Thursday, December 19, 2024
Homeರಾಜ್ಯಬಾಣಂತಿಯರ ಸಾವು ಪ್ರಕರಣ ನ್ಯಾಯಾಂಗ ತನಿಖೆಗೆ : ಸಚಿವ ದಿನೇಶ್ ಗುಂಡೂರಾವ್

ಬಾಣಂತಿಯರ ಸಾವು ಪ್ರಕರಣ ನ್ಯಾಯಾಂಗ ತನಿಖೆಗೆ : ಸಚಿವ ದಿನೇಶ್ ಗುಂಡೂರಾವ್

Maternal Deaths investigated by a judicial body: Minister Dinesh Gundu Rao

ಬೆಳಗಾವಿ,ಡಿ.19- ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಗೆ ತಿಳಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣ ಕುರಿತು ನಿಯಮ 69ರಡಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಾಣಂತಿಯರ ಸಾವಿಗೆ ಕಾರಣರಾದವರ ಮತ್ತು ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ನಿಯಂತ್ರಣ ತರಲು ನೀತಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.

ಭಾರತೀಯ ಫಾರ್ಮಸಿ ಕಂಪನಿಗಳಿಗೆ ಒಳ್ಳೆಯ ಹೆಸರಿದೆ. ವಿಶ್ವದಾದ್ಯಂತ ಸರಬರಾಜು ಮಾಡುತ್ತಿವೆ. ಅದೇ ರೀತಿ ಔಷಧೀಯ ಕಂಪನಿಗಳ ಲಾಬಿಯೂ ದೊಡ್ಡದಿದೆ. ಕೆಲವೊಂದು ತಪ್ಪುಗಳಾದಾಗ ಮುಚ್ಚಿಹಾಕಲಾಗುತ್ತದೆ. ಆದರೆ ನಾವು ಮುಕ್ತರಾಗಿದ್ದೇವೆ. ಈ ಸಂಬಂಧ ನ್ಯಾಯಾಂಗ ತನಿಖೆಗೆ ವಹಿಸಲು ಮುಖ್ಯಮಂತ್ರಿಯವರನ್ನು ಒಪ್ಪಿಸಲಾಗುವುದು ಎಂದರು.

ಹಿಮಾಚಲ ಪ್ರದೇಶ, ಉತ್ತರಾಖಂಡ್ ರಾಜ್ಯಗಳಲ್ಲಿ ಹೆಚ್ಚು ಔಷಧೀಯ ತಯಾರಿಕಾ ಕಂಪನಿಗಳಿವೆ. ಕಳಪೆ ಔಷಧದಿಂದ ಔಷಧ ಪಡೆದ ವ್ಯಕ್ತಿ ಮೃತಪಟ್ಟರೆ ಅಂತಹ ಕಂಪನಿಗೆ ಒಂದು ದಿನದ ಶಿಕ್ಷೆ ಮಾತ್ರ ನೀಡಲಾಗುತ್ತದೆ. ಇನ್ನೂ ಹೆಚ್ಚಿನ ಶಿಕ್ಷೆ ನೀಡಬೇಕು. ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ಅವರಿಗೆ ಕಳಪೆ ಔಷಧಿ ಪೂರೈಸಿದವರನ್ನು ಸುಮನೆ ಬಿಡಲಾಗದು.

ಒಂದು ವೇಳೆ ನಮಲ್ಲಿ ಮತ್ತು ನನ್ನಿಂದ ವೈಫಲ್ಯವಾಗಿದ್ದರೂ ಕ್ರಮವಾಗಲಿ. ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಬಳ್ಳಾರಿಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ಪ್ರಾಸಿಕ್ಯೂಷನ್ ಮಾಡುತ್ತಿದ್ದೇವೆ. ರಾಜ್ಯದ ಇತರೆಡೆ ಸಂಭವಿಸಿರುವ ಸಾವಿನ ಬಗ್ಗೆಯೂ ಮೆಡಿಕಲ್ ಆಡಿಟ್ ಮಾಡಿಸಲಾಗುತ್ತದೆ. ಈ ಪ್ರಕರಣವನ್ನು ಇಲ್ಲಿಗೇ ಕೈಬಿಡದೇ ದೊಡ್ಡ ಪ್ರಮಾಣದಲ್ಲಿ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ಬಾಣಂತಿಯರ ಸಾವಿನಿಂದ ನಮಗೂ ನೋವಾಗಿದೆ. ಕಳಪೆ ಔಷಧಿ ಪೂರೈಸಿರುವುದು ಘೋರ ಅನ್ಯಾಯ. ಎಲ್ಲರಿಗೂ ಒಂದೇ ಗುಣಮಟ್ಟದ ಔಷಧಿ ಸರಬರಾಜು ಮಾಡಬೇಕು. ಬೇರೆ ಕಡೆ ಒಂದು ರೀತಿಯ ಔಷಧಿ, ನಮಗೇ ಒಂದು ರೀತಿಯ ಔಷಧಿ ಪೂರೈಸಿದರೆ ಹೇಗೆ?, ಅವರ ಲಾಬಿ ದೊಡ್ಡದು. ಇದುವರೆಗೂ ಇಂತಹ ಪ್ರಕರಣಗಳಲ್ಲಿ ಯಾವುದೇ ಕಠಿಣ ಕ್ರಮಗಳಾಗಿಲ್ಲ.

ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾಗಿದ್ದ ಐವಿ ದ್ರಾವಣವನ್ನು ಐದು ಬಾರಿ ಪರೀಕ್ಷೆಗೆ ಒಳಪಡಿಸಿದಾಗ ಸರಿ ಎಂದು ಬಂದಿದೆ. ಆದರೆ ಆರನೇ ಬಾರಿ ಪರೀಕ್ಷೆಗೊಳಪಡಿಸಿದಾಗ ಕಳಪೆಯಾಗಿದೆ. ಈ ರೀತಿಯಾದರೆ ಎನ್ಎಬಿಎಲ್ ಮೇಲೆ ಅವಲಂಬನೆ ಮಾಡಿದರೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಈ ಪ್ರಕರಣ ಇಲ್ಲಿಗೇ ಮುಕ್ತಾಯವಾಗಬಾರದು ಎಂಬ ಕಾರಣಕ್ಕೆ ಸುದೀರ್ಘ ವಿವರಗಳನ್ನು ಒಳಗೊಂಡ ಪತ್ರವನ್ನು ಡ್ರಗ್ ಕಂಟ್ರೋಲರ್ಗೆ ಬರೆದಿದ್ದೇವೆ. ಇಂತಹ ಪ್ರಕರಣಗಳಲ್ಲಿ ಔಷಧ ನಿಯಂತ್ರಕರು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಬಳ್ಳಾರಿಯ ಆಸ್ಪತ್ರೆಯಲ್ಲಿ ನವೆಂಬರ್ನಲ್ಲಿ 34 ಸಿಜೇರಿಯನ್ ನಡೆದಿದ್ದವು. ಅವುಗಳಲ್ಲಿ 7 ಬಾಣಂತಿಯರಿಗೆ ಸಮಸ್ಯೆಯಾಗಿ ಐವರು ಮೃತಪಟ್ಟು, ಇಬ್ಬರು ಬದುಕುಳಿದಿದ್ದಾರೆ. ಈ ವಿಚಾರ ಗೊತ್ತಾದ ನಂತರ ರಾಜೀವ್ಗಾಂಧಿ ಆರೋಗ್ಯ ವಿ.ವಿ.ಯ ತಂಡದಿಂದ ಪರಿಶೀಲನೆ ಮಾಡಿಸಿ ವರದಿ ಪಡೆಯಲಾಗಿದೆ. ವೈದ್ಯರು ಸರಿಯಾಗಿ ಸೇವೆ ಮಾಡಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಔಷಧಿ ದೋಷ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಇಲ್ಲಿ ಗುಣಮಟ್ಟ ಕಳಪೆ ಎಂದು ಕಂಡುಬಂದ ಔಷಧಿಯನ್ನು ಸಿಡಿಎಲ್ನವರು ಒಳ್ಳೆಯ ಗುಣಮಟ್ಟದಿಂದ ಕೂಡಿದೆ ಎಂದು ವರದಿ ನೀಡಿದ್ದಾರೆ. ಆದರೂ ನಾವು ಈ ಔಷಧಿಯನ್ನು ಬಿಡುಗಡೆ ಮಾಡಲಿಲ್ಲ. ಈ ಔಷಧವಲ್ಲದೆ 192 ಬ್ಯಾಚ್ ಕೂಡ ಬಿಡುಗಡೆ ಮಾಡಲಿಲ್ಲ. ಮಾರ್ಚ್ ತಿಂಗಳಲ್ಲೇ ಇದರ ಪರೀಕ್ಷೆ ನಡೆಸಲಾಗಿ ದೋಷ ಕಂಡುಬಂದಿತ್ತು. ಆದರೆ ಜೂನ್ ನಂತರ ಬೇಡಿಕೆ ಹೆಚ್ಚಾಯಿತು. ಗುಣಮಟ್ಟ ಇರುವ ಔಷಧಿಯನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಅಕ್ಟೋಬರ್ವರೆಗೂ ಯಾವುದೇ ತೊಂದರೆ ಆಗಿರಲಿಲ್ಲ. ಬಳ್ಳಾರಿಯಲ್ಲಿ ಸಮಸ್ಯೆಯಾದಾಗ ಮತ್ತೆ ಪರೀಕ್ಷೆ ಮಾಡಿದಾಗ ಈ ವಿಚಾರ ಕಂಡುಬಂದಿತ್ತು ಎಂದು ಹೇಳಿದರು.

