Thursday, December 19, 2024
Homeರಾಜ್ಯನಾಳೆಯಿಂದ ಸಕ್ಕರೆ ನಾಡು ಮಂಡ್ಯದಲ್ಲಿ ಕನ್ನಡದ ಹಬ್ಬ

ನಾಳೆಯಿಂದ ಸಕ್ಕರೆ ನಾಡು ಮಂಡ್ಯದಲ್ಲಿ ಕನ್ನಡದ ಹಬ್ಬ

Mandya all set to host Sahitya Sammelana from Dec 20

ಬೆಂಗಳೂರು,ಡಿ.19- ಕನ್ನಡದ ಹಬ್ಬಕ್ಕೆ ಸಕ್ಕರೆಯ ನಾಡು ಮಂಡ್ಯ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ನಾಳೆಯಿಂದ ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಮಂಡ್ಯ ನಗರ ಸರ್ವಾಲಂಕೃತಗೊಂಡಿದೆ. ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ರಾಜ್ಯ, ದೇಶ-ವಿದೇಶಗಳಿಂದ ಅಗಮಿಸುವ ಕನ್ನಡಿಗರನ್ನು, ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ಎತ್ತರೆತ್ತರದ ಕಟೌಟ್ಗಳು ಮೇಳೈಸುತ್ತಿವೆ.

ಸಮೇಳನಾಧ್ಯಕ್ಷರನ್ನು ಸ್ವಾಗತಿಸುವ ಕಮಾನುಗಳು, ರಾಜಕೀಯ ಮುಖಂಡರುಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳನ್ನು ಹಾಕಿ ಶೃಂಗರಿಸಲಾಗಿದೆ.
ಸಮೇಳನಾಧ್ಯಕ್ಷ ಗೊ.ರೂ.ಚನ್ನಬಸಪ್ಪ ಇಂದು ಸಂಜೆ ಮಂಡ್ಯಕ್ಕೆ ಆಗಮಿಸಲಿದ್ದು, ಸ್ವಾಗತಕ್ಕೆ ವೇದಿಕೆ ಸಜ್ಜಾಗಿದೆ. ಶುಕ್ರವಾರ ಬೆಳಿಗ್ಗೆ 6ಕ್ಕೆ ಧ್ವಜಾರೋಹಣ ನೆರವೇರಲಿದ್ದು, 7 ಗಂಟೆಗೆ ಸಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ.

ನಾಡಿನ ಸಾಂಸ್ಕೃತಿಕ ಜಾನಪದ ಕಲಾತಂಡಗಳೊಂದಿಗೆ ಸಮೇಳನಾಧ್ಯಕ್ಷರನ್ನು ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಹಗಲುವೇಷ, ಮಹಿಳಾ ವೀರಗಾಸೆ, ಕೋಲಾಟ, ಸುಗ್ಗಿ ಕುಣಿತ, ಕಂಸಾಳೆ ಸೇರಿ 60ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

300ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಮೈಸೂರು ರಾಜವಂಶಸ್ಥರಾದ ರಾಜಮಾತೆ ಪ್ರಮೋದಾದೇವಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಕ್ಕರೆಯ ಅಕ್ಕರೆಯ ನಾಡು ಮಂಡ್ಯ ಸಾಹಿತ್ಯಾಸಕ್ತರನ್ನು ಕೈಬೀಸಿ ಕರೆಯಲು ಕನ್ನಡವನ್ನು, ಸಾಹಿತ್ಯವನ್ನು ಉಣಬಡಿಸಲು ಸರ್ವರೀತಿಯಲ್ಲಿ ಸಜ್ಜಾಗಿದೆ.

ಮೂರು ದಿನಗಳ ಕಾಲ ಕನ್ನಡದ ಕಹಳೆ ಮೊಳಗಲಿದೆ. ಮೂರನೇ ಬಾರಿ ಕನ್ನಡ ಸಾಹಿತ್ಯ ಸಮೇಳನ ನಡೆಯಲಿದ್ದು, ಸಮೇಳನದ ಯಶಸ್ಸಿಗೆ ಎಲ್ಲರೂ ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ಮನೆಮನೆಗಳ ಮೇಲೆ ಕನ್ನಡ ಬಾವುಟ ರಾರಾಜಿಸುತ್ತಿದೆ. ಸಾಹಿತ್ಯ ಸಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸರ್ಕಾರಿ ನೌಕರರಿಗೆ ಎರಡು ದಿನಗಳ ಕಾಲ ಸಾಂದರ್ಭಿಕ ರಜೆ ನೀಡಲಾಗಿದೆ.

ಮಂಡ್ಯ ಜಿಲ್ಲಾ ಶಾಲಾ ಮಕ್ಕಳು ಭಾಗವಹಿಸುವ ಹಿನ್ನಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.ಗಣ್ಯರಿಗೆ ಸಾಹಿತ್ಯ ಸಮೇಳನಕ್ಕೆ ಮಂಡ್ಯದಲ್ಲಿ ನಿರ್ಮಿಸಿರುವ ಕೆಆರ್ಎಸ್ ಡ್ಯಾಂ ಮಾದರಿಯ ಪ್ರವೇಶದ್ವಾರ ಎಲ್ಲರ ಕಣನ ಸೆಳೆಯುತ್ತಿದೆ. 70 ರಿಂದ 80 ಎಕರೆ ಪ್ರದೇಶದಲ್ಲಿ ಸಮೇಳನಕ್ಕೆ ಪ್ರದಾನ ವೇದಿಕೆ ಸಿದ್ಧಪಡಿಸಲಾಗಿದೆ.

ಅದೇ ರೀತಿ ಎರಡು ಸಮಾನಾಂತರ ವೇದಿಕೆ ಮಾಡಲಾಗಿದೆ. 60 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ, 55 ವಸ್ತು ಪ್ರದರ್ಶನ ಮಳಿಗೆಗಳು, 350 ವಾಣಿಜ್ಯ ಮಳಿಗೆಗಳು, 450 ಪುಸ್ತಕ ಮಳಿಗೆಗಳು ತಲೆಎತ್ತಿವೆ. ಸಾಹಿತ್ಯ ಸಮೇಳನಕ್ಕೆ ಆಗಮಿಸುವ ಎಲ್ಲರಿಗೂ ಒಂದೇ ರೀತಿಯ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಊಟಕ್ಕೆ 100 ಕೌಂಟರ್ಗಳನ್ನು ತೆರೆಯಲಾಗಿದೆ.

RELATED ARTICLES

Latest News