ಬೆಳಗಾವಿ,ಡಿ.18- ಸಾರಿಗೆ ಇಲಾಖೆಯಲ್ಲಿ ಒಟ್ಟು 9 ಸಾವಿರ ಸಿಬ್ಬಂದಿ ನೇಮಕಕ್ಕೆ ಅನುಮತಿ ಸಿಕ್ಕಿದ್ದು, ಇದರಲ್ಲಿ 4 ಸಾವಿರ ಸಿಬ್ಬಂದಿ ನೇಮಕ ಪ್ರಕ್ರಿಯೆ ಶುರುವಾಗಿದೆ ಎಂದು ಸಾರಿಗೆ ಸಚಿವರು ವಿಧಾನಪರಿಷತ್ಗೆ ತಿಳಿಸಿದರು. ವಿಧಾನಪರಿಷತ್ನಲ್ಲಿ ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪರವಾಗಿ ಉತ್ತರಿಸಿದ ಸಚಿವ ಸಂತೋಷ್ ಲಾಡ್, ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಬೇಕೆಂಬ ಬೇಡಿಕೆ ಇತ್ತು. ಪ್ರಾರಂಭದಲ್ಲಿ ಒಟ್ಟು 9 ಸಾವಿರ ಸಿಬ್ಬಂದಿಗಳ ನೇಮಕಾತಿಗೆ ಅರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಇದರಲ್ಲಿ 4 ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಪ್ರಕ್ರಿಯೆ ಮುಂದುವರೆದಿದೆ ಎಂದರು.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 1346 ಹೊಸ ಬಸ್ಗಳ ಖರೀದಿ ಪ್ರಕ್ರಿಯೆಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಈಗಾಗಲೇ 1304 ಬಸ್ಗಳನ್ನು ಖರೀದಿಸಲಾಗಿದೆ. ಉಳಿದಿರುವ ಬಸ್ಗಳನ್ನು ಆರ್ಥಿಕ ಇಲಾಖೆ ಅನುಮೋದನೆ ಪಡೆದು ಖರೀದಿಸುತ್ತೇವೆ ಎಂದು ವಿವರಿಸಿದರು.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ಇಲಾಖೆಗೆ ಪ್ರತಿ ದಿನ 16 ಕೋಟಿ ಲಾಭ ಬರುತ್ತಿದೆ. 375 ಕೋಟಿ ಜಿಎಸ್ಟಿಗೆ ಸಂದಾಯವಾಗುತ್ತದೆ. ಶೇ.5ರಷ್ಟು ಮಹಿಳಾ ಉದ್ಯೋಗಗಳು ಏರಿಕೆಯಾಗಿವೆ ಎಂದು ವಿವರಿಸಿದರು. ಬೆಂಗಳೂರು ಭಾಗದಲ್ಲಿ ಉದ್ಯೋಗಸ್ಥ ಮಹಿಳೆಯರು 1100ರಿಂದ 1200ರವರೆಗೆ ಲಾಭವನ್ನು ಪಡೆಯುತ್ತಿದ್ದಾರೆ. ಇದು ನಮ ಸರ್ಕಾರದ ಸಾಧನೆ ಎಂದು ತಿಳಿಸಿದರು.
ಶಕ್ತಿ ಯೋಜನೆ ಬರುವ ಮುನ್ನ ಪ್ರತಿ ದಿನ 96 ಲಕ್ಷ ಮಂದಿ ಬಸ್ಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಯೋಜನೆ ಆರಂಭವಾದ ನಂತರ 1.16 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಈಗ ಪ್ರಸ್ತುತ ಇದು 1.33 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ 60 ಲಕ್ಷ ಮಹಿಳೆಯರೇ ಎಂಬುದು ವಿಶೇಷ ಎಂದು ಪ್ರಶಂಸಿಸಿದರು.
ಹಿಂದೆ ಒಂದೂವರೆ ಲಕ್ಷ ಪ್ರಯಾಣಿಕರು ಪ್ರಯಾಣಿಸಿದರೆ, 1700 ಟ್ರಿಪ್ಗಳು ಇರುತ್ತಿದ್ದವು. ಈಗ ಇದರ ಸಂಖ್ಯೆ 1950ಕ್ಕೆ ಏರಿಕೆಯಾಗಿದೆ. ಶಕ್ತಿ ಯೋಜನೆ ಪ್ರಾರಂಭಕ್ಕೂ ಮುನ್ನ 21,569 ಸರ್ವೀಸ್ ನೀಡಲಾಗುತ್ತಿತ್ತು. ಹಿಂದೆ ಪ್ರತಿದಿನ 65 ಸಾವಿರ ಕಿ.ಮೀ ಪ್ರಯಾಣಿಸಿದರೆ ಪ್ರಸ್ತುತ 71 ಸಾವಿರ ಕಿ.ಮೀಗೆ ಏರಿಕೆಯಾಗಿದೆ.
ಪ್ರತಿ ವರ್ಷ ರೈಲ್ವೆಯಲ್ಲಿ 600 ಕೋಟಿ ಜನಸಂಖ್ಯೆ ಪ್ರಯಾಣಿಸಿದರೆ ಸಾರಿಗೆ ಸಂಸ್ಥೆಗಳಲ್ಲಿ ಸರಿಸುಮಾರು 300 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇಡೀ ದೇಶದಲ್ಲೇ ನಮ ಸಾರಿಗೆ ಸಂಸ್ಥೆಗೆ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು. ಶಕ್ತಿ ಯೋಜನೆಯಿಂದ ಕೆಲವು ಕಡೆ ಶಾಲಾ ಮಕ್ಕಳಿಗೆ ತೊಂದರೆಯಾಗಿರುವುದು ನಿಜ. ಆದರೂ ಅವರಿಗೆ ತೊಂದರೆಯಾಗದಂತೆ ಸರ್ಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ
ಕೊಟ್ಟರು.