ಈ ಹಂತದಲ್ಲಿ ಮೃತಪಟ್ಟ ಬಾಣಂತಿಯರ ಮರಣೋತ್ತರ ಪರೀಕ್ಷೆ ಏಕೆ ಮಾಡಿಸಲಿಲ್ಲ?, ಮರಣೋತ್ತರ ಪರೀಕ್ಷೆ ಮಾಡದೆ ಆಸ್ಪತ್ರೆಗಳಲ್ಲಿ ಬಿಡುವುದಿಲ್ಲ ಎಂದು ಶಾಸಕ ನೇಮಿರಾಜ್ ನಾಯಕ್ ಆಕ್ಷೇಪಿಸಿದರು.

ಅದಕ್ಕೆ ಸುದೀರ್ಘ ಉತ್ತರ ನೀಡಿದ ದಿನೇಶ್ಗುಂಡೂರಾವ್ರವರು ನಾನು ಸಚಿವನಾಗಿದ್ದಾಗ ರಾಜ್ಯದಲ್ಲಿ ಶೇ.50 ರಿಂದ 60 ರಷ್ಟು ಮಾತ್ರ ಔಷಧಿ ದಾಸ್ತಾನಿತ್ತು. ಈಗ ಅದು ಶೇ.70 ರಿಂದ 80ಕ್ಕೆ ಹೆಚ್ಚಳವಾಗಿದೆ. 736 ವಿವಿಧ ಔಷಧಿಗಳಲ್ಲಿ 476 ಔಷಧಿಗಳು ಸರಬರಾಜಾಗಿವೆ. ದಾಸ್ತಾನಿಲ್ಲದ ಆಸ್ಪತ್ರೆಗಳನ್ನು ಸ್ಥಳೀಯವಾಗಿ ಖರೀದಿಸಲು ಆಸ್ಪತ್ರೆಗಳಲ್ಲಿ ಹಣವೂ ಇದೆ, ಅವಕಾಶವೂ ಇದೆ ಎಂದು ಹೇಳಿದರು.

ಈ ವರ್ಷ 1120 ವಿವಿಧ ಬಗೆಯ ಔಷಧಿಯನ್ನು ಖರೀದಿ ಮಾಡುತ್ತಿದ್ದೇವೆ. 2025-26ನೇ ಸಾಲಿಗೂ ಸೇರಿಸಿ ಟೆಂಡರ್ ಕರೆಯುತ್ತಿದ್ದೇವೆ. ಔಷಧಿ ಸರಬರಾಜಿನಲ್ಲಿ ಸುಧಾರಣೆಯಾಗಿದೆ ಎಂದು ಸಮರ್ಥಿಸಿಕೊಂಡರು.

ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ಔಷಧ ಬಳಕೆದಾರರ ಶುಲ್ಕ ಹೆಚ್ಚಳ ಮಾಡಲಾಗಿದೆ. ಉಳಿದ ಆಸ್ಪತ್ರೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿಲ್ಲ ಎಂದಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜಯನಗರದ ಆಸ್ಪತ್ರೆಯಲ್ಲೂ ದರ ಹೆಚ್ಚಳ ಮಾಡಲಾಗಿದೆ. ನಾನೇ ಖುದ್ದು ಭೇಟಿ ಕೊಟ್ಟು ಪರಿಶೀಲಿಸಿದ್ದೇನೆ ಎಂದರು.

RELATED ARTICLES

Latest News