ಬೆಂಗಳೂರು, ಡಿ.18- ವಿವಿಧೋದ್ದೇಶಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರು ಜಿಲ್ಲಾ ಅಂಗನ ವಾಡಿಯ ಸಾವಿರಾರು ನೌಕರರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಬೆಂ.ನಗರ ಜಿಲ್ಲಾ ಅಧ್ಯಕ್ಷ ಲೀಲಾವತಿ, ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂ ಮಾಡಿ ಎಂದು ಪ್ರತಿಭಟಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂಗನವಾಡಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ಸಂಬಳ ಹೆಚ್ಚಿಸುವುದಾಗಿ ತಿಳಿಸಿದರು. ಆದರೆ ಯಾವುದೇ ರೀತಿಯಲ್ಲೂ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ, ಪೂರಕ ಪೌಷ್ಟಿಕ ಆಹಾರದ ಬದಲು ಸಂಪೂರ್ಣ ಆಹಾರ, ಮ.ಮ.ಇ.14 ಐಸಿಡಿ 2023ರ ಅದೇಶದ ಪ್ರಕಾರ ಕೂಡಲೇ ಗ್ರಾಜ್ಯುಟಿ ಅನುದಾನದ ಬಿಡುಗಡೆ ಮಾಡಿ ಮತ್ತು ಎಲ್ಲರಿಗೂ ಅನ್ವಯಿಸಿ ಎಂದು ಒತ್ತಾಯಿಸಿದರು.
ಮುಂಗಡವಾಗಿ ಕರೆನ್ಸಿ ಹಣ, ಕೋಳಿ ಮೊಟ್ಟೆ, ಬಾಡಿಗೆ, ಗ್ಯಾಸ್, ತರಕಾರಿ, ಕಾಂಟೆಜಿನ್ಸಿ ಬಿಲ್ಗಳನ್ನು ಹಾಕದೇ ಫಲಿತಾಂಶ ಕೇಳಬಾರದು, ಘೋಷಣ್ ಟ್ರಾಕರ್ನ ತಾಂತ್ರಿಕ ಮತ್ತು ಪ್ರಾಯೋಗಿಕ ಸಮಸ್ಯೆಗಳನ್ನು ಬಗೆಹರಿಸಬೇಕು.
ಇಲಾಖೆ ನಡೆಸುವ ಮಾಸಿಕ ಮತ್ತು ಗೌರವಧನದ ಸಭೆಗಳಲ್ಲಿ ಅಂಗನವಾಡಿ ನೌಕರರಿಗೆ ಕುರ್ಚಿ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಮನವಿ ಮಾಡಿದರು.