ಬೆಳಗಾವಿ,ಡಿ.19- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಡಾ ಹಗರಣದ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ನಿನ್ನೆ ಸದನಕ್ಕೆ ಮೊದಲು ಬಂದಿದ್ದ ಶಾಸಕರ ಹೆಸರುಗಳನ್ನು ಉಲ್ಲೇಖಿಸಿದರು.
ಅಷ್ಟರಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ಅವರು, ನಿಲುವಳಿ ಸೂಚನೆಯಡಿ ಮುಡಾ ವಿಚಾರದ ಚರ್ಚೆಗೆ ನೋಟೀಸ್ ನೀಡಿದ್ದೇವೆ. ಚರ್ಚೆಗೆ ಅನುಮತಿ ನೀಡಬೇಕು ಎಂದು ಕೋರಿದರು.
ಆಗ ಸಭಾಧ್ಯಕ್ಷರು, ಅಧಿವೇಶನ ಮುಗಿಯತ್ತಾ ಬಂತು ಸಮಯ ಎಲ್ಲಿದೆ? ಎಂದಾಗ ಅಶೋಕ್ ಮಾತನಾಡಿ, ಯಾವಾಗ ಆದರೆ ಏನಂತೆ ಚರ್ಚೆ ನಡೆಸಬಹುದಲ್ಲವೆ ಎಂದರು. ಚರ್ಚೆಗೆ ಕೊಡುವುದಾಗಿ ಸಭಾಧ್ಯಕ್ಷರು ಹೇಳುತ್ತಿದ್ದಂತೆ ಕಾಂಗ್ರೆಸ್ ಶಾಸಕಿ ನಯನ ಮೋಟಮ ಅವರು ನಮಗೂ ಅನುಮತಿ ಕೊಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಸಭಾಧ್ಯಕ್ಷರು ಸಮತಿಸಿದರು.
ಮಧ್ಯೆ ಪ್ರವೇಶಿಸಿದ ಬಿಜೆಪಿ ಶಾಸಕ ಮುನಿರತ್ನ ನಾನು ಮೊದಲು ಸದನಕ್ಕೆ ಬಂದಿದ್ದೇನೆ. ನನ್ನ ಹೆಸರು ಹೇಳಲಿಲ್ಲ. ಮಾತನಾಡಲು ಅನುಮತಿ ಬೇಕು ಎಂದರು. ಆಗ ಸಭಾಧ್ಯಕ್ಷರು ಇಂದು ನೀವು ಮೊದಲು ಬಂದಿದ್ದರೆ, ನಾಳೆ ನಿಮ ಹೆಸರು ಹೇಳಲಾಗುವುದು, ಮಾತನಾಡಲು ಅವಕಾಶ ಕೊಡಲಾಗುವುದು ಎಂದಾಗ ಕೆಲವು ಶಾಸಕರು ನಾಳೆ ಸದನ ಇರುವುದಿಲ್ಲ ಎಂದರು.