ಬೆಳಗಾವಿ,ಡಿ.20- ಅಶ್ಲೀಲ ಪದಬಳಕೆಯಿಂದ ತಾವು ಶಾಕ್‌ನಲ್ಲಿದ್ದು, ಬಹಳ ದುಃಖದಲ್ಲಿದ್ದೇನೆ. ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಾದ ತಕ್ಷಣ ನನ್ನ ಸೊಸೆ ಆಸ್ಪತ್ರೆಯಲ್ಲಿದ್ದರೂ ಕೂಡ ಕರೆ ಮಾಡಿ ಅಮಾ ನೀವು ಹೋರಾಟಗಾರ್ತಿ, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ. ಮಗ ಬೆಂಗಳೂರಿನಲ್ಲಿದ್ದು, ಆತನೂ ಕರೆ ಮಾಡಿ ತಕ್ಷಣ ಹೊರಟುಬಂದಿದ್ದಾನೆ. ಕ್ಷೇತ್ರದ ಜನ ಕುಟುಂಬಸದಸ್ಯರು ನನ್ನ ಬೆನ್ನಿಗಿದ್ದಾರೆ. ಇದರ ಹೊರತಾಗಿ ನಾನು ಘಟನೆಯ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.
ಸಿ.ಟಿ.ರವಿಯವರು ರಾಹುಲ್‌ಗಾಂಧಿಯನ್ನು ಡ್ರಗ್ ಅಡಿಕ್ಟ್ ಎಂದಿದ್ದಕ್ಕೆ ನೀವು ಕೊಲೆಗಾರರು ಎಂದು ನಾನು ಪ್ರತಿಕ್ರಿಯಿಸಿದ್ದೇನೆ. ರಾಜಕಾರಣದಲ್ಲಿ ರೋಷಾವೇಷದ ಭಾಷಣ ಸಹಜ. ಆದರೆ ನಾನು ಹುಟ್ಟಿದಾಗಿನಿಂದಲೂ ಒಂದು ಇರುವೆಗೂ ತೊಂದರೆ ಕೊಟ್ಟಿಲ್ಲ. ಕೆಟ್ಟವರನ್ನು ಕಂಡರೆ ದೂರ ಇರುತ್ತೇನೆ ಎಂದು ಹೇಳಿದರು.
ರಾಜಕಾರಣದಲ್ಲಿದ್ದಾಗ ಧೈರ್ಯವಾಗಿರುವ ಅಗತ್ಯವಿದೆ. ವಿಧಾನಪರಿಷತ್ ಹಿರಿಯ ಮನೆ, ಚಿಂತಕರ ಛಾವಡಿ ಎಂದೆಲ್ಲಾ ಹೇಳಲಾಗುತ್ತದೆ. ಬುದ್ಧಿವಂತರ ವೇದಿಕೆಯಲ್ಲಿ ಸಿ.ಟಿ.ರವಿ ಇಂತಹ ಪದ ಬಳಸಿದಾಗ ಯಾರೊಬ್ಬರೂ ಖಂಡಿಸಲಿಲ್ಲ. ಅದನ್ನು ಕೇಳಿಸಿಕೊಂಡ ಬಿಜೆಪಿ ಸದಸ್ಯರು ನನ್ನ ಬಳಿ ಬಂದು ಕ್ಷಮೆ ಕೇಳಿದ್ದರು. ಆದರೆ ಖಂಡಿಸಲಿಲ್ಲ ಎಂದು ಅಳಲು ತೋಡಿಕೊಂಡರು.
ಈಗಲೂ ಕೆಲವರು ಸಿ.ಟಿ.ರವಿ ಅವರನ್ನೇ ಸಮರ್ಥಿಸಿಕೊಳ್ಳುತ್ತಿರುವುದು ಆಶ್ಚರ್ಯಕರ.
ಅವಹೇಳನಕಾರಿ ಪದ ಬಳಸಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿವೆ. ಇಂತಹ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದು ಅಚ್ಚರಿಯ ವಿಚಾರ. ಸಿ.ಟಿ.ರವಿ ನಾನು ಆ ರೀತಿ ಹೇಳಿಲ್ಲ ಎಂದು ಈಗ ನುಣುಚಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರೇ ಸಿ.ಟಿ.ರವಿ ಮಾತುಗಳನ್ನು ಕೇಳಿಸಿಕೊಂಡು ಕ್ಷಮೆ ಕೇಳುತ್ತಿರುವಾಗ ಇನ್ಯಾವ ಸಾಕ್ಷ್ಯ ಬೇಕು? ಎಂದು ಪ್ರಶ್ನಿಸಿದರು.
ನಾನು ಒಬ್ಬ ತಾಯಿ. ಹೆಣ್ಣುಮಕ್ಕಳನ್ನು ಈ ರೀತಿ ಅಪಮಾನಿಸುವ ಸಂಸ್ಕೃತಿ ಕುರಿತು ಚರ್ಚೆಯಾಗಬೇಕಿದೆ. ಮಹಿಳೆಯರು ರಾಜಕಾರಣದಲ್ಲಿ ಶಾಸಕರು ಸಂಸದರಾಗಲು ಅವಕಾಶ ಕಲ್ಪಿಸಿದ್ದು ಬಾಬಾ ಸಾಹೇಬ್ ಅಂಬೇಡ್ಕರ್. ಅವರ ವಿಚಾರವಾಗಿ ಅಪಮಾನವಾದಾಗ ನಾವು ಪ್ರತಿಕ್ರಿಯಿಸುವುದು ಅತ್ಯಗತ್ಯವಾಗಿದೆ ಎಂದರು.
ರಾಜಕಾರಣದಲ್ಲಿ ನಾನು ಸಾಮಾನ್ಯ ಕಾರ್ಯಕರ್ತರಾಗಿ ಸಚಿವರಾಗುವ ಮಟ್ಟಕ್ಕೆ ಬೆಳೆದುಬಂದಿದ್ದೇನೆ. ಸಾಕಷ್ಟು ದೃಢವಾಗಿ ನಿಂತಿದ್ದೇನೆ. ಇಂತಹ ಟೀಕೆಗಳಿಗೆ ಹೆದರುವುದಿಲ್ಲ. ಆದರೂ ಒಬ್ಬ ತಾಯಿಯಾಗಿ, ಅತ್ತೆಯಾಗಿ, ಅಕ್ಕನಾಗಿ ಅನುಭವಿಸುವ ಯಾತನೆ ಟೀಕೆ ಮಾಡುವವರಿಗೆ ಅರ್ಥವಾಗಬೇಕು ಎಂದು ಹೇಳಿದರು.