಿತೆ ಸ್ಪಂದನಾಳನ್ನು ಪ್ರಸನ್ನ ಮದುವೆಯಾಗಿದ್ದನು. ಇತ್ತ ದಿನೇಶ್ ಎಂಬುವವರ ಜೊತೆ ಸೃಷ್ಟಿಯ ಮದುವೆ ಆಗಿತ್ತು.ಇವರಿಬ್ಬರು ಬೇರೆ ಬೇರೆ ಮದುವೆಯಾಗಿದ್ದರೂ ಪ್ರಸನ್ನ ಹಾಗು ಸೃಷ್ಟಿ ನಡುವೆ ಪ್ರೀತಿ ಮಾತುಕತೆ ನಡೆಯುತ್ತಿತ್ತು. ಈ ವಿಚಾರ ದಿನೇಶ್ಗೆ ಗೊತ್ತಾಗಿ ಆಗಾಗ ಸೃಷ್ಟಿ ಜೊತೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಈ ನಡುವೆ ಡಿ.11ರಂದು ಸೃಷ್ಟಿ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆ ಬೆನ್ನಲ್ಲೇ ದಿನೇಶ್ ಅವರು ಕೆಸ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.ಡಿ.16ರಂದು ಶಿಂಷಾ ನದಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗುತ್ತು. ಪೊಲೀಸರು ಈ ಶವದ ಗುರುತು ಪತ್ತೆಹಚ್ಚಿದಾಗ ನಾಪತ್ತೆಯಾದ ಸೃಷ್ಟಿಯದ್ದೇ ಎನ್ನುವುದು ದೃಢಪಡುತ್ತದೆ. ಸೃಷ್ಟಿ ಆತಹತ್ಯೆ ವಿಚಾರ ತಿಳಿದು ಪ್ರಸನ್ನ ವಿಚಲಿತಗೊಂಡಿದ್ದ.
ಮದುವೆಯಾಗಿದ್ದರೂ ಗೆಳೆಯನ ಪ್ರೀತಿ ಮರೆಯಲಾಗದೆ ನದಿಗೆ ಹಾರಿ ಗೃಹಿಣಿ ಆತಹತ್ಯೆ ಮಾಡಿಕೊಂಡರೆ, ಪ್ರಿಯತಮೆ ಸಾವಿನ ವಿಚಾರ ತಿಳಿದು ಅತ್ತ ಪ್ರಿಯಕರ ಪ್ರಸನ್ನ ಸಹ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಕುತೂಹಲದ ವಿಚಾರವೆಂದರೆ ಸೃಷ್ಟಿ ಹಾಗೂ ಸ್ಪಂದನಾ ಇಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಪ್ರಸನ್ನ ಸೃಷ್ಟಿಯನ್ನು ಪ್ರೀತಿಸುತ್ತಿದ್ದ ವಿಚಾರ ಸ್ಪಂದನಾಗೆ ಗೊತ್ತಿರಲಿಲ್ಲ. ಮದುವೆಗೂ ಮೊದಲು ಪ್ರಸನ್ನ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೂ ಯತ್ನಿಸಿದ್ದ ವಿಚಾರ ಈಗ ತಿಳಿದುಬಂದಿದೆ.
ಈ ಮೂಲಕ ಮೂವರ ಪ್ರೇಮ ಕಥೆ ಇಬ್ಬರ ಸಾವಿನ ಮೂಲಕ ಮುಕ್ತಾಯವಾಗಿದೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.