Wednesday, December 18, 2024
Homeರಾಜ್ಯಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆ ವೇಳೆ ಎದ್ದು ಕಾಣುತ್ತಿತ್ತು ನಡಹಳ್ಳಿ ಅನುಪಸ್ಥಿತಿ

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆ ವೇಳೆ ಎದ್ದು ಕಾಣುತ್ತಿತ್ತು ನಡಹಳ್ಳಿ ಅನುಪಸ್ಥಿತಿ

Nadahalli's absence during the discussion on North Karnataka's issues

ಬೆಳಗಾವಿ,ಡಿ.18- ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಯ ವೇಳೆ ಬಿಜೆಪಿ ಮಾಜಿ ಶಾಸಕ ಎ.ಎಸ್.ನಡಹಳ್ಳಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಪ್ರತಿ ಬಾರಿ ಚಳಿಗಾಲ ಅಧಿವೇಶನದ ವೇಳೆ ಸದನಕ್ಕೆ ಕಡ್ಡಾಯವಾಗಿ ಹಾಜರಾಗುತ್ತಿದ್ದ ನಡಹಳ್ಳಿ ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷ ಎನ್ನದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದು, ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆಗೆ ಗರಬಡಿದಂತಾಗಿದೆ ಎಂದು ಸ್ವತಃ ಬಿಜೆಪಿ ಶಾಸಕರೇ ಮಾತನಾಡಿಕೊಳ್ಳುತ್ತಿದ್ದಾರೆ.

ನೀರಾವರಿ, ಕೃಷಿ, ಕೈಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗೃಹ ಸೇರಿದಂತೆ ಪ್ರತಿಯೊಂದು ಇಲಾಖೆಯ ಬಗ್ಗೆ ಎದೆಗಾರಿಕೆಯಿಂದ ಮಾತನಾಡುತ್ತಿದ್ದ ನಡಹಳ್ಳಿ ಅವರು ಈ ಬಾರಿ ಇಲ್ಲದಿರುವುದು ಚರ್ಚೆ ಅರ್ಥವನ್ನೇ ಕಳೆದುಕೊಂಡಿದೆ ಎಂಬ ಮಾತುಗಳು ರಿಂಗಣಿಸುತ್ತಿಲೆ.

ಕಳೆದ ಅಧಿವೇಶನದ ವೇಳೆ ಅವರು ಕೃಷ್ಣಾ, ಮಲಪ್ರಭಾ ಸೇರಿದಂತೆ ಉತ್ತರ ಕರ್ನಾಟಕದ ನೀರಾವರಿ ವಿಷಯಗಳ ಕುರಿತು ಅಂಕಿ-ಸಂಖ್ಯೆಗಳ ಸಮೇತ ಮಾತನಾಡುತ್ತಿದ್ದರು. ಅವರು ಮಾತನಾಡುವ ಸಂದರ್ಭದಲ್ಲಿ ಇಡೀ ಸದನದ ಸದಸ್ಯರೆಲ್ಲರೂ ತದೇಕಚಿತ್ತದಿಂದ ಆಲಿಸುತ್ತಿದ್ದರು. ಪಕ್ಷಭೇದ ಮರೆತು ಉತ್ತರಕರ್ನಾಟಕ ಅಭಿವೃದ್ಧಿ ಬಗ್ಗೆ ಅವರು ಮಾತನಾಡುತ್ತಿದ್ದು ಎಂಥವರನ್ನೂ ನಿಬ್ಬೆರರಾಗಿಸುತ್ತಿತ್ತು.

ಉತ್ತರಕರ್ನಾಟಕದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕೃಷಿ ಸಮಸ್ಯೆಗಳು, ಕೃಷಿ ಬಿಕ್ಕಟ್ಟು, ಅನ್ನದಾತರ ಯೋಜನೆಗಳು ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದರು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಕನಿಷ್ಠ ಪಕ್ಷ ಒಂದು ತಿಂಗಳು ಅಧಿವೇಶನವನ್ನು ನಡೆಸಬೇಕೆಂದು ಅವರು ಒತ್ತಾಯಿಸಿದ್ದರು.

