ಢಾಕಾ, ಡಿ.21- ನೆರೆಯ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದಬ್ಬಾಳಿಕೆ ಮುಂದುವರೆದಿದೆ.ಅಲ್ಲಿನ ಮೈಮೆನ್‌ಸಿಂಗ್ ಮತ್ತು ದಿನಾಜ್‌ಪುರದಲ್ಲಿರುವ ಮೂರು ಹಿಂದೂ ದೇವಾಲಯಗಳಲ್ಲಿದ್ದ ಎಂಟು ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದೇವಾಲಯವೊಂದರಲ್ಲಿ ವಿಧ್ವಂಸಕ ಕತ್ಯಕ್ಕೆ ಸಂಬಂಧಿಸಿದಂತೆ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.
ಮೈಮೆನ್‌ಸಿಂಗ್‌ನ ಹಲುಘಾಟ್ ಉಪಜಿಲ್ಲೆಯಲ್ಲಿಎರಡು ದೇವಾಲಯಗಳ ಮೂರು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹಲುಘಾಟ್ ಪೊಲೀಸ್ ಠಾಣೆಯ ಅಧಿಕಾರಿ ಅಬುಲ್ ಖಯೇರ್ ಮಾಹಿತಿ ನೀಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದರು.
ಮತ್ತೊಂದು ಘಟನೆಯಲ್ಲಿ, ಹಲುಘಾಟ್‌ನ ಬೀಳ್‌ದೊರಾ ಯೂನಿಯನ್‌ನಲ್ಲಿರುವ ಪೊಲಾಷ್‌ಕಂಡ ಕಾಳಿ ದೇವಸ್ಥಾನದಲ್ಲಿ ಅಪರಾಧಿಗಳು ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ. ಪೋಲಷ್ಕಂಡ ಗ್ರಾಮದ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಅಲಾಲ್ ಉದ್ದೀನ್ ಎಂಬಾತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಮೈಮೆನ್‌ಸಿಂಗ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಮಧ್ಯೆ ಬಾಂಗ್ಲಾದಲ್ಲಿ ಬಾಬರಿ ಮಸೀದಿ ಧ್ವಂದ ಪ್ರಕರಣದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದ್ದು, ದುಷ್ಕರ್ಮಿಗಳು ಹಿಂದೂ ವಿರೋಧಿ ಧೋರಣೆಗೆ ಕುಮಕ್ಕು ನೀಡಲು ಇಂತಹ ಕೆಲಸ ಮಾಡುತ್ತಿದ್ಧಾರೆ ಎಂದು ಆರೋಪಿಸಲಾಗಿದೆ.