ಬೇಲೂರು, ಡಿ.20- ಜಮೀನಿನಲ್ಲಿ ಮೆಕ್ಕೆಜೋಳ ಕಟಾವು ಮಾಡುತ್ತಿದ್ದ ಸಂದರ್ಭ ಕಾರ್ಮಿಕರೊಬ್ಬರಿಗೆ ಕೊಳಕು ಮಂಡಲದ ಹಾವು ಕಚ್ಚಿದ್ದು, ಕಚ್ಚಿದ್ದ ಹಾವನ್ನೆ ಹಿಡಿದುಕೊಂಡು ಚಿಕಿತ್ಸೆಗಾಗಿ ಬೇಲೂರಿನ ಸರ್ಕಾರಿ ಆಸ್ಪತ್ರಗೆ ಆಗಮಿಸಿದ ಘಟನೆ ನಡೆದಿದೆ.
ತಾಲೂಕಿನ ಹಾರೋಹಳ್ಳಿ ಗಡಿಯಲ್ಲಿನ ಜಮೀನಿನಲ್ಲಿ ಹಾವೇರಿ ಮೂಲದ 40 ವರ್ಷದ ಮುತ್ತು ಎಂಬುವವರು ಮೆಕ್ಕರೆ ಜೋಳವನ್ನು ಕಟಾವು ಮಾಡುತ್ತಿದ್ದರು.ಈ ಸಂದರ್ಭದಲ್ಲಿ ಜಮೀನಿನಲ್ಲಿದ್ದ ಕೊಳಕು ಮಂಡಲದ ಹಾವು ಮುತ್ತುರವರ ಕಾಲಿಗೆ ಕಚ್ಚಿದೆ.
ಇದನ್ನು ನೋಡಿದ ಮುತ್ತು ತನಗೆ ಕಚ್ಚಿದ ಹಾವನ್ನು ಹಿಡಿದು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಂಡು ನೇರವಾಗಿ ಚಿಕಿತ್ಸೆಗೆಂದು ಬೇಲೂರು ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಆದರೆ ಹಾವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತಂದಿದ್ದನ್ನು ನೋಡಿದ ಸಿಬ್ಬಂದಿ ಮತ್ತು ಜನರು ಬೆಚ್ಚಿ ಬಿದ್ದಿದ್ದಾರೆ. ನಂತರ ವೈದ್ಯಾಧಿಕಾರಿಗಳಾದ ಡಾ.ಅಕ್ಷತ್ ಹಾಗೂ ಡಾ.ರಾಜೀವ್ ಚಿಕಿತ್ಸೆ ನೀಡಿದ್ದು, ವ್ಯಕ್ತಿ ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.