ಬೆಳಗಾವಿ,ಡಿ.18- ರಾಜ್ಯದಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿಗೆ ಸರ್ಕಾರವೇ ನೇರ ಹೊಣೆ. ಈ ಸರ್ಕಾರ ಕೊಲೆಗಡುಕ ಸರ್ಕಾರ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಿಧಾನಸಭೆಯಲ್ಲಿಂದು ಗಂಭೀರ ಆರೋಪ ಮಾಡಿದರು.
ನಿಯಮ 69ರಡಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅವರು, ಸಾವಿನ ಹೊಣೆಯನ್ನು ಆರೋಗ್ಯ ಸಚಿವರೇ ಹೊರಬೇಕು. ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಅವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾದ ರಂಗನಾಥ್, ಬೇಳೂರು ಗೋಪಾಲಕೃಷ್ಣ, ಕೋನರೆಡ್ಡಿ, ನಯನ ಮೋಟಮ ಮೊದಲಾದವರು ಎದ್ದು ನಿಂತು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಯಾಗಿ ಮಾತನಾಡಲು ಮುಂದಾದಾಗ, ಸದನದಲ್ಲಿ ಗದ್ದಲ, ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಪರಸ್ಪರ ಆರೋಪ- ಪ್ರತ್ಯಾರೋಪಗಳು ನಡೆದು ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಯಿತು. ಗದ್ದಲದ ನಡುವೆಯೇ ಮಾತನಾಡಿದ ಅಶ್ವಥ್ ನಾರಾಯಣ, ಸರ್ಕಾರ ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ. ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಬ್ರೈನ್ ಕ್ಲಿನಿಕ್ ಪ್ರಾರಂಭಿಸಿ ದೊಡ್ಡದಾಗಿ ಪ್ರಚಾರ ಪಡೆದರು. ಆದರೆ ಒಬ್ಬ ನ್ಯೂರಾಲಿಜಿಸ್ಟ್ ಅನ್ನು ನೇಮಕ ಮಾಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ರಾಜ್ಯದಲ್ಲಿ ಸಂಭವಿಸಿರುವ ಬಾಣಂತಿಯರ ಸಾವುಗಳನ್ನು ಸಮರ್ಥನೆ ಮಾಡಿಕೊಳ್ಳಲಾಗುತ್ತದೆಯೇ ಎಂದಾಗ, ಕಾಂಗ್ರೆಸ್ ಶಾಸಕರಾದ ಡಾ.ರಂಗನಾಥ್, ಬೇಲೂರು ಗೋಪಾಲಕೃಷ್ಣ, ಕೋನರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವೈದ್ಯರ ವರ್ಗಾವಣೆ ಕೌನ್ಸಿಲ್ ಮೂಲಕ ಆಗಿಲ್ಲ. ವರ್ಗಾವಣೆ ಕಾಯ್ದೆ ಉಲ್ಲಂಘನೆಯಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದನಂತರ ವೈದ್ಯರ, ನರ್ಸ್ಗಳ ನೇಮಕವಾಗಿಲ್ಲ. ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಲ್ಲ. 16 ಜಂಟಿ ನಿರ್ದೇಶಕರ ಹುದ್ದೆಗಳು ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ. 12 ಸಾವಿರ ಕೋಟಿ ರೂ. ಇಲಾಖೆಗೆ ಒದಗಿಸಿದ್ದರೂ ಈ ವರ್ಷ ಶೇ.23ರಷ್ಟು ಮಾತ್ರ ಬಳಕೆಯಾಗಿದೆ.
108 ಆ್ಯಂಬುಲೆನ್‌್ಸಗಳಿಗೆ ಜಿಪಿಎಸ್ ವ್ಯವಸ್ಥೆಯೇ ಇಲ್ಲ. ಅವು ಆ್ಯಂಬುಲೆನ್‌್ಸ ಗಳೋ, ಶವಾಗಾರಗಳೋ ಗೊತ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು. ಒಂದೊಂದು ಆಸ್ಪತ್ರೆ ಒಂದೊಂದು ಆಸ್ಪತ್ರೆಯ ಬಳಕೆದಾರರ ಶುಲ್ಕ ವಿಧಿಸುತ್ತಿವೆ. ಏಕರೂಪದ ಶುಲ್ಕವಿಲ್ಲ. ಬಿಪಿಎಲ್ ಚೀಟಿದಾರರಿಗೂ ಶುಲ್ಕ ವಿಧಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಶುಲ್ಕ ವಿಧಿಸುವ ಕ್ಯಾಶ್ ಕೌಂಟರ್ ಅನ್ನೇ ತೆಗೆಯಬೇಕು. ಜಿಲ್ಲಾ , ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಐಸಿಯು, ಟ್ರಾಮಾ ಸೆಂಟರ್ ಮುಚ್ಚಿ ಹೋಗಿವೆ. 761 ವಿಧದ ಔಷಧಿಗಳು ಲಭ್ಯವಿರಬೇಕು. 253 ಮಾತ್ರ ಇದ್ದು 508 ಔಷಧಿಗಳು ಡ್ರಗ್‌್ಸ ಲಾಜಿಸ್ಟಿಕಲ್ನಲ್ಲಿ ಇಲ್ಲ.
ಬೇಡಿಕೆಯಷ್ಟು ಔಷಧಿ ಇರಬೇಕು ಎಂಬುದಿದೆ. ಔಷಧಿ ಗುಣಮಟ್ಟದಲ್ಲೂ ಲೋಪವಿದೆ. ಕಳಪೆ ಗುಣಮಟ್ಟದ ಔಷಧಿ ಪೂರೈಸಿದ ಕಂಪನಿಯ ಔಷಧಿ ತಯಾರು ಘಟಕವೇ ಗುಣಮಟ್ಟದಲ್ಲಿಲ್ಲ. ಬಾಣಂತಿಯರ ಸಾವು ಹೆರಿಗೆ ಸಾವು ಎಂದೇ ಪರಿಗಣಿಸಬೇಕಾಗುತ್ತದೆ. ಒಬ್ಬ ವೈದ್ಯರು ಒಂದೇ ದಿನದಲ್ಲಿ 25 ಸಿಜೇರಿಯನ್ ಮಾಡಲು ಸಾಧ್ಯವೇ? ಶಸ್ತ್ರ ಚಿಕಿತ್ಸಾ ಕೊಠಡಿ ಶುಚಿತ್ವ ಹೊಂದಿರುತ್ತದೆಯೇ ಎಂದು ಸರ್ಕಾರಿ ಆಸ್ಪತ್ರೆಗಳ ನ್ಯೂನತೆ ಮೇಲೆ ಅವರು ಬೆಳಕು ಚೆಲ್ಲಿದರು.