ಬೆಳಗಾವಿ,ಡಿ.19- ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಪಮಾನ ಮಾಡಿದ್ದಾರೆ ಎನ್ನಲಾದ ಆರೋಪ ವಿಧಾನಪರಿಷತ್‌ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು, ಪ್ರಶ್ನೋತ್ತರ ಅವಧಿಯನ್ನು ಪ್ರಾರಂಭಿಸಲು ಮುಂದಾದರು.
ಈ ವೇಳೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಕೈಯಲ್ಲಿ ಅಂಬೇಡ್ಕರ್ ಅವರ ಪೋಟೋ ಹಿಡಿದುಕೊಂಡು ಪ್ರತಿಭಟನೆ ನಡೆಸಲು ಮುಂದಾದರು.ಅಂಬೇಡ್ಕರ್ ಅವರಿಗೆ ಅಮಿತ್ ಷಾ ಅಪಮಾನ ಮಾಡಿದ್ದಾರೆ. ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ತಿರುಗೇಟು ನೀಡಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಿ.ಟಿ.ರವಿ ಸೇರಿದಂತೆ ಹಲವಾರು ಸದಸ್ಯರು ಇದರ ಬಗ್ಗೆ ವಿಸ್ತೃತ ಚರ್ಚೆಯಾಗಲಿ. ನಾವು ಹೆದರಿಕೊಂಡು ಹೋಗುವುದಿಲ್ಲ ಎಂದು ತಿರುಗೇಟು ನೀಡಿದರು.
ಹರಿಪ್ರಸಾದ್ ಬೆಂಬಲಕ್ಕೆ ನಿಂತ ಗೃಹ ಸಚಿವ ಪರಮೇಶ್ವರ್, ಬೋಸರಾಜು ಸೇರಿದಂತೆ ಹಲವಾರು ಸದಸ್ಯರು ಚರ್ಚೆಯಾಗಲಿ. ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಮಿತ್ ಷಾ ಅಪಮಾನ ಮಾಡಿದ್ದಾರೆ. ಕೂಡಲೇ ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಡಾ. ಜಿ.ಪರಮೇಶ್ವರ್ ಮಾತನಾಡಿ, ಬಿಜೆಪಿಯ ಹಿಡನ್ ಅಜೆಂಡಾ ಕೊನೆಗೂ ಏನೆಂಬುದು ಇದರಿಂದಲೇ ಗೊತ್ತಾಗಿದೆ. ಸಂವಿಧಾನ ಎಂದರೆ ಇವರಿಗೆ ಒಂದು ರೀತಿಯಲ್ಲಿ ಅಲರ್ಜಿ. ಕೇಂದ್ರದ ಗೃಹ ಸಚಿವರೇ ಈ ರೀತಿಯಲ್ಲಿ ಹೇಳಿಕೆ ನೀಡಿದರೆ, ಸಂವಿಧಾನ ರಕ್ಷಣೆ ಮಾಡುವವರು ಯಾರು?, ಮೊದಲು ಅವರು ದೇಶದ ಜನತೆಯ ಕ್ಷೆಮೆ ಕೇಳಬೇಕು ಎಂದು ಒತ್ತಾಯ ಮಾಡಿದರು.
ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರು ಕಾಂಗ್ರೆಸ್ ಪಕ್ಷದವರು. ಚುನಾವಣೆಯಲ್ಲಿ ಸೋಲಿಸಿದವರು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ತಿರುಗೇಟು ಕೊಟ್ಟರು.
ಕಾಂಗ್ರೆಸ್ ನಾಯಕರು ತಿರುಚಿದ ವಿಡಿಯೋವನ್ನು ಬಿತ್ತರಿಸಿದೆ. ಮೂಲ ವಿಡಿಯೋವನ್ನು ಸದನದಲ್ಲಿ ಹಾಕಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.ಇವರ ನಾಟಕಕ್ಕೆ ಅಸ್ಕರ್ ಪ್ರಶಸ್ತಿ ಕೊಡಬೇಕು. ಚರ್ಚೆಯಲ್ಲಿ ಭಾಗವಹಿಸಲು ನಮಗೂ ಅವಕಾಶ ಕೊಡಿ ಎಂದು ಒತ್ತಾಯ ಮಾಡಿದರು.ಆಗ ಸಭಾಪತಿ ಅವರು ಪ್ರಶ್ನೋತ್ತರ ಅವಧಿ ಮುಗಿದ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.