ಕಳೆದ ಆರು ದಶಕಗಳಿಂದ ಉತ್ತರ ಕರ್ನಾಟಕ ಅಭಿವೃದ್ಧಿ ಕಾಣದಿರುವುದು ಜನಗಣತಿ ವರದಿ, ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪವಾಗಿದೆ. ಈ ಬಗ್ಗೆ ಚರ್ಚೆ ನಡೆಸಲು ಬೆಳಗಾವಿ ಸುವರ್ಣ ಸೌಧದಲ್ಲಿ 30 ದಿನಗಳ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದ ಅವರು, ಸರ್ಕಾರ ಮಾತು ತಪ್ಪಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ವಿಚಾರದಲ್ಲಿ ಸಿದ್ದರಾಮಯ್ಯ ಸೇರಿದಂತೆ ಈಗಿನ ಅನೇಕ ಮಂತ್ರಿಗಳು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆ ನಡೆಸಿದ್ದರು. ಅಧಿಕಾರಕ್ಕೆ ಬಂದಲ್ಲಿ ಐದು ವರ್ಷದಲ್ಲಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು.

ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಸದನದ ಗಮನ ಸೆಳೆದಿದ್ದರು. ಹೈದರಾಬಾದ್ ಪ್ರದೇಶದ ಅಭಿವೃದ್ಧಿಗಾಗಿ 371 ಜೆ ಕಲಂ ಅನುಷ್ಠಾನಕ್ಕೆ ಸರಕಾರ ನಿರ್ಲಕ್ಷ್ಯ ತೋರಿಸುತ್ತಿದೆ. ಮೀಸಲು ಹಂಚಿಕೆಯಾಗುವವರೆಗೆ ನೇಮಕ ಮಾಡಬಾರದೆಂದು ಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಸಚಿವ ಎಚ್.ಕೆ.ಪಾಟೀಲರೇ ತಡೆ ತೆರವುಗೊಳಿಸದೆ ಹೈ-ಕ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ.

ಅವರ ನೇತೃತ್ವದಲ್ಲಿ ಸಂಪುಟ ಸಮಿತಿ ರಚಿಸಿರುವುದು ವಿಷಾದನೀಯ ಎಂದು ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರು ಆರೋಪಿಸಿರುವುದು ಅತ್ಯಂತ ಗಂಭೀರ ವಿಷಯ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಸರಕಾರದ 18 ಪ್ರಮುಖ ಇಲಾಖೆಗಳನ್ನು ಬೆಳಗಾವಿ ಸುವರ್ಣಸೌಧಕ್ಕೆ ವರ್ಗಾಯಿಸಬೇಕೆಂದು ಬೆಳಗಾವಿ ಅಧಿವೇಶನದಲ್ಲಿ ಆಗ್ರಹಿಸಲಾಗಿತ್ತು. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರಕ್ಕೆ ಚಳಿ ಬಿಡಿಸಿದ್ದರು.

ಉತ್ತರ ಕರ್ನಾಟಕದ ಅಸಮಾನತೆ ಹೋಗಲಾಡಿಸಲು 30 ಸಾವಿರ ಕೋಟಿ ರೂ. ಮೊತ್ತದಲ್ಲಿ ಯೋಜನೆ ರೂಪಿಸಲು ಪಕ್ಷಾತೀತವಾಗಿ ಶಾಸಕರು ಆಗ್ರಹಿಸಿದ್ದರು. ಧಾರವಾಡದ ಸಂಸ್ಥೆಯೊಂದರಿಂದ ಸಮೀಕ್ಷೆ ನಡೆಸಿ ಅಸಮಾನತೆ ಹೋಗಲಾಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಈಡೇರಿಲ್ಲ ಎಂದು ಆರೋಪಿಸಿದ್ದರು.
ಈಗ ಪ್ರಸ್ತುತ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅನೇಕ ಶಾಸಕರು ಮಾತನಾಡಿದರಾದರೂ ನಡಹಳ್ಳಿ ಶೈಲಿಯಲ್ಲಿ ಸರ್ಕಾರವನ್ನು ಪರಿಣಾಮಕಾರಿಯಾಗಿ ಎಚ್ಚರಿಸುವ ಕೆಲಸ ಮಾಡುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

RELATED ARTICLES

Latest News